ಬಂಟ್ವಾಳ: ಬಂಟ್ವಾಳ ತಾಲೂಕು ಮಟ್ಟದ ವಿಶ್ವಜನಸಂಖ್ಯಾ ದಿನಾಚರಣೆಯನ್ನು ಲಯನ್ಸ್ ಕ್ಲಬ್, ಬಿ.ಸಿ.ರೋಡ್‌ನಲ್ಲಿ ಆರೋಗ್ಯ ಇಲಾಖಾ ವತಿಯಿಂದ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮವನ್ನು ಬಂಟ್ವಾಳ ಪುರಸಭೆ ಉಪಾಧ್ಯಕ್ಷೆ ಉದ್ಘಾಟಿಸಿ ಜನಸಂಖ್ಯಾ ಸ್ಫೋಟವನ್ನು ತಡೆಗಟ್ಟುವುದು ಪ್ರತಿಯೊಬ್ಬರ ಜವಾಬ್ದಾರಿ ಹಾಗೂ ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಇನ್ನೂ ಹೆಚ್ಚಿನ ಮುತುವರ್ಜಿಯಿಂದ ಕರ್ತವ್ಯ ನಿಭಾಯಿಸಬೇಕೆಂದು ತಿಳಿಸಿದರು. ಲಯನ್ಸ್ ಕ್ಲಬ್ ಬಿ.ಸಿ. ರೋಡ್ ಇದರ ಅಧ್ಯಕ್ಷ ಉಮೇಶ್ ಆಚಾರ್ಯ ಮಾತನಾಡಿ ಏರುತ್ತಿರುವ ಜನಸಂಖ್ಯಾ ನಿಯಂತ್ರಣದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಗಳ ಪಾತ್ರ ಪ್ರಮುಖ ಎಂಬ ಸಂದೇಶ ನೀಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಡಾ|| ಪುಷ್ಪಲತಾ, ಆಡಳಿತ ವೈದ್ಯಾಧಿಕಾರಿ ತಾಲೂಕು ಆಸ್ಪತ್ರೆ ಬಂಟ್ವಾಳ, ಡಾ|| ಕಿಶೋರ್, ಶಸ್ತ್ರಚಿಕಿತ್ಸಕರು, ತಾಲೂಕು ಆಸ್ಪತ್ರೆ ಬಂಟ್ವಾಳ, ಹಾಗೂ ಶಿಶು ಅಭಿವೃದ್ಧಿ ಇಲಾಖಾ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಡಾ. ವಿಶ್ವೇಶ್ವರ ವಿ. ಕೆ., ಆಡಳಿತ ವೈದ್ಯಾಧಿಕಾರಿ, ಪ್ರಾ. ಆ. ಕೇಂದ್ರ ಅಡ್ಯನಡ್ಕ ಇವರು ಸಂಪನ್ಮೂಲ ವ್ಯಕ್ತಿಯಾಗಿ “ಕುಟುಂಬ ಯೋಜನೆ ಉಪಾಯಗಳನ್ನು ನಮ್ಮದಾಗಿಸಿ ಉನ್ನತಿಯ ಹೊಸ ಅಧ್ಯಾಯ ಬರೆಯೋಣ” ಎಂಬ ವಿಚಾರದ ಬಗ್ಗೆ ಮಾಹಿತಿ ನೀಡಿದರು. ಕುಟುಂಬ ಕಲ್ಯಾಣ ಕಾರ್ಯಕ್ರಮದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಸಾಧಕರನ್ನು ಸನ್ಮಾಯಿಸಲಾಯಿತು. ಆರೋಗ್ಯ ಇಲಾಖೆ ಸಿಬ್ಬಂದಿಗಳಿಂದ ಜನಸಂಖ್ಯಾ ನಿಯಂತ್ರಣ ಕುರಿತು ಕುಟುಂಬ ಯೋಜನೆಗಳ ಬಗ್ಗೆ ಹಾಡು, ಕಿರುನಾಟಕ ಕಾರ್ಯಕ್ರಮವಿತ್ತು. ಡಾ|| ಉಮೇಶ್ ಅಡ್ಯಂತಾಯ, ತಾಲೂಕು ಆರೋಗ್ಯಾಧಿಕಾರಿಯವರು ಸ್ವಾಗತಿಸಿ, ಶ್ರೀಮತಿ ಕುಸುಮ ವಂದಿಸಿದರು. ಶ್ರೀ ನವಾಜ್ ಕಾರ್ಯಕ್ರಮ ನಿರೂಪಿಸಿದರು. ತಾಲೂಕು ಆರೋಗ್ಯಾಧಿಕಾರಿ ಕಛೇರಿ ಸಿಬ್ಬಂದಿಗಳು, ತಾಲೂಕಿನ ಎಲ್ಲಾ ಹಿ/ಪ್ರಾ.ಆ.ಸುರಕ್ಷಾಧಿಕಾರಿಗಳು, ಆರೋಗ್ಯ ನಿರೀಕ್ಷಣಾಧಿಕಾರಿಗಳು, ಸ.ಆ.ಅಧಿಕಾರಿಗಳು ಹಾಗೂ ಆಶಾ ಕಾರ್ಯಕರ್ತೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.