ಬೆಂಗಳೂರು: ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ಪೂರ್ಣಗೊಳಿಸಲು ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಹೊಸ ಗಡುವು ನೀಡಿದೆ.
ತಾಲೂಕು ಮತ್ತು ಜಿಲ್ಲಾ ಪಂಚಾಯತ್‌ಗಳ ವಿಂಗಡಣೆ ಕಾರ್ಯವನ್ನು ಪೂರ್ಣಗೊಳಿಸಿ, ಹೆಚ್ಚುವರಿ ೧೨ ವಾರಗಳಲ್ಲಿ ಎಸ್‌ಸಿ, ಎಸ್‌ಟಿ, ಒಬಿಸಿ ಮತ್ತು ಇತರ ವರ್ಗಗಳಿಗೆ ಮೀಸಲಾತಿ ಕಲ್ಪಿಸಿ, ಚುನಾವಣೆ ನಡೆಸಲು ಕರ್ನಾಟಕ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಈ ಹಿಂದಿನ ಮೇ ೨೪, ೨೦೨೨ರ ಆದೇಶವನ್ನು ಮಾರ್ಪಡಿಸುವಂತೆ ಕೋರಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ವಿಲೇವಾರಿ ಮಾಡುವಾಗ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ ಮತ್ತು ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರ ವಿಭಾಗೀಯ ಪೀಠವು ಈ ಆದೇಶ ನೀಡಿದೆ.
ರಾಜ್ಯ ಚುನಾವಣಾ ಆಯೋಗವು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ಕಾಯಿದೆ, ೨೦೨೧ರ ನಿಬಂಧನೆಗಳು ಅಸಂವಿಧಾನಿಕ ಎಂಬ ಘೋಷಣೆಯ ಕುರಿತಂತೆ ಪರಿಹಾರ ಕೋರಿ ರಿಟ್ ಅರ್ಜಿಯನ್ನು ಸಲ್ಲಿಸಿದೆ. ಅರ್ಜಿದಾರರು ಮಾರ್ಚ್ ೩೦, ೨೦೨೧ರ ಡಿಲಿಮಿಟೇಶನ್ ಅಧಿಸೂಚನೆ ಮತ್ತು ಜುಲೈ ೧, ೨೦೨೧ ದಿನಾಂಕದ ಮೀಸಲಾತಿ ಅಧಿಸೂಚನೆಗೆ ಅನುಗುಣವಾಗಿ ಎಲ್ಲಾ ತಾಲೂಕು ಮತ್ತು ಜಿಲ್ಲಾ ಪಂಚಾಯತ್‌ಗಳಿಗೆ ಚುನಾವಣೆಯ ಪ್ರಕ್ರಿಯೆಯನ್ನು ಪ್ರಾರಂಭಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶನವನ್ನು ಕೋರಿದ್ದರು.
ಕಾರ್ಯ ಪೂರ್ಣಗೊಂಡಿಲ್ಲ: ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವದಗಿ, ರಾಜ್ಯದಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಕ್ಷೇತ್ರಗಳ ವಿಂಗಂಡಣೆ ಮತ್ತು ಮೀಸಲು ನಿಗದಿ ಕೆಲಸ ಪೂರ್ಣಗೊಳಿಸಲು ರಾಜ್ಯ ಸರ್ಕಾರಕ್ಕೆ ೧೨ ವಾರ ಕಾಲಾವಕಾಶ ನೀಡಿ ಮೇ ೨೪ರಂದು ಹೈಕೋರ್ಟ್ ಆದೇಶಿಸಿತ್ತು. ಆದರೆ ಕ್ಷೇತ್ರ ಮರು ವಿಂಗಡಣೆ ಕೆಲಸ ಪೂರ್ಣಗೊಳಿಸಲು ಹೈಕೋರ್ಟ್‌ನಿಂದ ಮತ್ತೆ ಕಾಲಾವಕಾಶ ಪಡೆಯಲು ಮರು ವಿಂಗಡಣೆ ಆಯೋಗವು ಸರ್ಕಾರಕ್ಕೆ ಸೆ.೯ರಂದು ಪತ್ರ ಬರೆದಿದೆ. ಆನಂತರ ಮೀಸಲು ನಿಗದಿ ಕಾರ್ಯವನ್ನು ಸರ್ಕಾರ ಮಾಡಲು ಸಾಧ್ಯ ಎಂದರು. ಕ್ಷೇತ್ರ ಮರು ವಿಂಗಡಣೆ ಮತ್ತು ಮೀಸಲು ನಿಗದಿ ಶೀಘ್ರ ಪೂರ್ಣಗೊಳಿಸಲು ಸರ್ಕಾರ ಸಹ ಎಲ್ಲಾ ಪ್ರಯತ್ನ ಮಾಡುತ್ತಿದೆ. ಆದ್ದರಿಂದ ೧೨ ವಾರ ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದರು. ಆ ಮನವಿ ಮಾನ್ಯ ಮಾಡಿದ ನ್ಯಾಯಪೀಠ, ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಕ್ಷೇತ್ರಗಳಿಗೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಸೇರಿದಂತೆ ಇತರೆ ವರ್ಗಗಗಳಿಗೆ ಮೀಸಲು ಕಲ್ಪಿಸುವ ಮತ್ತು ಕ್ಷೇತ್ರ ಮರು ವಿಂಗಡಣೆ ಕಾರ್ಯವನ್ನು ೧೨ ವಾರಗಳಲ್ಲಿ ಪೂರ್ಣಗೊಳಿಸುವಂತೆ ಸರ್ಕಾರಕ್ಕೆ ಸೂಚಿಸಿ ಮಧ್ಯಂತರ ಅರ್ಜಿ ಇತ್ಯರ್ಥಪಡಿಸಿತು.
ಚುನಾವಣಾ ಆಯೋಗ, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ಕಾಯ್ದೆ-೨೦೨೧ಅನ್ನು ಅಸಂವಿಧಾನ ಎಂಬುದಾಗಿ ಘೋಷಿಸಿ ರದ್ದುಪಡಿಸಬೇಕು. ಚುನಾವಣಾ ಆಯೋಗವು ಈಗಾಗಲೇ ಪ್ರಕಟಿಸಿರುವ ಕರಡು ಮೀಸಲು ಮತ್ತು ಕ್ಷೇತ್ರ ಮರುವಿಂಗಡಣೆ ಅಧಿಸೂಚನೆ ಆಧರಿಸಿ ಚುನಾವಣಾ ಪ್ರಕ್ರಿಯೆ ಮುಂದುವರಿಸಬೇಕು. ಅಂತಿಮ ಮೀಸಲು ಮತ್ತು ಕ್ಷೇತ್ರ ಪುನರ್ ವಿಂಗಡಣೆ ಪಟ್ಟಿ ಪ್ರಕಟಿಸಿ, ಶೀಘ್ರ ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಮನವಿ ಮಾಡಿದೆ. ಜನಸಂಖ್ಯೆ ಅನುಪಾತದ ಆಧಾರದಲ್ಲಿ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳಲ್ಲಿ ಸ್ಥಾನ ಮತ್ತು ಅಭ್ಯರ್ಥಿಗಳ ಹೆಚ್ಚಳಕ್ಕೆ ಸಂಬಂಧಿಸಿದಂತೆ ಕರ್ನಾಟಕ ಪಂಚಾಯತ್ ರಾಜ್ ಹಾಗೂ ಗ್ರಾಮ ಸ್ವರಾಜ್ (ತಿದ್ದುಪಡಿ) ಕಾಯ್ದೆ-೨೦೨೧ರ ಜಾರಿಗೆ ರಾಜ್ಯ ಸರ್ಕಾರ ೨೦೨೧ರ ಸೆಪ್ಟೆಂಬರ್ ೧೮ರಂದು ಗೆಜೆಟ್ ಅಧಿಸೂಚನೆ ಹೊರಡಿಸಿತ್ತು.
ಮೂರು ತಿಂಗಳ ಸಮಯ:
ಹೈಕೋರ್ಟ್ ಆದೇಶದ ಅನುಸಾರ ಕ್ಷೇತ್ರ ಪುನರ್ ವಿಂಗಡಣೆ ಆಯೋಗವು ಮೂರು ತಿಂಗಳಲ್ಲಿ ತನ್ನ ವರದಿ ಸಲ್ಲಿಸುವ ನಿರೀಕ್ಷೆಯಿದೆ. ಬಹುಶಃ ಈ ಪ್ರಕ್ರಿಯೆ ಡಿಸೆಂಬರ್ ಅಂತ್ಯದ ವೇಳೆಗೆ ಪೂರ್ಣಗೊಳ್ಳಲಿದ್ದು, ೨೦೨೩ರ ಜನವರಿಯಲ್ಲಿ ವರದಿ ಸರ್ಕಾರದ ಕೈಸೇರಲಿದೆ. ಸರ್ಕಾರ ತದನಂತರ ಮುಂದಿನ ಕ್ರಮ ಕೈಗೊಂಡು ಚುನಾವಣೆ ನಡೆಸುವ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಹೈಕೋರ್ಟ್ ಅಡ್ವೊಕೇಟ್ ಜನರಲ್ ಪ್ರಭುಲಿಂಗ ಕೆ.ನಾವದಗಿ ಹೇಳಿದರು.