ಚಾಲಕನಿಲ್ಲದಾಗ ಹಿಂದಕ್ಕೆ ಚಲಿಸಿದ ಬಸ್ಸು – ಸಮಯ ಪ್ರಜ್ಞೆ ಮೆರೆದು ಭಾರೀ ಅಪಘಾತವನ್ನು ತಪ್ಪಿಸಿದ ವಿದ್ಯಾರ್ಥಿ ಸಿಝಾಹಸನ್

0

ಪುತ್ತೂರು: ಚಾಲಕ ಹಾಗೂ ನಿರ್ವಾಹಕನಿಲ್ಲದ ಸಂದರ್ಭ ಪ್ರಯಾಣಿಕರಿಂದ ತುಂಬಿದ ಬಸ್ಸೊಂದು ಏಕಾಏಕಿ ಹಿಂದಕ್ಕೆ ಚಲಿಸಿದ್ದು, ವಿದ್ಯಾರ್ಥಿಯೋರ್ವ ಸಮಯಪ್ರಜ್ಞೆ ಮೆರೆದು ದೊಡ್ಡ ಅಪಘಾತವನ್ನು ತಪ್ಪಿಸಿರುವ ಘಟನೆ ಪುತ್ತೂರಿನ ಬಸ್ಸು ನಿಲ್ದಾಣದಲ್ಲಿ ನಡೆದಿದೆ.


ಸೆ.13 ರಂದು ಸಂಜೆ 4.25ರ ವೇಳೆ ಉಪ್ಪಿನಂಗಡಿಯತ್ತ ತೆರಳಬೇಕಾದ ಕೆಎ21-ಎಫ್0057 ನಂಬರಿನ ಎಕ್ಸ್‌ಪ್ರೆಸ್ ಸರಕಾರಿ ಬಸ್ಸು ಪುತ್ತೂರು ಬಸ್ಸು ನಿಲ್ದಾಣದಲ್ಲಿ ನಿಂತಿದ್ದ ವೇಳೆ ಪ್ರಯಾಣಿಕರು ತುಂಬಿದ್ದರು. ಆದರೆ ಈ ವೇಳೆ ಬಸ್ಸಿನಲ್ಲಿ ಚಾಲಕ ಮತ್ತು ನಿರ್ವಾಹಕ ಇರಲಿಲ್ಲ. ಇದೇ ಸಂದರ್ಭ ಬಸ್ಸು ಏಕಾಏಕಿ ಹಿಂದಕ್ಕೆ ಚಲಿಸಿದ್ದು, ಪ್ರಯಾಣಿಕರು ಬೊಬ್ಬೆ ಹೊಡೆಯುತ್ತಿದ್ದಂತೆ ಚಾಲಕನ ಎಡಬದಿ ಸೀಟಿನಲ್ಲಿದ್ದ ಮಾಯಿದೆ ದೇವುಸ್ ಚರ್ಚ್ ಸಮೂಹ ಶಿಕ್ಷಣ ಸಂಸ್ಥೆಯ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಾಣಿಜ್ಯ(ಇಸಿಬಿಎ) ವಿಭಾಗದ ವಿದ್ಯಾರ್ಥಿ ಸಿಝಾನ್ ಹಸನ್ ತಕ್ಷಣವೇ ಚಾಲಕನ ಸೀಟಿಗೆ ಜಿಗಿದು ಬ್ರೇಕ್ ಹಾಕಿ ಹಿಂದಕ್ಕೆ ಚಲಿಸುತ್ತಿದ್ದ ಬಸ್ಸನ್ನು ನಿಯಂತ್ರಿಸಿದ್ದಾರೆ. ಸಮಯ ಪ್ರಜ್ಞೆಯಿಂದ ಸಂಭಾವ್ಯ ದೊಡ್ಡ ಅಪಘಾತವೊಂದು ತಪ್ಪಿದ್ದು ಬಸ್ಸಲ್ಲಿದ್ದವರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿತ್ತು. ವಿದ್ಯಾರ್ಥಿಯ ಈ ನಡೆಗೆ ಪ್ರಯಾಣಿಕರು ಸೇರಿದಂತೆ ಎಲ್ಲೆಡೆ ಭಾರೀ ಪ್ರಶಂಸೆ ವ್ಯಕ್ತವಾಗಿದ್ದು, ಹಲವು ಜೀವಗಳನ್ನು ಉಳಿಸಿದ ಅಪತ್ಬಾಂಧವ ಎಂದೇ ಬಿಂಬಿಸಲ್ಪಡುತ್ತಿದ್ದಾರೆ.ಹಲವಾರು ಜೀವಗಳು ಬಸ್ಸಿನಲ್ಲಿರುವಾಗ ಚಾಲಕ ಹ್ಯಾಂಡ್ ಬ್ರೇಕ್ ಎಳೆಯದೇ ಬಸ್ಸು ನಿಲ್ಲಿಸಿ ಹೋಗಿದ್ದು ತಪ್ಪು. ಎಷ್ಟೇ ತುರ್ತಾಗಿದ್ದರೂ ಪ್ರತಿಯೊಬ್ಬ ಚಾಲಕನು ಈ ಬಗ್ಗೆ ಗಮನವಹಿಸಬೇಕು ಎಂದು ಸಿಝಾನ್ ಹಸನ್ ಹೇಳಿದ್ದಾರೆ. ತಾನು ತಂದೆಯ ಜೊತೆ ಕಾರು ಚಾಲನೆಯನ್ನು ಕಲಿತ್ತಿದ್ದರಿಂದ ಬಸ್ಸಿನ ಬ್ರೇಕ್ ಹಿಡಿಯಲು ಸಾಧ್ಯವಾಯಿತು ಎಂದು ಅವರು ಹೇಳಿದ್ದಾರೆ.ಯುವಕ ಸಿಝಾನ್ ಹಸನ್‌ರವರು ಉಪ್ಪಿನಂಗಡಿಯ ಉದ್ಯಮಿ ಮೈನಾ ಕ್ಲೋತ್ ಸೆಂಟರ್ ಮಾಲಕ ಸಲಾಂ ಮೈನಾ ಇವರ ಪುತ್ರ.

LEAVE A REPLY

Please enter your comment!
Please enter your name here