ಬಂಟ್ವಾಳ : ಶಾಸಕರ ಸಾಧನೆ ಮಾತನಾಡುತ್ತಿದೆ- ಬಿ.ವೈ.ವಿಜಯೇಂದ್ರ

0

ಬಂಟ್ವಾಳ: ಅಧಿಕಾರದಿಂದ ಹೊರ ಬಿದ್ದಿರುವ ಕಾಂಗ್ರೆಸ್ ಪಕ್ಷದ ಸ್ಥಿತಿ ನೀರಿನಿಂದ ತೆಗೆದ ಮೀನಿನಂತಾಗಿದ್ದು, ರಾಜ್ಯದ ಪ್ರಜೆಗಳಿಂದ ಧಿಕ್ಕರಿಸಲ್ಪಟ್ಟು ಇದೀಗ ಪ್ರಜಾ ಧ್ವನಿ ಯಾತ್ರೆ ಮಾಡುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಬಂಟ್ವಾಳ ಬಿಜೆಪಿಯ ವತಿಯಿಂದ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ನೇತೃತ್ವದಲ್ಲಿ ನಡೆಯುತ್ತಿರುವ ಗ್ರಾಮವಿಕಾಸ ಯಾತ್ರೆ- ಗ್ರಾಮದೆಡೆಗೆ ಶಾಸಕರ ನಡಿಗೆಯ 10ನೇ ದಿನದ ಪಾದಯಾತ್ರೆಯ ಬಳಿಕ ಕೊಯಿಲದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.


ಪ್ರಧಾನಿ ಮೋದಿ ಸ್ವಾರ್ಥಕ್ಕಾಗಿ ರಾಜಕಾರಣ ಮಾಡದೆ ಭಾರತವನ್ನು ಜಗತ್ತಿನ ಯಾವುದೇ ದೇಶದ ಮುಂದೆ ತಲೆ ಭಾಗದ ರೀತಿಯಲ್ಲಿ ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುತ್ತಿದ್ದಾರೆ. ಬಿ.ಎಸ್.ಯಡಿಯೂರಪ್ಪ ಹಾಗೂ ಕರಾವಳಿಗೆ ಅವಿನಾಭಾವ ಸಂಬಂಧವಿದ್ದು, ಅದರ ಪರಿಣಾಮವಾಗಿಯೇ ಬಂಟ್ವಾಳಕ್ಕೆ ಸಾವಿರ ಕೋ.ರೂ.ಗಳಿಗೆ ಮಿಕ್ಕಿದ ಅನುದಾನ ನೀಡಿದ್ದಾರೆ.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಎಲ್ಲಾ ಜಾತಿ, ಧರ್ಮದ ಜನರ ವಿಶ್ವಾಸ ಗಳಿಸಿದ ಪರಿಣಾಮ ಗೆದ್ದು ಬಂದಿದ್ದಾರೆ. ಪ್ರಸ್ತುತ ಬಂಟ್ವಾಳದಲ್ಲಿ ಅವರ ಸಾಧನೆ ಮಾತನಾಡುತ್ತಿದೆ ಎಂದು ಅವರು ಹೇಳಿದರು.

ಕಾಸರಗೋಡು ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಂಟಾರು ರವೀಶ ತಂತ್ರಿ ಸಮಾರಂಭದಲ್ಲಿ ಉಪಸ್ಥಿತರಿದ್ದು ಮಾತನಾಡಿ ಬಂಟ್ವಾಳಕ್ಕೆ ಒಬ್ಬನೇ ಸರದಾರನಾಗಿದ್ದು, ಅದು ರಾಜೇಶ್ ನಾಯ್ಕ್ ಮಾತ್ರ ಎಂಬುದನ್ನು ಜನರೇ ತೀರ್ಮಾನ ಮಾಡಿದ್ದಾರೆ ಎಂದರು.


ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು ಮಾತನಾಡಿ, ಅಭಿವೃದ್ಧಿ ಕಾರ್ಯ ನಿರಂತರವಾಗಿದ್ದು, ಶಾಂತಿಯ ಬಂಟ್ವಾಳ ನಿರ್ಮಾಣ ಮಾಡಿದ ತೃಪ್ತಿ ಇದೆ ಎಂದು ಹೇಳಿದರು.. ‌
ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್, ಮಾಜಿ ಶಾಸಕ ಎ.ರುಕ್ಮಯ ಪೂಜಾರಿ, ಕೆ.ಪದ್ಮನಾಭ ಕೊಟ್ಟಾರಿ, ನಗರ ನೀರು ಸರಬರಾಜು- ಒಳಚರಂಡಿ ಮಂಡಳಿ ನಿರ್ದೇಶಕಿ ಸುಲೋಚನಾ ಜೆ.ಕೆ.ಭಟ್, ಜಿಲ್ಲಾ ಬಿಜೆಪಿ ಮಾಧ್ಯಮ ಪ್ರಮುಖ್ ಸಂದೇಶ್ ಶೆಟ್ಟಿ, ಪಾದಯಾತ್ರೆಯ ಸಹಸಂಚಾಲಕ ಮಾಧವ ಮಾವೆ, ಸುದರ್ಶನ್ ಬಜ, ಪಂಜಿಕಲ್ಲು ಗ್ರಾ.ಪಂ.ಅಧ್ಯಕ್ಷ ಸಂಜೀವ ಪೂಜಾರಿ, ರಾಯಿ ಗ್ರಾ.ಪಂ.ಅಧ್ಯಕ್ಷೆ ರತ್ನಾ ಆನಂದ್ ಉಪಸ್ಥಿತರಿದ್ದರು.


ಪಾದಯಾತ್ರೆಯ ಸಂಚಾಲಕ ಬಿ.ದೇವದಾಸ್ ಶೆಟ್ಟಿ ಅವರು ಕ್ಷೇತ್ರದಲ್ಲಿ ರಾಜೇಶ್ ನಾಯ್ಕ್ ನಡೆಸಿದ ಅಭಿವೃದ್ಧಿ ಕಾಮಗಾರಿಗಳ ವಿವರ ನೀಡಿದರು.‌ ಕ್ಷೇತ್ರ ಕಾರ್ಯದರ್ಶಿ ರಮನಾಥ ರಾಯಿ ಸ್ವಾಗತಿಸಿದರು. ರಾಯಿ ಗ್ರಾ.ಪಂ.ಉಪಾಧ್ಯಕ್ಷ ರಶ್ಮಿತ್ ಶೆಟ್ಟಿ ಕೈತ್ರೋಡಿ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಡೊಂಬಯ ಅರಳ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here