ರೈತ ಸಂಘ, ಹಸಿರು ಸೇನೆ ಆಕ್ರೋಶ
ಬಂಟ್ವಾಳ: ಉಡುಪಿಯಿಂದ ಕಾಸರಗೋಡಿಗೆ ಅಪಾಯಕಾರಿ 400 ಕೆವಿ ಸಾಮಥ್ರ್ಯದ ವಿದ್ಯುತ್ ಲೈನ್ ಅಳವಡಿಸಲು ವೀರ ಕಂಭ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೃಷಿ ಜಮೀನು ಮತ್ತು ಅರಣ್ಯ ಇಲಾಖೆ ಜಮೀನಿನಲ್ಲಿ ಅ.17ರಂದು ಸರ್ವೆ ನಡೆಸುತ್ತಿರುವ ವೇಳೆ ಸ್ಥಳೀಯ ಜನಪ್ರತಿನಿಧಿಗಳು ಸಹಿತ ರೈತ ಸಂಘ ಮತ್ತು ಹಸಿರುಸೇನೆ ಆಕ್ರೋಶ ವ್ಯಕ್ತಪಡಿಸಿದೆ.
ಈಗಾಗಲೇ ತಾಲ್ಲೂಕಿನ ವಿವಿಧೆಡೆ ಹಲವು ಬಾರಿ ಪ್ರತಿಭಟನೆ ನಡೆಸಲಾಗಿದ್ದು, ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದೆ. ಆದರೆ ಜಿಲ್ಲೆಯ ರೈತರ ಜಮೀನು ಬಲಿಕೊಟ್ಟು ಕಂಪೆನಿಯ ಬಾಲಂಗೋಚಿಗಳಂತೆ ಅಧಿಕಾರಿಗಳು ವರ್ತಿಸಲು ಮುಂದಾಗಬೇಡಿ ಎಂದು ರೈತ ಸಂಘ ಹಸಿರು ಸೇನೆ ರಾಜ್ಯ ಕಾರ್ಯದರ್ಶಿ ಮನೋಹರ ಶೆಟ್ಟಿ ಎಚ್ಚರಿಸಿದರು.
ವಿಟ್ಲ ರೈತ ಹೋರಾಟ ಸಮಿತಿ ಅಧ್ಯಕ್ಷ ರಾಜೀವ ಗೌಡ ಮಾತನಾಡಿ, ಈ ಅವೈಜ್ಞಾನಿಕ ಯೋಜನೆ ವಿರುದ್ಧ ನಾವು ಕಳೆದ 15 ತಿಂಗಳಿನಿಂದ ಹೋರಾಟ ನಡೆಸುತ್ತಿದ್ದರೂ ರೈತರ ತಾಳ್ಮೆ ಪರೀಕ್ಷಿಸಲು ಕಂಪೆನಿ ಮುಂದಾಗಿದೆ ಎಂದರು.
ಅರಣ್ಯ ಇಲಾಖೆ ಹಿರಿಯ ಅಧಿಕಾರಿ ಅಂಜನ್ ಮತ್ತು ಜಿಲ್ಲಾ ಅರಣ್ಯಾಧಿಕಾರಿ ದಿನೇಶ್ ಕುಮಾರ್ ವೈ.ಕೆ., ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎನ್.ಸುಬ್ರಹಣ್ಯ ರಾವ್, ವಲಯ ಅರಣ್ಯಾಧಿಕಾರಿ ರಾಜೇಶ್ ಬಳಿಗಾರ್, ಸಾಮಾಜಿಕ ವಲಯ ಅರಣ್ಯಾಧಿಕಾರಿ ರವಿಕುಮಾರ್ ಇವರಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು.
ವೀರಕಂಭ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನೇಶ್, ಉಪಾಧ್ಯಕ್ಷೆ ಶೀಲಾ ನಿರ್ಮಲ ವೇಗಸ್, ಸದಸ್ಯರಾದ ಜನಾರ್ದನ ಪೂಜಾರಿ, ರಘು ಪೂಜಾರಿ, ಅಬ್ದುಲ್ ರಹಿಮಾನ್, ಜಯಪ್ರಸಾದ್, ಸಂದೀಪ್, ಅರಣ್ಯ ರಕ್ಷಕ ಪ್ರೀತಮ್ ಎಸ್., ಶೋಭಿತ್, ದಯಾನಂದ್, ರಂಜಿತಾ ಮತ್ತಿತರರು ಇದ್ದರು.