ಇಡ್ಕಿದು:ರಾತ್ರಿ ಮಲಗಿದ್ದಲ್ಲೇ ವ್ಯಕ್ತಿ ಮೃತಪಟ್ಟಿದ್ದ ಪ್ರಕರಣಕ್ಕೆ ತಿರುವು:ಪ್ರಿಯಕರನೊಂದಿಗೆ ಸೇರಿ ಪತ್ನಿಯಿಂದ ಕೊಲೆ-ಆರೋಪ

0

ಸೆಂಟ್ರಿಂಗ್ ಕೆಲಸಕ್ಕೆಂದು ಬಂದು ಆಶಾ ಸ್ನೇಹ ಗಿಟ್ಟಿಸಿಕೊಂಡ ಯೋಗೀಶ

ಕುತ್ತಿಗೆಯನ್ನು ಅಮುಕಿ ಹಿಡಿದು ಉಸಿರುಗಟ್ಟಿಸಿ ಕೊಲೆ

ಪ್ರಕರಣ ದಾಖಲಿಸಿಕೊಂಡ ವಿಟ್ಲ ಪೊಲೀಸರಿಂದ ಆರೋಪಿಗಳ ಬಂಧನ

ವಿಟ್ಲ:ಬಂಟ್ವಾಳ ತಾಲೂಕು ಇಡ್ಕಿದು ಗ್ರಾಮದ ಕುಮೇರು ಎಂಬಲ್ಲಿನ ಮನೆಯಲ್ಲಿ ರಾತ್ರಿ ಮಲಗಿದ್ದ ವ್ಯಕ್ತಿಯೋರ್ವರು ಬೆಳಗ್ಗೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿರುವ ಪ್ರಕರಣ ರೋಚಕ ತಿರುವನ್ನು ಪಡೆದುಕೊಂಡಿದ್ದು, ಮೃತ ವ್ಯಕ್ತಿಯ ಪತ್ನಿಯೇ ಪ್ರಿಯಕರನೊಂದಿಗೆ ಸೇರಿಕೊಂಡು ಗಂಡನನ್ನು ಕೊಲೆ ನಡೆಸಿರುವುದು ತನಿಖೆ ವೇಳೆ ಬಹಿರಂಗಗೊಂಡಿದೆ.ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ವಿಟ್ಲ ಠಾಣಾ ಪೊಲೀಸರು ಮೃತ ವ್ಯಕ್ತಿಯ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಬಂಧಿಸಿದ್ದಾರೆ.


ಬಂಟ್ವಾಳ ತಾಲೂಕು ಇಡ್ಕಿದು ಗ್ರಾಮದ ಚೈತನ್ಯ ಕುಮೇರು ನಿವಾಸಿ ಅರವಿಂದ ಭಾಸ್ಕರ (39ವ.)ಅವರು ಕೊಲೆಯಾದವರು.ಅವರ ಪತ್ನಿ ಆಶಾ ಕೆ.(32 ವ.) ಹಾಗೂ ಆಕೆಯ ಪ್ರಿಯಕರ ಬಂಟ್ವಾಳ ತಾಲೂಕು ವಿಟ್ಲ ಪಡ್ನೂರು ಗ್ರಾಮದ ಪುರ್ಲಪ್ಪಾಡಿ ನಿವಾಸಿ ಐತಪ್ಪ ಗೌಡರ ಪುತ್ರ ಯೋಗೀಶ್ ಗೌಡ ( 34 ವ.)ಬಂಧಿತ ಆರೋಪಿಗಳು.

ಅರವಿಂದ ಭಾಸ್ಕರರವರನ್ನು ಅವರ ಪತ್ನಿ ಹಾಗೂ ಆಕೆಯ ಪ್ರಿಯಕರ ಸೇರಿಕೊಂಡು ಕುತ್ತಿಗೆ ಹಿಸುಕಿ ಕೊಲೆ ಮಾಡಿರುವುದು ಪೊಲೀಸ್ ತನಿಖೆಯಿಂದ ದೃಢ ಪಟ್ಟಿದೆ.ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಟ್ಲ ಕಸಬಾ ಗ್ರಾಮದ ಮೇಗಿನಪೇಟೆ ನಿವಾಸಿ ರಘುನಾಥರವರು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು. `ನನ್ನ ಸಂಬಂಧಿ ಅರವಿಂದ ಭಾಸ್ಕರನು ಸುಮಾರು 2 ವರ್ಷಗಳಿಂದ ಹೊಸ ಮನೆಯನ್ನು ಕಟ್ಟಲು ಆರಂಭಿಸಿದ್ದು, ಅದರ ಸೆಂಟ್ರಿಂಗ್ ಕೆಲಸವನ್ನು ಯೋಗೀಶ ಗೌಡ ನಿರ್ವಹಿಸುತ್ತಿದ್ದನು.ಈ ಮಧ್ಯೆ ಯೋಗೀಶ ಅರವಿಂದ ಭಾಸ್ಕರನ ಪತ್ನಿ ಆಶಾರೊಂದಿಗೆ ತುಂಬಾ ಅನ್ಯೋನ್ಯವಾಗಿದ್ದ.ಅರವಿಂದ ಭಾಸ್ಕರನು ಅಡಿಕೆ ಮಾರಾಟ ಮಾಡಿ ಬಂದ ಹಣವನ್ನು ದುಂದುವೆಚ್ಚ ಮಾಡುತ್ತಿದ್ದ ಬಗ್ಗೆ ಆತನ ಪತ್ನಿ ಆಕ್ಷೇಪಿಸುತ್ತಿದ್ದುದಲ್ಲದೇ, ಯೋಗೀಶ ಆಶಾ ಜೊತೆ ಸೇರಿಕೊಂಡು ಅರವಿಂದ ಭಾಸ್ಕರನಿಗೆ ಹಲ್ಲೆ ನಡೆಸುತ್ತಿದ್ದರು.ಇದರಿಂದ ಹೆದರಿ ರಾತ್ರಿ ವೇಳೆಯಲ್ಲಿ ಮನೆಯ ಕೋಣೆಯ ಬಾಗಿಲಿನ ಚಿಲಕವನ್ನು ಹಾಕಿ ಮಲಗುತ್ತಿರುವ ಬಗ್ಗೆ ಸುಮಾರು 1 ತಿಂಗಳ ಹಿಂದೆ ಆತ ನನಗೆ ತಿಳಿಸಿದ್ದ. ಫೆ.26ರಂದು ಬೆಳಿಗ್ಗೆ 8 ಗಂಟೆ ಸುಮಾರಿಗೆ ತಂದೆಯವರಿಗೆ ದೂರವಾಣಿ ಕರೆ ಮಾಡಿದ ಆಶಾ, ಪತಿ ಅರವಿಂದ ಭಾಸ್ಕರ ನಿನ್ನೆ ರಾತ್ರಿ 10 ಗಂಟೆಗೆ ಮನೆಯ ಕೋಣೆಯಲ್ಲಿ ಮಲಗಿದ್ದು, ಬೆಳಗ್ಗಿನ ಜಾವ 7.30 ಸುಮಾರಿಗೆ ನೋಡುವಾಗ ಮಲಗಿದ್ದಲ್ಲಿಂದ ಏಳುತ್ತಿಲ್ಲ ಮನೆಗೆ ಬನ್ನಿ ಎಂದು ತಿಳಿಸಿದ್ದರು.ಆ ಬಳಿಕ ಅರವಿಂದ ಭಾಸ್ಕರರವರನ್ನು ವಿಟ್ಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಬಂದ ವಿಚಾರ ತಿಳಿದು ಅಲ್ಲಿಗೆ ಹೋದಾಗ ವೈದ್ಯರು ಅರವಿಂದ ಭಾಸ್ಕರನನ್ನು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದರು.ಮೃತದೇಹದ ಸ್ಥಿತಿಗತಿಯನ್ನು ಪರಿಶೀಲಿಸಿದಾಗ, ಕುತ್ತಿಗೆಯನ್ನು ಅಮುಕಿ ಹಿಡಿದು ಉಸಿರುಗಟ್ಟಿಸಿ ಕೊಲೆ ಮಾಡಿರುವ ಸಂಶಯ ವ್ಯಕ್ತವಾಗಿದೆ’ ಎಂದು ರಘುನಾಥರವರು ವಿಟ್ಲ ಠಾಣಾ ಪೊಲೀಸರಿಗೆ ನೀಡಿದ ದೂರಿನಲ್ಲಿ ವಿವರಿಸಿದ್ದಾರೆ.


ಮೇಸ್ತ್ರಿ ಕೆಲಸ-ಹದಿನಾಲ್ಕು ವರುಷಗಳ ಹಿಂದೆ ಮದುವೆ:

ಮೇಸ್ತ್ರಿ ಕೆಲಸ ನಿರ್ವಹಿಸುತ್ತಿದ್ದ ಅರವಿಂದ ಭಾಸ್ಕರ ಸುಮಾರು ಹದಿನಾಲ್ಕು ವರುಷಗಳ ಹಿಂದೆ ಆಶಾರವರನ್ನು ವಿವಾಹವಾಗಿದ್ದರು.ಆ ಬಳಿಕದ ದಿನಗಳಲ್ಲಿ ಅನ್ಯೋನ್ಯವಾಗಿದ್ದ ದಂಪತಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಭಾಸ್ಕರರವರು ವಿಪರೀತ ಕುಡಿಯುತ್ತಿದ್ದರು.ಮನೆಯ ಅಡಿಕೆಯನ್ನು ಮಾರಾಟ ಮಾಡಿ ದುಂದು ವೆಚ್ಚಮಾಡುತ್ತಿದ್ದ ಹಿನ್ನೆಲೆಯಲ್ಲಿ ಇದಕ್ಕೆ ಆಶಾರವರು ಆಕ್ಷೇಪ ವ್ಯಕ್ತ ಪಡಿಸುತ್ತಿದ್ದರು ಮಾತ್ರವಲ್ಲದೆ ಅವರಿಬ್ಬರ ಮಧ್ಯೆ ಆಗಾಗ ಇದೇ ವಿಚಾರಕ್ಕಾಗಿ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.


ಸೆಂಟ್ರಿಂಗ್ ಕೆಲಸಕ್ಕೆ ಬಂದಿದ್ದ ಯೋಗೀಶ್:

ಹಿಂದಿನ ಹಳೆ ಮನೆಯಲ್ಲಿ ವಾಸವಾಗಿದ್ದ ಅರವಿಂದ ಭಾಸ್ಕರ ದಂಪತಿ ಹೊಸಮನೆ ನಿರ್ಮಾಣ ಮಾಡುವ ಕನಸು ಕಂಡಿದ್ದರು.ಅದರಂತೆ ಎರಡು ವರುಷಗಳ ಹಿಂದೆ ಹೊಸ ಮನೆ ನಿರ್ಮಾಣದ ಕೆಲಸ ಆರಂಭಿಸಿದ್ದರು.ಈ ಮನೆಯ ಸೆಂಟ್ರಿಂಗ್ ಕೆಲಸ ನಿರ್ವಹಿಸಲು ಬಂದಿದ್ದ ಯೋಗೀಶ್ ಹಾಗೂ ಆಶಾರವರು ಬಳಿಕದ ದಿನಗಳಲ್ಲಿ ಅನ್ಯೋನ್ಯವಾಗಿದ್ದರು ಎನ್ನುವ ಮಾಹಿತಿ ತನಿಖೆಯಿಂದ ಹೊರಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.


ಕೊಲೆ ನಡೆಸಿ ಕಥೆ ಕಟ್ಟಿದ ಆಶಾ..:

ಯೋಗೀಶ್ ಹಾಗೂ ಆಶಾರವರು ಪರಸ್ಪರ ಹತ್ತಿರವಾಗುತ್ತಿದ್ದಂತೆ ಅರವಿಂದ ಭಾಸ್ಕರರನ್ನು ದೂರ ಮಾಡುವ ಯೋಜನೆಯನ್ನು ಮಾಡಿಕೊಂಡಿದ್ದ ಅವರಿಬ್ಬರು ಆ ಸಮಯಕ್ಕಾಗಿ ಕಾಯುತ್ತಿದ್ದರು.ದಿನಂಪ್ರತಿ ಕುಡಿತದ ಚಟ ಹೊಂದಿದ್ದ ಅರವಿಂದ ಭಾಸ್ಕರರಿಂದ ವಿಮುಕ್ತಿ ಹೊಂದುವ ಯೋಚನೆಯನ್ನು ಮಾಡಿದ್ದ ಆಶಾ ಅದಕ್ಕಾಗಿ ತನ್ನ ಪ್ರಿಯಕರ ಯೋಗೀಶ್‌ನೊಂದಿಗೆ ಸೇರಿಕೊಂಡು ಪತಿಯನ್ನೆ ಮುಗಿಸುವ ಯೋಜನೆಯನ್ನು ರೂಪಿಸಿಕೊಂಡಿದ್ದರು.ಎಂದಿನಂತೆ ಅರವಿಂದ ಭಾಸ್ಕರ ಕುಡಿದು ಮಲಗಿದ ಬಳಿಕ ಅವರ ಪತ್ನಿ ಆಶಾ ಪ್ರಿಯಕರ ಯೋಗೀಶ್‌ನೊಂದಿಗೆ ಸೇರಿಕೊಂಡು ತಲೆ ದಿಂಬಿನಿಂದ ಉಸಿರುಗಟ್ಟಿಸಿ ಅರವಿಂದ ಭಾಸ್ಕರರನ್ನು ಕೊಲೆ ನಡೆಸಿದ್ದರು.ಬಳಿಕ ಯಾರಿಗೂ ಸಂಶಯ ಬರಬಾರದೆಂದು ಬೆಳಗ್ಗೆ ಎದ್ದ ಆಶಾ, ಪತಿ ರಾತ್ರಿ ಮಲಗಿದವರು ಬೆಳಗ್ಗೆ ಮೃತಪಟ್ಟ ಸ್ಥಿತಿಯಲ್ಲಿದ್ದಾರೆ ಎಂದು ಸ್ಥಳೀಯರಿಗೆ ಹಾಗೂ ಸಂಬಂಧಿಕರಿಗೆ ಮಾಹಿತಿ ನೀಡಿದ್ದರು. ತರಾತುರಿಯಲ್ಲಿ ಅಂತ್ಯ ಸಂಸ್ಕಾರಕ್ಕೂ ಮುಂದಾಗಿದ್ದರು ಎನ್ನುವ ಮಾಹಿತಿ ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದೆ.


ಸಾವಿನ ಸುತ್ತ ಸಂಶಯದ ಹುತ್ತ:

ಇತ್ತ ಬೆಳ್ಳಂಬೆಳಗ್ಗೆ ಗ್ರಾಮದ ವ್ಯಕ್ತಿಯೋರ್ವ ಅಸಹಜವಾಗಿ ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯರ ಸಹಿತ ಹಲವು ಜನರು ಮನೆಮುಂದೆ ಸೇರಿದ್ದರು.ಈ ವೇಳೆ ಅರವಿಂದ ಭಾಸ್ಕರ ಅವರ ಸಾವಿನಲ್ಲಿ ಸಂಶಯ ವ್ಯಕ್ತಪಡಿಸಿ ನೆರೆದಿದ್ದ ಸ್ಥಳೀಯರ ಸಹಿತ ಸಂಬಂಧಿಕರು ವಿಟ್ಲ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದರು.ಮಾತ್ರವಲ್ಲದೆ ಅರವಿಂದ ಭಾಸ್ಕರರವರ ಸ್ನೇಹಿತ ಮನೋಜ್ ಎಂಬವರು,ಇದು ಅಸಹಜ ಸಾವಲ್ಲ, ಆತನ ಸಾವಿನಲ್ಲಿ ಸಂಶಯವಿದೆ ಎಂದು ಆರಂಭದಲ್ಲಿ ವಿಟ್ಲ ಠಾಣಾ ಪೊಲೀಸರಿಗೆ ದೂರು ನೀಡಿದ್ದರು.


ತನಿಖೆ ಚುರುಕುಗೊಳಿಸಿದ ತಂಡಕ್ಕೆ ಲಭಿಸಿತ್ತು ಮಹತ್ವದ ಸುಳಿವು..:

ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸ್ಥಳೀಯ ಕೆಲವರು ಹಾಗೂ ಮೃತರ ಸಂಬಂಧಿಕರಿಂದ ಕೆಲವೊಂದು ಮಾಹಿತಿಯನ್ನು ಕಲೆಹಾಕಿದ್ದರು.ಈ ಮಾಹಿತಿ ಜಾಡು ಹಿಡಿದ ತನಿಖಾ ತಂಡಕ್ಕೆ ಯೋಗೀಶ್ ಹಾಗೂ ಆಶಾರವರ ನಡುವಿನ ಪ್ರೇಮಪ್ರಕರಣ ತಿಳಿದುಬಂದಿತ್ತು. ಆ ಬಳಿಕ ಆಶಾ ಹಾಗೂ ಯೋಗೀಶ್‌ರವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸಾವಿನ ರಹಸ್ಯ ಹೊರಬಿದ್ದಿತ್ತು.


ಪ್ರಕರಣ ದಾಖಲು:

ಮೃತ ವ್ಯಕ್ತಿಯ ಸಂಬಂಧಿ ರಘುನಾಥ ಎಂಬವರು ನೀಡಿದ ದೂರಿನಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ.

LEAVE A REPLY

Please enter your comment!
Please enter your name here