ಸ್ಕಾಲರ್‌ಶಿಪ್ ನೀಡದೆ ಸತಾಯಿಸುತ್ತಿರುವ ಸರಕಾರ
ಬಸ್ ಪಾಸ್ ದರ ಹೆಚ್ಚಳ
ಮಂಗಳೂರು ವಿವಿ ಪರೀಕ್ಷೆ ಕಳೆದು 6 ತಿಂಗಳಾದರೂ ಬಾರದ ಫಲಿತಾಂಶ
ವಿದ್ಯಾರ್ಥಿಗಳಿಗೆ ಬಸ್ ಸಮಸ್ಯೆ
ಪುತ್ತೂರು: ವಿದ್ಯಾರ್ಥಿಗಳಿಗೆ ರಾಜ್ಯ ಮತ್ತು ಕೇಂದ್ರ ಸರಕಾರ ಸ್ಕಾಲರ್‌ಶಿಪ್ ನೀಡದೆ ಸತಾಯಿಸುತ್ತಿರುವುದನ್ನು ವಿರೋಧಿಸಿ ಎನ್‌ಎಸ್‌ಯುಐ ನೇತೃತ್ವದಲ್ಲಿ ಡಿ.17 ರಂದು ರಾಜ್ಯದ ಎಲ್ಲಾ ಕಾಲೇಜುಗಳಲ್ಲಿ ಪ್ರತಿಭಟನೆ ನಡೆಯಲಿದೆ ಎಂದು ಎನ್‌ಎಸ್‌ಯುಐ ರಾಜ್ಯ ಉಪಾಧ್ಯಕ್ಷ ಫಾರೂಕ್ ಬಾಯಬೆ ಹೇಳಿದ್ದಾರೆ.
ಡಿ.12 ರಂದು ಪುತ್ತೂರು ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರೀ ಮೆಟ್ರಿಕ್ ಹಾಗು ಪೋಸ್ಟ್ ಮೆಟ್ರಿಕ್ ಸ್ಕಾಲರ್‌ಶಿಪ್‌ಗಾಗಿ ಎನ್‌ಎಸ್‌ಪಿ ಪೋರ್ಟಲ್‌ನಲ್ಲಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಕೆ ಮಾಡಿದ್ದು, ರಾಜ್ಯ ಮತ್ತು ಕೇಂದ್ರ ಸರಕಾರ ವಿದ್ಯಾರ್ಥಿ ವೇತನ ನೀಡದೆ ಸಮಸ್ಯೆ ಮಾಡುತ್ತಿದೆ. ಈ ಸ್ಕಾಲರ್‌ಶಿಪ್‌ನ್ನು ನಂಬಿ ಶೈಕ್ಷಣಿಕ ದಾಖಲಾತಿ ಪಡೆಯುವ ವಿದ್ಯಾರ್ಥಿಗಳಿದ್ದರೂ ಕೇಂದ್ರ ಸರಕಾರ ತರಾತುರಿಯಲ್ಲಿ ಈ ವಿದ್ಯಾರ್ಥಿವೇತನ ನಿಲ್ಲಿಸಿ ದೇಶದಲ್ಲಿರುವ ಲಕ್ಷಾಂತರ ವಿದ್ಯಾರ್ಥಿಗಳ ಶೈಕ್ಷಣಿಕ ವರ್ಷ ಮಧ್ಯದಲ್ಲೇ ಡ್ರಾಪೌಟ್ ಮಾಡುವ ವಿಚಾರ ನಡೆಯುತ್ತಿದೆ ಎಂದರು.
ಇನ್ನು ಉಚಿತ ಬಸ್‌ಪಾಸ್ ನೀಡುವ ಕುರಿತು ಕರ್ನಾಟಕ ರಾಜ್ಯ ಸರಕಾರ ಘೋಷಣೆ ಮಾಡಿತ್ತು, ಆದರೆ ಇಂದು ವಿದ್ಯಾರ್ಥಿಗಳಿಗೆ 2 ತಿಂಗಳ ಅವಧಿಗೆ ತಿಂಗಳಿಗೆ ರೂ. 200 ನಂತೆ ಬಸ್‌ಪಾಸ್ ದರ ಹೆಚ್ಚಳ ಮಾಡಿ ಬಹುದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪರೀಕ್ಷೆ ಕಳೆದು 6 ತಿಂಗಳು ಕಳೆದರೂ ಇನ್ನೂ ಕೂಡ ಪರೀಕ್ಷೆ ಫಲಿತಾಂಶ ನೀಡದೆ ಸತಾಯಿಸುತ್ತಿದೆ. ಇದರಿಂದ ವಿದ್ಯಾಸಿರಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವವರಿಗೆ ತೊಂದರೆ ಉಂಟಾಗುತ್ತಿದೆ. ಜೊತೆಗೆ ದಕ್ಷಿಣ ಕನ್ನಡ, ಕಾಸರಗೋಡು, ಕೊಡಗು ಹಾಗೂ ಉಡುಪಿ ವ್ಯಾಪ್ತಿಯಲ್ಲಿ ಬರುವಂತಹ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜುಗಳ ಸಮಸ್ಯೆಗಳ ಕುರಿತು ವಿಶ್ವವಿದ್ಯಾಲಯದ ಕುಲಪತಿಗಳಿಗೆ ಮನವಿಯನ್ನು ಮಾಡಿದ್ದರೂ ಕೂಡ ಪರಿಹಾರವನ್ನು ಕಂಡುಕೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದರು.
ಪುತ್ತೂರಿನಲ್ಲಿ ವಿದ್ಯಾರ್ಥಿಗಳು ಬಸ್ ಸಮಸ್ಯೆಗಳನ್ನು ಎದುರಿಸುತ್ತಿದ್ದು, ನಮ್ಮ ಸಮಿತಿಯು ಡಿಪೋ ಮ್ಯಾನೇಜರ್‌ಗೆ ಮನವಿ ನೀಡಿದ್ದರೂ ಕೂಡ ಹಲವಾರು ಸಮಸ್ಯೆಗಳು ಇವತ್ತಿಗೂ ಕೂಡ ಉದಯಿಸುತ್ತಿವೆ. ಇವತ್ತು ಸುಳ್ಯ ಭಾಗಕ್ಕೆ ಅತೀ ಕಡಿಮೆ ಬಸ್‌ಗಳನ್ನು ಹಾಕಿ ವಿದ್ಯಾರ್ಥಿಗಳನ್ನು ಕೆಎಸ್‌ಆರ್‌ಟಿಸಿ ಸತಾಯಿಸುತ್ತಿದೆ. ಮಾಣಿ-ಕಲ್ಲಡ್ಕ ಕಡೆಯಿಂದ ಪುತ್ತೂರಿಗೆ ಬರುವ ವಿದ್ಯಾರ್ಥಿಗಳು ಸ್ಟ್ಯಾಂಡ್ ಬೋರ್ಡ್‌ನಲ್ಲಿ ವಿದ್ಯಾಭ್ಯಾಸಕ್ಕಾಗಿ ನೇತಾಡಿಕೊಂಡು ಬರುತ್ತಿದ್ದಾರೆ. ಹಿಂದಿನ ಕಾಲದಿಂದಲೂ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ದೊರಕುತ್ತಿತ್ತು ಇದರ ಮುಂದುವರೆದ ಭಾಗವಾಗಿ ಇವತ್ತು ದೇಶದಲ್ಲಿ ಹಲವಾರು ಮಧ್ಯಮ ಬಡ ವರ್ಗದ ಕುಟುಂಬಗಳಿಗೆ ಶಿಕ್ಷಣಕ್ಕೆ ಪೂರಕವಾಗಿ ಕಾಂಗ್ರೆಸ್ ಸರಕಾರ ಆರಂಭಿಸಿದಂತಹ ಈ ಸ್ಕಾಲರ್‌ಶಿಪ್ ಯೋಜನೆಯನ್ನು ನಿಲ್ಲಿಸುವುದರ ಮೂಲಕ ದೇಶದಲ್ಲಿರುವ ಬಡ, ಹಿಂದುಳಿದ ಎಸ್.ಟಿ, ಎಸ್.ಸಿ ವರ್ಗದ ವಿದ್ಯಾರ್ಥಿಗಳ ಶಿಕ್ಷಣವನ್ನು ಮೊಟಕುಗೊಳಿಸುವ ಹುನ್ನಾರವನ್ನು ಇವತ್ತು ಕೇಂದ್ರ ಬಿಜೆಪಿ ಸರಕಾರ ಮಾಡುತ್ತಿದೆ. ಇದರ ವಿರುದ್ಧ ದೊಡ್ಡಮಟ್ಟದ ಆಂದೋಲನಕ್ಕೆ ಡಿ.17ರಂದು ನಾಂದಿ ಹಾಡುತ್ತಿದ್ದೆವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಎನ್‌ಎಸ್‌ಯುಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಚಿರಾಗ್ ರೈ ಮೇಗಿನಗುತ್ತು, ದಕ್ಷಿಣಕನ್ನಡ ಜಿಲ್ಲಾ ಹಿರಿಯ ಎನ್‌ಎಸ್‌ಯುಐ ಮುಖಂಡ ಬಾತೀಷ್ ಅಳಕೆಮಜಲು, ಎನ್‌ಎಸ್‌ಯುಐನ ರಾಷ್ಟ್ರೀಯ ಸಾಮಾಜಿಕ ಜಾಲತಾಣ ಸಂಯೋಜಕ ನಝೀರ್ ಮಂಚಿ, ಪುತ್ತೂರು ಎನ್‌ಎಸ್‌ಯುಐನ ಪ್ರಧಾನ ಕಾರ್ಯದರ್ಶಿ ಎಡ್ವರ್ಡ್ ಡಿಸೋಜಾ, ಪುತ್ತೂರು ನಗರ ಎನ್‌ಎಸ್‌ಯುಐನ ಉಪಾಧ್ಯಕ್ಷ ಸ್ಪರ್ಶಿತ್ ಗೌಡ ಚಿಲ್ತಡ್ಕ ಉಪಸ್ಥಿತರಿದ್ದರು.