ಬೆಂಗಳೂರು:ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರ ಮಾಸಿಕ ಗೌರವಧನವನ್ನು ಹೆಚ್ಚಳಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
2017ರ ಮೇ 5ರ ಆದೇಶದಂತೆ ರಾಜ್ಯದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು,ಉಪಾಧ್ಯಕ್ಷರು ಮತ್ತು ಸದಸ್ಯರಿಗೆ ಈವರೆಗೆ ನೀಡಲಾಗುತ್ತಿದ್ದ ಮಾಸಿಕ ಗೌರವಧನವನ್ನು ಇದೀಗ ದ್ವಿಗುಣಗೊಳಿಸಿ ಸರಕಾರ ಆದೇಶಿಸಿದೆ.ಗ್ರಾ.ಪಂ.ಅಧ್ಯಕ್ಷರಿಗೆ ಇಲ್ಲಿಯವರೆಗೆ ಮಾಸಿಕ 3 ಸಾವಿರ ರೂ., ಉಪಾಧ್ಯಕ್ಷರಿಗೆ ಮಾಸಿಕ 2 ಸಾವಿರ ರೂ. ಹಾಗೂ ಸದಸ್ಯರಿಗೆ ಮಾಸಿಕ 1ಸಾವಿರ ರೂ.ಗೌರವ ಧನ ನೀಡಲಾಗುತ್ತಿತ್ತು.ನೂತನ ಆದೇಶದಂತೆ ಇನ್ನುಮುಂದೆ ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ 6 ಸಾವಿರ ರೂ., ಉಪಾಧ್ಯಕ್ಷರಿಗೆ 4 ಸಾವಿರ ರೂ.ಹಾಗೂ ಸದಸ್ಯರಿಗೆ 2 ಸಾವಿರ ರೂ.ಮಾಸಿಕ ಗೌರವ ಧನ ದೊರೆಯಲಿದೆ.ಮಾಸಿಕ ಗೌರವ ಧನವನ್ನು ಹೆಚ್ಚಳಗೊಳಿಸಿ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಜಂಟಿ ಕಾರ್ಯದರ್ಶಿ(ಪಂಚಾಯತ್‌ರಾಜ್)ಎಂ.ಎಸ್.ಬಾನೊಳಿ ಅವರು ದ.18ರಂದು ಆದೇಶ ಹೊರಡಿಸಿದ್ದಾರೆ.
ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷರು ಮತ್ತು ಸದಸ್ಯರಿಗೆ ನೀಡಲಾಗುತ್ತಿರುವ ಮಾಸಿಕ ಗೌರವ ಧನವನ್ನು ಹೆಚ್ಚಳಗೊಳಿಸಬೇಕು,ಕೇರಳ ಮಾದರಿಯಲ್ಲಿ ರಾಜ್ಯದಲ್ಲಿಯೂ ಗ್ರಾಮ ಪಂಚಾಯತ್ ಚುನಾಯಿತ ಜನಪ್ರತಿನಿಧಿಗಳಿಗೆ ಸೌಲಭ್ಯ ಒದಗಿಸಬೇಕು ಎಂದು ಹಲವು ಗ್ರಾಮ ಪಂಚಾಯತ್‌ಗಳಲ್ಲಿ ಸಾಮಾನ್ಯ ಸಭೆಗಳಲ್ಲಿ ಸದಸ್ಯರಿಂದ ಬೇಡಿಕೆ ವ್ಯಕ್ತವಾಗಿ ಈ ಕುರಿತು ಸರಕಾರಕ್ಕೆ ಬರೆದುಕೊಳ್ಳಲಾಗಿತ್ತು.ಇದೀಗ ಕೊನೆಗೂ ರಾಜ್ಯ ಸರಕಾರ ಗ್ರಾಮ ಪಂಚಾಯತ್ ಚುನಾಯಿತ ಜನಪ್ರತಿನಿಧಿಗಳ ಮಾಸಿಕ ಗೌರವ ಧನವನ್ನು ಹೆಚ್ಚಳಗೊಳಿಸಿ ಆದೇಶಿಸಿದೆ.