ವಿಟ್ಲ: ಪೆವಿಲಿಯನ್ ಎಂಬ ಭೂಮಿಕೆ ಜೇಸಿ ಶಾಲೆಯಲ್ಲಿ ಸಿದ್ಧವಾಗಿದೆ. ಶಿಕ್ಷಣ ಕೇವಲ ಮಾರ್ಕ್ ಪಡೆಯಲು ಸೀಮಿತವಲ್ಲ. ಮಕ್ಕಳಲ್ಲಿ ಹುದುಗಿರುವ ಕಲೆಗಳನ್ನು ಹೊರತೆಗೆಯುವ ಜವಾಬ್ದಾರಿ ಶಿಕ್ಷಣ ಸಂಸ್ಥೆಯದ್ದಾಗಿದೆ. ಭಾರತೀಯ ಕಲೆಗಳನ್ನು ನಾವು ಮೈಗೂಡಿಸಿಕೊಳ್ಳಬೇಕು. ನೈತಿಕ ಶಿಕ್ಷಣ ನೀಡುವ ಕೆಲಸ ಜೇಸಿ ಶಾಲೆಯಿಂದ ಆಗುತ್ತಿದೆ ಎಂದು ಪುತ್ತೂರು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜ ಹೇಳಿದರು.
ವಿಟ್ಲ ಬಸವನಗುಡಿ ವಿಠ್ಠಲ್ ಜೇಸೀಸ್ ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆಯಲ್ಲಿ ಹೊಸದಾಗಿ ನಿರ್ಮಾಣಮಾಡಲಾಗಿರುವ ಆಡಿಟೋರಿಯಂ ಜೇಸಿ ಪೆವಿಲಿಯನ್ ಅನ್ನು ಉದ್ಘಾಟನೆ ಮಾಡಿ ಮಾತನಾಡಿದರು.
ನಮ್ಮ ಕಲೆ ಸಂಸ್ಕೃತಿಯನ್ನು ಉಳಿಸಿಬೆಳೆಸಬೇಕು. ಈ ವೇದಿಕೆ ಉತ್ತಮ ಕಾರ್ಯಗಳಿಗೆ ಸಹಕಾರಿಯಾಗಲಿ. ವಿಟ್ಲದ ಪರಿಸರದಲ್ಲಿ ಇಂತಹ ಅದ್ಬುತ ಪ್ರತಿಭೆಗಳನ್ನು ಸೃಷ್ಟಿಸಿರುವ ಶಾಲೆ ನಿರ್ಮಾಣವಾಗಿರುವುದು ಸಂತಸ ತಂದಿದೆ ಎಂದರು.
ಹಾಸನ ಜನಪ್ರಿಯ ಫೌಂಡೇಶನ್ ಅಧ್ಯಕ್ಷ, ಕಂಬಳಬೆಟ್ಟುವಿನ ಜನಪ್ರೀಯ ಸೆಂಟ್ರಲ್ ಸ್ಕೂಲ್ ನ ಸಂಚಾಲಕರಾದ ಡಾ. ಅಬ್ದುಲ್ ಬಶೀರ್ ವಿ.ಕೆ. ಮಾತನಾಡಿ ಶಿಕ್ಷಣ ವ್ಯಾಪಾರೀಕರಣವಾಗಿದೆ, ಸಮಾಜದ ಉದ್ದಾರಕ್ಕಾಗಿರಬೇಕು. ಶಾಲೆಯ ಅಭಿವೃದ್ಧಿಯಲ್ಲಿ ವಿದ್ಯಾರ್ಥಿಗಳ ಪೋಷಕರ ಪಾತ್ರ ಪ್ರಮುಖವಾಗಿದೆ. ನೂರಕ್ಕೆ ನೂರು ಫಲಿತಾಂಶ ನೀಡುವಲ್ಲಿ ಶಿಕ್ಷಕರ ಪಾತ್ರ ಬಹಳಷ್ಟು ಮುಖ್ಯವಾಗಿದೆ ಎಂದರು.
ವಿಟ್ಲ ಸೈಂಟ್ ರೀಟಾ ಹೈಸ್ಕೂಲ್ ಅಧ್ಯಕ್ಷ ಸುನಿಲ್ ಪ್ರವೀಣ್ ಪಿಂಟೋ ಮಾತನಾಡಿ ಊರಿನವರ ಹಾಗೂ ಪೋಷಕರ ಸಹಕಾರ ಆಡಳಿತ ಮಂಡಳಿಯ ಜತೆಗೆ ಇದ್ದಾಗ ಸಂಸ್ಥೆ ಉತ್ತುಂಗದೆಡೆಗೆ ಸಾಗುತ್ತದೆ. ಸಮಾಜಕ್ಕೆ ಉತ್ತಮ ಶಿಕ್ಷಣ ನೀಡುವ ವಿಚಾರದಲ್ಲಿ ನಾವೆಲ್ಲರೂ ಒಟ್ಟಾಗಿ ಮುನ್ನಡೆಯೋಣ. ಜಾತಿ ಮತ ಭೇದವಿಲ್ಲದೆ ವಿದ್ಯಾರ್ಜನೆಯ ಕೆಲಸವನ್ನು ಜೇಸೀಸ್ ಆಂಗ್ಲ ಮಾಧ್ಯಮ ಶಾಲೆ ಮಾಡುತ್ತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಠ್ಠಲ್ ಜೇಸೀಸ್ ಎಜುಕೇಶನ್ ಸೊಸೈಟಿ ಅಧ್ಯಕ್ಷ ಎಲ್. ಎನ್. ಕುಡೂರು ವಹಿಸಿ ಮಾತನಾಡಿ ಬೆಳವಣಿಗೆ ಜೀವಂತಿಕೆಯ ಲಕ್ಷಣ. ಕ್ರೀಡಾ ಕ್ಷೇತ್ರದಲ್ಲೂ ನಮ್ಮ ವಿದ್ಯಾರ್ಥಿಗಳು ಮೆಲುಗೈ ಸಾಧಿಸುತ್ತಿದ್ದಾರೆ. ಕೇವಲ ೬೯ದಿನಗಳಲ್ಲಿ ಈ ಆಡಿಟೋರಿಯಂ ನ ಸ್ಥಾಪನೆಯಾಗಿದೆ. ಇದರಲ್ಲಿ ಶಟಲ್, ವಾಲಿಬಾಲ್ ಕೋರ್ಟ್ ರಚನೆಯಾಗಲಿದೆ. ಸಂಸ್ಕಾರವನ್ನು ತುಂಬುವ ಕಾರ್ಯ ನಮ್ಮ ಶಿಕ್ಷಕರಿಂದ ಆಗುತ್ತಿದೆ. ನಮ್ಮ ಬೆಳವಣಿಗೆಯಲ್ಲಿ ವಿದ್ಯಾರ್ಥಿಗಳ ಪೋಷಕರ ಪಾತ್ರವೂ ಬಹಳಷ್ಟಿದೆ. ಎಲ್ಲರೂ ಜತೆಯಾಗಿ ವಿದ್ಯಾರ್ಥಿಗಳ ಏಳಿಗೆಗಾಗಿ ಶ್ರಮಿಸೋಣ ಎಂದರು.
ಶಾಲಾ ಪ್ರಾಂಶುಪಾಲರಾದ ಜಯರಾಮ ರೈ ರವರು ಶಾಲೆ ನಡೆದು ಬಂದ ಹಾದಿ ಹಾಗೂ ವಿದ್ಯಾರ್ಥಿಗಳ ಸಾಧನೆಯ ಕುರಿತಾಗಿ ಮಾಹಿತಿ ನೀಡಿದರು.
೨೦೧೯-೨೦, ೨೦೨೦-೨೧ ನೇ ಸಾಲಿನಲ್ಲಿ ಎಸ್. ಎಸ್. ಎಲ್. ಸಿ. ಶೈಕ್ಷಣಿಕ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ವಿಟ್ಲ ಜೆಸಿಐ ಅಧ್ಯಕ್ಷ ಚಂದ್ರಹಾಸ ಕೊಪ್ಪಳ, ಆಡಳಿತ ಮಂಡಳಿಯ ಉಪಾಧ್ಯಕ್ಷ ಶ್ರೀಧರ ಡಿ. ಶೆಟ್ಟಿ, ನಿರ್ದೇಶಕರಾದ ವಿಜಯ ಪಾಯಸ್, ರಾಧಾಕೃಷ್ಣ ಪೈ ವಿಟ್ಲ, ಹಸನ್ ವಿಟ್ಲ, ಗೋಕುಲ್ ಶೇಟ್, ಶ್ರೀಪ್ರಕಾಶ್ ಕುಕ್ಕಿಲ, ಪ್ರಭಾರ ಶೆಟ್ಟಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ದೇವಕಿ ಎಂ. ಪ್ರಾರ್ಥಿಸಿದರು. ನಿರ್ದೇಶಕ ಮೋಹನ ಎ. ವಂದಿಸಿದರು. ಆಡಳಿತಾಧಿಕಾರಿ ರಾಧಾಕೃಷ್ಣ ಎ. ಕಾರ್ಯಕ್ರಮ ನಿರೂಪಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮ: ಸಾಯಂಕಾಲ ವಿಜಯಕುಮಾರ್ ಕೊಡಿಯಾಲ್ ಬೈಲ್ ಅವರ ನಿರ್ದೇಶನದಲ್ಲಿ ಕಲಾಸಂಗಮ ಕಲಾವಿದರಿಂದ ತುಳು ರಂಗಭೂಮಿಯಲ್ಲಿ ಹೊಸ ಸಂಚಲನ ಮೂಡಿಸಿದ ವಿಭಿನ್ನ ಶೈಲಿಯ ತುಳು ನಾಟಕ ‘ಶಿವದೂತೆ ಗುಳಿಗೆ’ ನಾಟಕ ಪ್ರದರ್ಶನಗೊಂಡಿತು.