ಬೆಂಗಳೂರು: ಭೂಸ್ವಾಧೀನಗೊಂಡಿಲ್ಲವೆಂದು ಎನ್‌ಒಸಿ ನೀಡಲು ಲಂಚ ಪಡೆದುಕೊಂಡಿದ್ದ ಅಧಿಕಾರಿಗಳೀರ್ವರು, ಈ ಕುರಿತು ದೂರು ದಾಖಲಾಗುತ್ತಲೇ ಲಂಚವಾಗಿ ಪಡೆದ ಹಣವನ್ನು ಹಿಂತಿರುಗಿಸುವ ವೇಳೆ ಪೊಲೀಸರು ಬಂಧಿಸಿರುವ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ.
ವ್ಯಕ್ತಿಯೊಬ್ಬರ ಜಮೀನು ಭೂಸ್ವಾಧೀನಗೊಂಡಿಲ್ಲ ಎಂದು ಎನ್‌ಒಸಿ ಪತ್ರ ನೀಡಲೆಂದು 2.5 ಲಕ್ಷ ರೂ.ಲಂಚವಾಗಿ ಪಡೆದುಕೊಂಡಿದ್ದ ಆರೋಪದ ಕುರಿತು ದೂರು ದಾಖಲಾದ ಬೆನ್ನಲ್ಲೇ ಪಡೆದುಕೊಂಡಿದ್ದ ಲಂಚದ ಹಣವನ್ನು ಹಿಂತಿರುಗಿಸುವ ವೇಳೆ ಈ ಘಟನೆ ನಡೆದಿದೆ.ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ)ಯ ವಿಶೇಷ ಭೂಸ್ವಾಧೀನಾಧಿಕಾರಿಯಾಗಿರುವ ಕೆಎಎಸ್ ಅಧಿಕಾರಿ ಎ.ಬಿ.ವಿಜಯಕುಮಾರ್ ಮತ್ತು ಅವರ ಕಚೇರಿಯ ಭೂಮಾಪಕ ರಂಗನಾಥ್ ಬಂಧಿತರು.
ದೂರುದಾರ ಭಗತ್ ಸಿಂಗ್ ಅರುಣ್ ಎಂಬವರಿಗೆ ಎನ್‌ಒಸಿ ನೀಡಲು ಅಧಿಕಾರಿಗಳು 2.50 ಲಕ್ಷ ರೂ.ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು.ನಂತರ 2.50ಲಕ್ಷ ರೂ.ಲಂಚ ಪಡೆದು ಎನ್‌ಒಸಿ ನೀಡಿದ್ದರು.ಈ ಸಂಬಂಧ ಅರ್ಜಿದಾರ ಭಗತ್‌ಸಿಂಗ್ ಅರುಣ್ ಅವರು ಕೆಐಎಡಿಬಿ ಉಪ ಆಯುಕ್ತರಿಗೆ ದೂರು ನೀಡಿದ್ದರು.ಹಿರಿಯ ಅಧಿಕಾರಿಗಳು ತನಿಖೆ ಆರಂಭಿಸುತ್ತಿದ್ದಂತೆ ದೂರುದಾರರನ್ನು ಸಂಪರ್ಕಿಸಿದ್ದ ಆರೋಪಿತ ಅಧಿಕಾರಿಗಳು, ದೂರನ್ನು ಹಿಂಪಡೆದರೆ ರೂ.2.5 ಲಕ್ಷದೊಂದಿಗೆ 50,000 ರೂ.ಗಳನ್ನು ಸೇರಿಸಿ ವಾಪಸ್ ನೀಡುವುದಾಗಿ ತಿಳಿಸಿದ್ದರು.ಅದರಂತೆ ದೂರುದಾರರಿಗೆ ಹಣ ವಾಪಸ್ ನೀಡುತ್ತಿದ್ದಾಗ ಇಬ್ಬರು ಅಧಿಕಾರಿಗಳನ್ನೂ ಲೋಕಾಯುಕ್ತ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.