ಬಂಟ್ವಾಳ: ಪಿಂಗಾರ ರೈತ ಉತ್ಪಾದಕರ ಸಂಸ್ಥೆಯ ಆಶ್ರಯದಲ್ಲಿ ತೆಂಗು ಕೊಯಿಲು ಪಡೆಯನ್ನು ಅಡಿಕೆ ಪತ್ರಿಕೆಯ ಕಾ.ನಿ. ಸಂಪಾದಕ ಶ್ರೀ ಪಡ್ರೆ ಜ. 2 ರಂದು
ಬೋಳಂತೂರು ಗ್ರಾಮ ಜಯರಾಮ ರೈ ಅವರ ತೆಂಗಿನ ತೋಟದಲ್ಲಿ ಚಾಲನೆ ನೀಡಿದರು.
ಪಿಂಗಾರ ಸಂಸ್ಥೆಯ ಅಧ್ಯಕ್ಷ ರಾಮ್‌ಕಿಶೋರ್ ಮಂಚಿ ಮಾತನಾಡಿ, ಕಾಯಿ ಕೊಯಿಲು ಗುಂಪನ್ನು ಇದೇ ಪ್ರಥಮವಾಗಿ ರಚಿಸಲಾಗಿದ್ದು ಇದರಲ್ಲಿ ಒಬ್ಬರು ಮೆನೇಜರ್ ಹಾಗೂ ನಾಲ್ಕು ಮಂದಿ ಕಾಯಿ ಕೀಳುವ ಶ್ರಮಿಕರು ಇರುತ್ತಾರೆ ಎಂದು ವಿವರಿಸಿದರು.
ಒಂದು ಮರಕ್ಕೆ ತಲಾ ರೂ. ೫೦ ರಂತೆ ಮಜೂರಿ ನಿಗದಿ ಮಾಡಲಾಗಿದೆ. ಪಿಂಗಾರ ಸಂಸ್ಥೆಯ ೨೫ ಕಿ.ಮೀ ವ್ಯಾಪ್ತಿಯಲ್ಲಿ ರೈತರ ಕರೆಯಂತೆ ಆದ್ಯತೆಯ ಮೇರೆಗೆ ಸ್ಥಳಕ್ಕೆ ತೆರಳಿ ಕಾಯಿ ಕೊಯಿಲು ಮಾಡಿ ಕೊಡಲಾಗುತ್ತದೆ. ದೂರದ ಪ್ರದೇಶಕ್ಕೆ ಹೋಗುವಾಗ ಪ್ರಯಾಣಕ್ಕೆ ಅನುಸರಿಸಿ ದರ ವ್ಯತ್ಯಾಸ ಆಗುವುದಾಗಿ ತಿಳಿಸಿದರು.
ಪ್ರಸ್ತುತ ಜಾರ್ಖಂಡ್ ರಾಜ್ಯದ ನಾಲ್ಕು ಮಂದಿ ತೆಂಗು ಕಾಯಿ ಕೀಳುವ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಬೇಡಿಕೆಗೆ ಅನುಸಾರವಾಗಿ ಮುಂದಿನ ಹಂತದಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುವುದಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ತೆಂಗು ಸೌಹಾರ್ದ ಸಹಕಾರಿಯ ಸಂಘ ಬಂಟ್ವಾಳ ಇದರ ಅಧ್ಯಕ್ಷ ರಾಜಾ ಬಂಟ್ವಾಳ್, ಬೊಲ್ಪು ರೈತ ಉತ್ಪಾದಕರ ಸಂಸ್ಥೆಯ ಕಾರ್ಯನಿರ್ವಹಣಾಧಿಕಾರಿ ಲೋಹಿತ್ ನೆಟ್ಲ, ಪಿಂಗಾರ ಸಂಸ್ಥೆಯ ನಿರ್ದೇಶಕರಾದ ಬಲಿಪಗುಳಿ ರಾಜಾರಾಮ್ ಭಟ್, ಕೃಷ್ಣಮೂರ್ತಿ ಕೆ., ಕೆ.ಪದ್ಮನಾಭ ಶೆಟ್ಟಿ, ರಮೇಶ್ ರಾವ್, ಪುಷ್ಪ ಎಸ್. ಕಾಮತ್, ದಿವಾಕರ ಕೆ., ಜಯಪ್ರಕಾಶ್ ನಾಯಕ್, ರಜಿತ್ ಆಳ್ವ, ಜಯರಾಮ ರೈ ಬೋಳಂತೂರು, ಕಾರ್ಯದರ್ಶಿ ಪ್ರದೀಪ್, ಸಿಬ್ಬಂದಿ ಜನಾರ್ಧನ, ಪ್ರಗತಿಪರ ಕೃಷಿಕ ಮಹಾಬಲ ರೈ ಬೋಳಂತೂರು, ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು.