ಆಧಾರ್ ದಾಖಲೆಗಳನ್ನು 10 ವರ್ಷಗಳಿಗೊಮ್ಮೆ ನವೀಕರಿಸಬೇಕು -ಕೇಂದ್ರ

0

ಪುತ್ತೂರು:ಕೇಂದ್ರ ಸರ್ಕಾರ ಆಧಾರ್ ನಿಯಮಗಳಿಗೆ ತಿದ್ದುಪಡಿ ಮಾಡಿದ್ದು, ಆಧಾರ್ ಹೊಂದಿರುವವರು ದಾಖಲಾತಿ ದಿನಾಂಕದಿಂದ 10 ವರ್ಷಗಳನ್ನು ಪೂರ್ಣಗೊಳಿಸಿದ ನಂತರ ಅದರ ದಾಖಲೆಗಳನ್ನು ಕನಿಷ್ಠ ಒಮ್ಮೆ ನವೀಕರಿಸಬೇಕು ಎಂದು ಹೇಳಿದೆ.

ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ ಹೊರಡಿಸಿದ ಗೆಜೆಟ್ ಅಧಿಸೂಚನೆಯ ಪ್ರಕಾರ, ದಾಖಲೆಗಳ ನವೀಕರಣವು ಕೇಂದ್ರೀಯ ಗುರುತುಗಳ ಡೇಟಾ ರೆಪೊಸಿಟರಿಯಲ್ಲಿ(ಸಿಐಡಿಆರ್) ಆಧಾರ್-ಸಂಬಂಧಿತ ಮಾಹಿತಿಯ ನಿಖರತೆಯನ್ನು ಖಚಿತಪಡಿಸುತ್ತದೆ.

ಆಧಾರ್ ಸಂಖ್ಯೆ ಹೊಂದಿರುವವರು, ಆಧಾರ್‌ಗಾಗಿ ದಾಖಲಾತಿ ದಿನಾಂಕದಿಂದ ಪ್ರತಿ 10 ವರ್ಷಗಳಿಗೊಮ್ಮೆ ಗುರುತಿನ ಪುರಾವೆ(ಪಿಒಐ) ಮತ್ತು ವಿಳಾಸದ ಪುರಾವೆ(ಪಿಒಎ) ದಾಖಲೆಗಳನ್ನು ಸಲ್ಲಿಸುವ ಮೂಲಕ ತಮ್ಮ ಪೂರಕ ದಾಖಲೆಗಳನ್ನು ನವೀಕರಿಸಬೇಕು.ಇದರಿಂದ  ಅವರ ಮಾಹಿತಿಯ ನಿರಂತರ ನಿಖರತೆಯನ್ನು ಖಚಿತಪಡಿಸಿಕೊಳ್ಳಬಹುದು ಎಂದು ಅದು ಹೇಳಿದೆ.ಆಧಾರ್(ನೋಂದಣಿ ಮತ್ತು ನವೀಕರಣ) ನಿಯಮಾವಳಿಗಳಿಗೆ ತಿದ್ದುಪಡಿ ಮಾಡುವ ಮೂಲಕ ಬದಲಾವಣೆಗಳನ್ನು ಮಾಡಲಾಗಿದೆ.

ಯುಐಡಿಎಐ ಮನವಿ: 10 ವರ್ಷಗಳ ಹಿಂದೆ ಆಧಾರ್ ಕಾರ್ಡ್ ಪಡೆದು, ಅಂದಿನಿಂದ ಇದುವರೆಗೆ ತಮ್ಮ ವಿವರಗಳನ್ನು ನವೀಕರಿಸದಿರುವವರು ತಮ್ಮ ಗುರುತಿನ ಮತ್ತು ವಿಳಾಸದ ದಾಖಲೆಗಳನ್ನು ನವೀಕರಿಸುವಂತೆ ಯುಐಡಿಎಐ ಈ ಮೊದಲು ಮನವಿ ಮಾಡಿತ್ತು.ಆಧಾರ್ ಸಂಖ್ಯೆಗಳನ್ನು ನೀಡುವ ಸರ್ಕಾರಿ ಸಂಸ್ಥೆ ಯುಐಡಿಎಐ, ಆಧಾರ್ ಅಪ್‌ಡೇಟ್ ಅನ್ನು ಆನ್‌ಲೈನ್‌ನಲ್ಲಿ ಮತ್ತು ಆಧಾರ್ ಕೇಂದ್ರಗಳಲ್ಲಿ ಮಾಡಬಹುದು ಎಂದು ಹೇಳಿದೆ.

10 ವರ್ಷಗಳ ಹಿಂದೆ ವಿಶಿಷ್ಟ ಗುರುತಿನ ಸಂಖ್ಯೆಯನ್ನು ಪಡೆದ ಮತ್ತು ಇದುವರೆಗೆ ಯಾವುದೇ ನವೀಕರಣ ಮಾಡದವರು ತಮ್ಮ ದಾಖಲೆಗಳನ್ನು ನವೀಕರಿಸಬೇಕು ಎಂದು ಯುಐಡಿಎಐ ಮನವಿ ಮಾಡಿದೆಯಾದರೂ, ಈ ನವೀಕರಣವು ಕಡ್ಡಾಯವಾಗಿದೆಯೇ ಎಂಬುದನ್ನು ಸ್ಪಷ್ಟಪಡಿಸಿರಲಿಲ್ಲ. ಅಗತ್ಯ ಶುಲ್ಕವನ್ನು ಪಾವತಿಸಿದ ನಂತರ ಗುರುತಿನ ದಾಖಲೆ ಮತ್ತು ನಿವಾಸದ ಪುರಾವೆಗಳ ನವೀಕರಣ ಮಾಡಲಾಗುವುದು. ನನ್ನ ಆಧಾರ್ ಪೋರ್ಟಲ್‌ನಲ್ಲಿ ಅಥವಾ ಹತ್ತಿರದ ಆಧಾರ್ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ನವೀಕರಿಸಬಹುದು ಎಂದು ಯುಐಡಿಎಐ ತಿಳಿಸಿದೆ.

LEAVE A REPLY

Please enter your comment!
Please enter your name here