ವಿಟ್ಲ: ಪೆಟ್ರೋಲ್ ಬಂಕ್ ಬಳಿಯಲ್ಲಿ ನಿಲ್ಲಿಸಲಾಗಿದ್ದ ಲಾರಿಯೊಂದರಲ್ಲಿ ಅಕಸ್ಮಿಕ ಬೆಂಕಿ ಕಾಣಿಸಿಕೊಂಡು ಲಾರಿ ಹೊತ್ತಿ ಉರಿದ ಘಟನೆ ಬಂಟ್ವಾಳ ತಾಲೂಕು ಸಾಲೆತ್ತೂರು ಗ್ರಾಮದ ಕೇರಳ – ಕರ್ನಾಟಕ ಗಡಿಪ್ರದೇಶವಾದ ಕಟ್ಟತ್ತಿಲ ಮೆದು ಬಳಿಯಲ್ಲಿ ಫೆ.20ರ ತಡರಾತ್ರಿ ನಡೆದಿದೆ.
ಈ ಪೆಟ್ರೋಲ್ ಬಂಕ್ ಬಳಿ ಕೆಲವೊಂದು ಖಾಸಗಿ ಬಸ್ಸುಗಳ ಸಹಿತ ಕೇರಳ ಭಾಗದಿಂದ ಆಂದ್ರಪ್ರದೇಶಕ್ಕೆ ಮಣ್ಣು ಸಾಗಾಟ ಮಾಡುತ್ತಿದ್ದ ಲಾರಿಗಳನ್ನು ದಿನಂಪತ್ರಿ ನಿಲ್ಲಿಸಲಾಗುತ್ತಿತ್ತು. ಎಂದಿನಂತೆಯೇ ನಿನ್ನೆಯೂ ಬಂಕ್ ಪಕ್ಕದಲ್ಲಿ ಲಾರಿಗಳನ್ನು ನಿಲ್ಲಿಸಲಾಗಿತ್ತು. ರಾತ್ರಿ ಹನ್ನೊಂದು ಗಂಟೆ ಸುಮಾರಿಗೆ ಅಲ್ಲಿ ನಿಲ್ಲಿಸಲಾಗಿದ್ದ ಲಾರಿಗಳ ಪೈಕಿ ಈ ಒಂದು ಲಾರಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಇದನ್ನು ಗಮನಿಸಿದ ಸ್ಥಳೀಯರು ಬೆಂಕಿನಂದಿಸಲು ಪ್ರಯತ್ನ ಪಟ್ಟರಾದರೂ ಬೆಂಕಿಯ ಕೆನ್ನಾಲಗೆ ಹೆಚ್ಚಾಗುತ್ತಾ ಹೋಗಿರುವ ಹಿನ್ನೆಲೆಯಲ್ಲಿ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು.
ಕೂಡಲೇ ಸ್ಥಳಕ್ಕಾಗಮಿಸಿದ ಬಂಟ್ವಾಳದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳೀಯರ ಸಹಕಾರದಿಂದ ಬೆಂಕಿ ನಂದಿಸುವಲ್ಲಿ ಸಫಲರಾದರು. ಲಾರಿ ಮೂಲ್ಕಿ ನಿವಾಸಿಯೋರ್ವರಿಗೆ ಸೇರಿದ್ದಾಗಿದ್ದು, ಕೆಲದಿನಗಳ ಹಿಂದೆ ಚಾರ್ಮಡಿ ಘಾಟಿಯಲ್ಲಿ ಇದೇ ಲಾರಿಯಲ್ಲಿ ಶಾರ್ಟ್ ಸರ್ಕ್ಯೂಟ್ ಉಂಟಾಗಿತ್ತು. ಆ ಬಳಿಕ ಅದೆಲ್ಲವನ್ನು ಸರಿಪಡಿಸಿ ನಿನ್ನೆ ಕಟ್ಟತ್ತಿಲ ಮೆದು ಪೆಟ್ರೋಲ್ ಬಂಕ್ ಬಳಿ ನಿಲ್ಲಿಸಲಾಗಿದ್ದ ವೇಳೆ ಮತ್ತೆ ಬೆಂಕಿ ಹತ್ತಿಕೊಂಡಿದೆ ಎಂದು ಮಾಹಿತಿ ಲಭಿಸಿದೆ. ಘಟನೆಯಿಂದಾಗಿ ಯಾರಿಗೂ ಅಪಾಯ ಸಂಭವಿಸಿಲ್ಲ.
ಸ್ಥಳೀಯರ ಸಮಯಪ್ರಜ್ಞೆಯಿಂದ ಸಂಭವಿಸಬಹುದಾದ ಬಹುದೊಡ್ಡ ಅಪಾಯವೊಂದು ತಪ್ಪಿದೆ.