ಫೆ.11ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಪುತ್ತೂರು ಭೇಟಿ-ಕಾರ್ಯಕ್ರಮ ಅಚ್ಚುಕಟ್ಟಾಗಿ ರೂಪಿಸಲು ಸಂಸದರ ಸೂಚನೆ

0

ಕಾರ್ಯಕ್ರಮಕ್ಕಾಗಿ ನೋಡೆಲ್ ಅಧಿಕಾರಿ ನಿಯೋಜಿಸಿ
ಅಧಿಕಾರಿಗಳು ಸಿದ್ಧತೆ ಆರಂಭಿಸಿ
ಸರಕಾರಿ ಯೋಜನೆಯ ಫಲಾನುಭವಿಗಳನ್ನು ಆಹ್ವಾನಿಸಿ
ಸಹಕಾರಿ ಇಲಾಖೆಯ ಫಲಾನುಭವಿಗಳನ್ನೂ ಕರೆಸಿ
ಕಾರ್ಯಕ್ರಮದಲ್ಲಿ ಯಾವುದೇ ಲೋಪವಾಗಬಾರದು

ಮಂಗಳೂರು:ಅಂತರ್ರಾಜ್ಯ ಸಹಕಾರಿ ಸಂಸ್ಥೆ ಕ್ಯಾಂಪ್ಕೋದ ಸುವರ್ಣ ಮಹೋತ್ಸವ ವರ್ಷಾಚರಣೆ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಹಾಗೂ ಸಹಕಾರ ಸಚಿವರಾದ ಅಮಿತ್ ಶಾ ಅವರು ಫೆ.11ರಂದು ಪುತ್ತೂರಿಗೆ ಆಗಮಿಸಲಿದ್ದಾರೆ.ಮಧ್ಯಾಹ್ನ 2.30ಕ್ಕೆ ತೆಂಕಿಲದ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಮೈದಾನದಲ್ಲಿ ಕ್ಯಾಂಪ್ಕೋ ಸುವರ್ಣ ಮಹೋತ್ಸವ ವರ್ಷಾಚರಣೆಗೆ ಅವರು ಚಾಲನೆ ನೀಡಲಿದ್ದು, ಅದೇ ಸಂದರ್ಭದಲ್ಲಿ ವಿವಿಧ ಶಿಲಾನ್ಯಾಸ ಕಾರ್ಯಕ್ರಮಗಳನ್ನು ನೆರವೇರಿಸಲಿದ್ದಾರೆ.ಈ ಎಲ್ಲ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನೆರವೇರಿಸಲು ನೋಡಲ್ ಅಧಿಕಾರಿಯೊಬ್ಬರನ್ನು ನಿಯೋಜಿಸುವಂತೆ ದ.ಕ.ಸಂಸದ, ರಾಜ್ಯ ಬಿಜೆಪಿ ಅಧ್ಯಕ್ಷರೂ ಆಗಿರುವ ನಳಿನ್ ಕುಮಾರ್ ಕಟೀಲ್ ಅವರು ಜಿಲ್ಲಾಧಿಕಾರಿಯವರಿಗೆ ನಿರ್ದೇಶನ ನೀಡಿದರು.


ಕೇಂದ್ರ ಗೃಹ, ಸಹಕಾರ ಸಚಿವ ಅಮಿತ್ ಶಾ ಅವರ ಪುತ್ತೂರು ಭೇಟಿ ಹಿನ್ನೆಲೆಯಲ್ಲಿ ಫೆ.2ರಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ನಳಿನ್ ಕುಮಾರ್ ಕಟೀಲ್ ಮಾತನಾಡಿದರು.


ಕೇಂದ್ರ ಸಚಿವರಾದ ಅಮಿತ್ ಶಾ ಅವರು ಫೆ.11ರಂದು ಪುತ್ತೂರು ಭೇಟಿ ವೇಳೆ ನಾಲ್ಕು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.ಮಂಗಳೂರು ವಿಮಾನ ನಿಲ್ದಾಣದಲ್ಲಿ ರನ್ ವೇ ಸಂಬಂಧಿತ ಕಾಮಗಾರಿ ನಡೆಯುತ್ತಿರುವುದರಿಂದ ಅವರು ಹೈದರಾಬಾದ್‌ನಿಂದ ಮಧ್ಯಾಹ್ನ 12 ಗಂಟೆಗೆ ಹೊರಟು 1.10 ಗಂಟೆಗೆ ಕೇರಳದ ಕಣ್ಣೂರು ವಿಮಾನ ನಿಲ್ದಾಣಕ್ಕೆ ಆಗಮಿಸುವರು.ಅಲ್ಲಿಂದ 1.25ಕ್ಕೆ ವಿಶೇಷ ಹೆಲಿಕಾಪ್ಟರ್‌ನಲ್ಲಿ ಹೊರಟು 1.50ಕ್ಕೆ ಈಶ್ವರಮಂಗಲ ಹೆಲಿಪ್ಯಾಡ್‌ನಲ್ಲಿ ಇಳಿಯುವರು.1.30ರಿಂದ 2.30ರವರೆಗೆ ಈಶ್ವರಮಂಗಲದಲ್ಲಿ ಇದ್ದು, ಭಾರತ್ ಮಾತಾ ಮಂದಿರ ಉದ್ಘಾಟನೆ, ಪಂಚಮುಖಿ ಆಂಜನೇಯ ದೇವಸ್ಥಾನ ಸಂದರ್ಶಿಸುವರು.ಅಲ್ಲಿಂದ 2.35ಕ್ಕೆ ಹೆಲಿಕಾಪ್ಟರ್‌ನಲ್ಲಿ ಹೊರಟು 2.45ಕ್ಕೆ ಪುತ್ತೂರು ಫಿಲೋಮಿನಾ ಕಾಲೇಜು ಕ್ರೀಡಾಂಗಣದಲ್ಲಿ ಮಾಡಲಾಗುವ ಹೆಲಿಪ್ಯಾಡ್‌ಗೆ ಆಗಮಿಸುವರು.ಅಲ್ಲಿಂದ ರಸ್ತೆ ಮೂಲಕ ತೆಂಕಿಲ ಬೈಪಾಸ್ ವಿವೇಕಾನಂದ ಆಂಗ್ಲಮಾಧ್ಯಮ ಶಾಲಾ ಮೈದಾನದಲ್ಲಿ ನಡೆಯಲಿರುವ ಸಮಾವೇಶಕ್ಕೆ ತೆರಳುವರು. ಪುತ್ತೂರಿನಲ್ಲಿ ಸಂಜೆ 3 ಗಂಟೆಯಿಂದ 5.30ರ ವರೆಗೆ ಅಮಿತ್ ಶಾ ಅವರು ಇರಲಿದ್ದು, ಈ ವೇಳೆ ಕ್ಯಾಂಪ್ಕೋ ಸುವರ್ಣ ಮಹೋತ್ಸವಕ್ಕೆ ಚಾಲನೆ, ವಿವಿಧ ಉತ್ಪನ್ನಗಳ ಉದ್ಘಾಟನೆ, ಕಾಮಗಾರಿ ಶಿಲಾನ್ಯಾಸ, ಕ್ಯಾಂಪ್ಕೋ ಚಾಕಲೇಟ್ ಫ್ಯಾಕ್ಟರಿಗೆ ಭೇಟಿ ನೀಡುವರು.೫.೩೦ಕ್ಕೆ ಹೆಲಿಕಾಪ್ಟರ್ ಮೂಲಕ ಕಣ್ಣೂರಿಗೆ ತೆರಳಿ, ಅಲ್ಲಿಂದ ದೆಹಲಿಗೆ ನಿರ್ಗಮಿಸುವರು ಎಂದು ನಳಿನ್ ಕುಮಾರ್ ಕಟೀಲ್ ಅವರು ಮಾಹಿತಿ ನೀಡಿದರು.


ಅಧಿಕಾರಿಗಳು ಸಿದ್ಧತೆ ಆರಂಭಿಸಬೇಕು: ಕ್ಯಾಂಪ್ಕೋದವರೊಂದಿಗೆ ಜಿಲ್ಲಾಡಳಿತದ ಅಧಿಕಾರಿಗಳು, ಸಿಬ್ಬಂದಿಗಳು ಜೊತೆಗೂಡಿ ಈ ಎಲ್ಲಾ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ರೂಪಿಸಬೇಕು, ಲೋಕೋಪಯೋಗಿ, ಸಹಕಾರ, ಕೃಷಿ ಪೊಲೀಸ್, ಕಂದಾಯ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಸಿದ್ಧತೆಗಳನ್ನು ಆರಂಭಿಸಬೇಕು ಎಂದು ಕಟೀಲ್ ಸೂಚಿಸಿದರು.


ಸರಕಾರಿ ಯೋಜನೆಗಳ ಫಲಾನುಭವಿಗಳನ್ನು ಆಹ್ವಾನಿಸಿ: ಕೃಷಿ ಇಲಾಖೆ ವ್ಯಾಪ್ತಿಯಲ್ಲಿ ಪ್ರಧಾನಮಂತ್ರಿ ಕಿಸಾನ್ ಸನ್ಮಾನ ನಿಧಿ ಸೇರಿದಂತೆ ಕೇಂದ್ರ ಯೋಜನೆಗಳಡಿ ಸವಲತ್ತು ಪಡೆದಿರುವ ಫಲಾನುಭವಿಗಳನ್ನು ಅಂದು ಕಾರ್ಯಕ್ರಮಕ್ಕೆ ಆಹ್ವಾನಿಸಬೇಕು,ಅದೇ ರೀತಿ ಸಹಕಾರ ಇಲಾಖೆಯಿಂದಲೂ ಫಲಾನುಭವಿಗಳಾಗಿರುವವರನ್ನು ಕಾರ್ಯಕ್ರಮಕ್ಕೆ ಕರೆತರುವ ವ್ಯವಸ್ಥೆ ಮಾಡಬೇಕು ಎಂದರು.


ಯಾವುದೇ ಲೋಪವಾಗಬಾರದು: ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ಹಾಗೂ ರಾಜ್ಯ ಸಚಿವ ಸಂಪುಟದ ಸಚಿವರು ಭಾಗವಹಿಸಲಿರುವ ಹಿನ್ನೆಲೆಯಲ್ಲಿ ಯಾವುದೇ ಲೋಪದೋಷಗಳಾಗದಂತೆ ಎಚ್ಚರ ವಹಿಸಬೇಕು, ಅಗತ್ಯ ಸಾರಿಗೆ ವ್ಯವಸ್ಥೆಗಳು, ಆಹಾರ, ಕುಡಿಯುವ ನೀರು ಪೂರೈಕೆ, ಪಾರ್ಕಿಂಗ್, ಭದ್ರತೆ ಸೇರಿದಂತೆ ವಿವಿಧ ರೀತಿಯ ಅಗತ್ಯ ಕಾಮಗಾರಿಗಳನ್ನು ಕೈಗೊಳ್ಳುವಂತೆ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.


ಹೆಲಿಪ್ಯಾಡ್‌ಗೆ ಸ್ಥಳ ಪರಿಶೀಲನೆ, ರಸ್ತೆ ಗುಂಡಿ ಮುಚ್ಚಲು ಇಲಾಖೆಗೆ ಸೂಚನೆ: ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್. ಅವರು ಮಾತನಾಡಿ, ಕೇಂದ್ರ ಗೃಹ ಸಚಿವರು, ರಾಜ್ಯದ ಮುಖ್ಯಮಂತ್ರಿಗಳು ಮತ್ತು ಸಚಿವರುಗಳು ಆಗಮಿಸಲು ಅನುಕೂಲವಾಗುವಂತೆ ಈಗಾಗಲೇ ಹೆಲಿಪ್ಯಾಡ್ ನಿರ್ಮಾಣಕ್ಕೆ ಸ್ಥಳಗಳನ್ನು ಪರಿಶೀಲಿಸಲಾಗಿದೆ,ರಸ್ತೆಗಳಲ್ಲಿ ಗುಂಡಿಗಳನ್ನು ಮುಚ್ಚುವಂತೆ ಲೋಕೋಪಯೋಗಿ ಇಲಾಖೆ ಹಾಗೂ ರಾಷ್ಟ್ರೀಯ ಹೆದ್ದಾರಿಯ ಕಾರ್ಯನಿರ್ವಾಹಕ ಅಭಿಯಂತರರಿಗೆ ಸೂಚಿಸಲಾಗಿದೆ.ಕ್ಯಾಂಪ್ಕೋ ವತಿಯಿಂದ ಕಾರ್ಯಕ್ರಮಕ್ಕೆ ಆಗುತ್ತಿರುವ ಸಿದ್ಧತೆಗಳನ್ನು ಪರಿಶೀಲಿಸಲು ಜಿಲ್ಲಾಡಳಿತದ ವತಿಯಿಂದ ಅಧಿಕಾರಿಗಳ ತಂಡವನ್ನು ನಿಯೋಜಿಸಲಾಗುವುದು, ಭದ್ರತೆ ಹಾಗೂ ರಸ್ತೆ ಸುರಕ್ಷತೆಗಳನ್ನು ಪಾಲಿಸಲು ಪೊಲೀಸ್ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ.ಸರ್ಕಾರದ ಕಾರ್ಯಕ್ರಮವಾಗಿರುವುದರಿಂದ ಶಿಷ್ಟಾಚಾರದ ಅನ್ವಯ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು,ಕೃಷಿ, ಸಹಕಾರ ಇಲಾಖೆ ಫಲಾನುಭವಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಸಂಬಂಧಿಸಿದ ಇಲಾಖೆಗಳಿಗೆ ತಿಳಿಸಲಾಗಿದೆ ಎಂದು ಹೇಳಿದರು.
ಪುತ್ತೂರು ಶಾಸಕ ಸಂಜೀವ ಮಠಂದೂರು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕುಮಾರ್, ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಾಟೆ ವಿಕ್ರಂ, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಸಿಪಿ ಅನ್ಶು ಕುಮಾರ್, ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಹೆಚ್.ಕೆ.ವೇದಿಕೆಯಲ್ಲಿದ್ದರು.ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳು ಹಾಗೂ ಕ್ಯಾಂಪ್ಕೋ ಸಂಸ್ಥೆಯ ಆಡಳಿತ ನಿರ್ದೇಶಕ ಕೃಷ್ಣಕುಮಾರ್ ಹೆಚ್.ಎಂ., ಡಿವೈಎಸ್ಪಿ ವೀರಯ್ಯ ಹೀರೆಮಠ್, ಪೌರಾಯುಕ್ತ ಮಧು ಎಸ್. ಮನೋಹರ್ ಸೇರಿದಂತೆ ಹಿರಿಯ ಅಧಿಕಾರಿಗಳು ಸಭೆಯಲ್ಲಿದ್ದರು.

LEAVE A REPLY

Please enter your comment!
Please enter your name here