ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಬಂಟ್ವಾಳ ದ.ಕ, ಗ್ರಾಮ ಪಂಚಾಯತ್ ಸಂಗಬೆಟ್ಟು, ರೋಟರಿ ಕ್ಲಬ್ ಸಿದ್ಧಕಟ್ಟೆ ಫಲ್ಗುಣಿ ಇವರ ಸಂಯುಕ್ತ ಆಶ್ರಯದಲ್ಲಿ ಆಜಾದಿ ಕಾ ಅಮೃತ್ ಮಹೋತ್ಸವ ಪ್ರಯುಕ್ತ ಸಂಗಬೆಟ್ಟು ಗ್ರಾಮ ವ್ಯಾಪ್ತಿಯ ಸಾಕು ನಾಯಿಗಳಿಗೆ ನಾಯಿ ಹುಚ್ಚು ನಿರೋಧಕ ಉಚಿತ ಲಸಿಕಾ ಕಾರ್ಯಕ್ರಮ ನಡೆಯಿತು.
ಸಂಗಬೆಟ್ಟು ಗ್ರಾಮ ಪಂಚಾಯತ್ ನಲ್ಲಿ ನಡೆದ ಲಸಿಕಾ ಉದ್ಘಾಟನಾ ಸಭೆಯ ಅಧ್ಯಕ್ಷತೆಯನ್ನು ಗ್ರಾಮಪಂಚಾಯತ್ ಅಧ್ಯಕ್ಷ ಸತೀಶ್ ಅಳಕೆ ವಹಿಸಿ ಲಸಿಕೆಯ ಅಗತ್ಯದ ಕುರಿತು ವಿವರಿಸಿದರು. ರೋಟರಿ ಕ್ಲಬ್ ಸಿದ್ಧಕಟ್ಟೆ ಫಲ್ಗುಣಿಯ ಅಧ್ಯಕ್ಷ ರೊ.ಗಣೇಶ್ ಶೆಟ್ಟಿ ಶ್ವಾನಗಳಿಗೆ ಲಸಿಕೆ ಹಾಕುವ ಅನಿವಾರ್ಯತೆಯ ಬಗ್ಗೆ ತಿಳಿಸಿದರು. ರಾಯಿ, ಸಿದ್ಧಕಟ್ಟೆ ಪಶು ಚಿಕಿತ್ಸಾಲಯದ ಮುಖ್ಯ ವೈದ್ಯಾಧಿಕಾರಿ ಡಾ.ಉಮೇಶ್ ಕಿರಣ್ ಬಿ.ಎನ್ ರೇಬಿಸ್ ರೋಗದ ಲಕ್ಷಣಗಳು, ಪರಿಣಾಮಗಳ ಬಗ್ಗೆ ಮಾಹಿತಿ ಕಾರ್ಯಾಗಾರ ನಡೆಸಿಕೊಟ್ಟರು.
ಗ್ರಾಮ ಪಂಚಾಯತ್ ಸದಸ್ಯರಾದ ಸಂದೇಶ್ ಶೆಟ್ಟಿ, ದಾಮೋದರ್, ವಾಮದಪದವು ಪಶು ಚಿಕಿತ್ಸಾಲಯದ ಮುಖ್ಯ ಪಶು ವೈದ್ಯಾಧಿಕಾರಿ ಡಾ.ಅಶೋಕ್ ಶೆಟ್ಟಿ, ಜಾನುವಾರು ಅಭಿವೃದ್ಧಿ ಅಧಿಕಾರಿ ಶ್ರೀಧರ ಶೆಟ್ಟಿ, ಸಿಬ್ಬಂದಿಗಳಾದ ಕಾಂತಪ್ಪ, ಕೃಷ್ಣ ಅರಸ, ರೊ.ಮಧ್ವರಾಜ್ ಜೈನ್, ಪಂಚಾಯತ್ ಸಿಬ್ಬಂದಿಗಳು, ಶ್ವಾನ ಪ್ರಿಯರು ಹಾಗೂ ಗ್ರಾಮಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ರೊ.ರಾಜೇಶ್ ನೆಲ್ಯಾಡಿ ಕಾರ್ಯಕ್ರಮ ನಿರ್ವಹಿಸಿದರು.
ನಾಲ್ಕು ತಂಡಗಳಲ್ಲಿ ವೈದ್ಯಾಧಿಕಾರಿಗಳು ತೆರಳಿ ಪೂರ್ವಾಹ್ನ 10.30 ರಿಂದ 1.00 ಗಂಟೆಯವರೆಗೆ ಸಂಗಬೆಟ್ಟು, ಅಜ್ಜಿಬಾಕ್ಯಾರು, ಕಲ್ಕುರಿ ಪದವು, ಗಾಡಿಪಲ್ಕೆ, ಮಂಚಕಲ್ಲು, ಅಲಕ್ಕೆ, ಕಲ್ಕುರಿ ಮಜಲೋಡಿ, ಪಲ್ಲೆದ ಕೋಡಿ, ಮೇಲುಗುಡ್ಡೆ, ಮಾದಾಯಿ, ಪರನೀರು ಕಣಿಯೂರು, ಮಾಲ್ದಾಡು, ಉರುಡಂಗೆ, ಮುಗೇರುಗುಡ್ಡೆ, ಜಾಂಬುವಿನಲ್ಲಿ ಲಸಿಕಾ ಅಭಿಯಾನ ನಡೆಸಿಕೊಟ್ಟರು. ಸಾರ್ವಜನಿಕ ಸ್ಪಂದನೆಯೂ ಉತ್ತಮವಾಗಿದ್ದು ಗ್ರಾಮವ್ಯಾಪ್ತಿಯಲ್ಲಿ ಸುಮಾರು ಮುನ್ನೂರು ನಾಯಿಗಳಿಗೆ ಲಸಿಕೆ ಹಾಕಲಾಯಿತು.