ಕರ್ತವ್ಯಕ್ಕೆ ಹಾಜರಾದ ನೂತನ ಕುಮಾರಿ
ಪುತ್ತೂರು: ಬಿಜೆಪಿ ಮುಖಂಡ ದಿ.ಪ್ರವೀಣ್ ನೆಟ್ಟಾರು ರವರ ಪತ್ನಿ ನೂತನ ಕುಮಾರಿರವರು ಸಿಎಂ ಆದೇಶ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಮುಖ್ಯಮಂತ್ರಿಗಳ ಪರಿಹಾರ ನಿಧಿ ವಿಭಾಗದಲ್ಲಿ ಸಹಾಯಕಿ ಹುದ್ದೆಗೆ ಸೇರ್ಪಡೆಗೊಂಡಿದ್ದು ಅ.13ರಂದು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ದ.ಕ.ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರರವರು ನೇಮಕಾತಿ ನೂತನರವರಿಗೆ ಪತ್ರ ನೀಡಿದರು.
ನೂತನ ಕುಮಾರಿಗೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ ಕಚೇರಿಯಲ್ಲಿ ಸಿ. ಗ್ರೂಪ್ ಸರ್ಕಾರಿ ಉದ್ಯೋಗ ಲಭಿಸಿತ್ತು. ಆದರೆ ಅವರು ಮಂಗಳೂರಿನಲ್ಲೇ ಕರ್ತವ್ಯ ನಿರ್ವಹಿಸಲು ಬಯಸಿದ್ದು ಈ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾಕೇಂದ್ರ ಮಂಗಳೂರಿನಲ್ಲಿ ಸರ್ಕಾರಿ ಉದ್ಯೋಗ ನಡೆಸಲು ಆದೇಶದಲ್ಲಿ ನಿಯೋಜನೆ ಮೇರೆಗೆ ಅವಕಾಶ ನೀಡಲಾಗಿದೆ. ಮಂಗಳೂರು ವಿಶ್ವವಿದ್ಯಾಲಯದಲ್ಲಿ ಲೈಬ್ರೆರಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ನೂತನ ಕುಮಾರಿರವರು ಏಳೂವರೆ ವರ್ಷ ಕಾಲ ಪುತ್ತೂರು ಸಂತ ಫಿಲೋಮಿನಾ ಕಾಲೇಜು ಹಾಗೂ ಐದು ತಿಂಗಳ ಕಾಲ ಇತ್ತೂರು ವಿವೇಕಾನಂದ ಪಿಯು ಕಾಲೇಜಿನ ಗ್ರಂಥಾಲಯ ವಿಭಾಗದಲ್ಲಿ ಕಾರ್ಯನಿರ್ವಹಿಸಿದ್ದರು.
ಬೆಳಾರೆಯಲ್ಲಿ ಚಿಕನ್ ಸ್ಟಾಲ್ ಹೊಂದಿದ್ದ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಅವರನ್ನು ಜು.26ರಂದು ದುಷ್ಕರ್ಮಿಗಳು ಹತ್ಯೆ ನಡೆಸಿದ್ದರು. ಬಳಿಕದ ಬೆಳವಣಿಗೆಯಲ್ಲಿ ತಮ್ಮದೇ ಸರಕಾರದ ವಿರುದ್ಧ ಬಿಜೆಪಿ ಕಾರ್ಯಕರ್ತರು ಅಸಮಾಧನಗೊಂಡಿದ್ದರು. ಹತ್ಯೆಯ ತನಿಖೆಯನ್ನು ಬಿಜೆಪಿ ಸರಕಾರ ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಿತ್ತು. ಪ್ರವೀಣ್ ನೆಟ್ಟಾರು ಸಾವಿಗೀಡಾದ ಹಿನ್ನೆಲೆಯಲ್ಲಿ ಅವರ ಕುಟುಂಬಕ್ಕೆ ಮಾನವೀಯ ನೆಲೆಯಲ್ಲಿ ಸರಕಾರಿ ಉದ್ಯೋಗ ಕೊಡಿಸುವ ಬಗ್ಗೆ ದ.ಕ ಸಂಸದ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯರಲ್ಲಿ ಮನವಿ ಮಾಡಿದ್ದರು.
ಮುಖ್ಯಮಂತ್ರಿಗಳು ಇದಕ್ಕೆ ಒಪ್ಪಿಗೆ ನೀಡಿದ್ದು ದೊಡ್ಡಬಳ್ಳಾಪುರದಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಪ್ರವೀಣ್ ನೆಟ್ಟಾರು ಪತ್ನಿಗೆ ಸಿಎಂ ಸಚಿವಾಲಯದಲ್ಲಿ ಕೆಲಸ ಕೊಡಿಸುವುದಾಗಿ ಘೋಷಣೆ ಮಾಡಿದ್ದರು. ಅದರಂತೆ ಸಿಎಂ ಸಚಿವಾಲಯದಲ್ಲಿನ ಗ್ರೂಪ್ ಸಿ ಹುದ್ದೆಗೆ ಕರ್ನಾಟಕ ನಾಗರಿಕ ಸೇವಾ ಸಾಮಾನ್ಯ ನೇಮಕಾತಿ) ನಿಯಮಾವ 1977ರ ನಿಯಮ 15,1(ಬಿ)(1)ರ ಪ್ರಕಾರ ಸೆ.29ರಂದೇ ಗುತ್ತಿಗೆ ಆಧಾರದಲ್ಲಿ ನೇಮಕಾತಿ ಆದೇಶ ಹೊರಡಿಸಿದ್ದರು ಆದರೆ ಇದು ಗುತ್ತಿಗೆ ಆಧಾರಿತ ಹುದ್ದೆಯಾಗಿದ್ದರಿಂದ ನೂತನ ಕುಮಾರಿರವರು ಕರ್ತವ್ಯ ನಿರ್ವಹಿಸಲು ಒಪ್ಪದ ಕಾರಣ ಅವರ ಕೋರಿಕೆಯಂತೆ ದ.ಕ.ಜಿಲ್ಲಾಧಿಕಾರಿ ಕಛೇರಿಯಲ್ಲಿ ಕರ್ತವ್ಯಕ್ಕೆ ಅವಕಾಶ ಮಾಡಿಕೊಡಲಾಗಿದೆ.