ಬಂಟ್ವಾಳ: ಬಿ.ಸಿ.ರೋಡು ಗಾಣದಪಡ್ಪು ಸಭಾಂಗಣದಲ್ಲಿ ಭಾನುವಾರ ನಡೆದ ಬ್ರಹ್ಮಶ್ರೀ ನಾರಾಯಣಗುರು ಇವರ 168ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ 25 ವರ್ಷ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾಗಿ ಮುನ್ನಡೆಸಿದ ಕೆ.ಸೇಸಪ್ಪ ಕೋಟ್ಯಾನ್ ಇವರ ‘ಶುಭ ಯಾನ ಪುಸ್ತಕ’ ಬಿಡುಗಡೆಗೊಳಿಸಲಾಯಿತು. ಕನ್ಯಾಡಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ಸಂಸದ ನಳಿನ್ ಕುಮಾರ್ ಕಟೀಲು, ಕೆ.ಹರಿಕೃಷ್ಣ ಬಂಟ್ವಾಳ್ ಮತ್ತಿತರರು ಇದ್ದರು.
ಗುರುಮಂದಿರ ಮತ್ತು ಕನ್ಯಾಡಿ ಕ್ಷೇತ್ರಕ್ಕೆ ಸಂಸದ ನಳಿನ್ ಕೊಡುಗೆ ಅಪಾರ: ಹರಿಕೃಷ್ಣ
ಇಲ್ಲಿನ ಗಾಣಪಡ್ಪು ಬ್ರಹ್ಮಶ್ರೀ ನಾರಾಯಣಗುರು ಮಂದಿರ ಬಳಿ ತಡೆಗೋಡೆ ಮತ್ತು ಕನ್ಯಾಡಿ ಕ್ಷೇತ್ರದಲ್ಲಿ ಸ್ವಾಮೀಜಿ ಚಾತುರ್ಮಾಸ ಕೈಗೊಳ್ಳುವ ಸ್ಥಳದಲ್ಲಿ ಮೇಲ್ಛಾವಣಿ ನಿರ್ಮಾಣಕ್ಕೆ ಸಂಸದ ನಳಿನ್ ಕುಮಾರ್ ಕಟೀಲು ಅವರು ಸುಮಾರು 50 ಲಕ್ಷಕ್ಕೂ ಮಿಕ್ಕಿ ಮೊತ್ತದ ನೆರವು ಒದಗಿಸಿದ್ದಾರೆ ಎಂದು ಕಿಯೋನಿಕ್ಸ್ ಮತ್ತು ಬಿಲ್ಲವ ಸಂಘದ ಮಾಜಿ ಅಧ್ಯಕ್ಷ ಮಾಜಿ ಅಧ್ಯಕ್ಷ ಕೆ.ಹರಿಕೃಷ್ಣ ಬಂಟ್ವಾಳ್ ಹೇಳಿದರು.
ಇಲ್ಲಿನ ಬಿಲ್ಲವ ಸಮಾಜ ಸೇವಾ ಸಂಘದ ವತಿಯಿಂದ ಬಿ.ಸಿ.ರೋಡು ಗಾಣದಪಡ್ಪು ಸಭಾಂಗಣದಲ್ಲಿ ಭಾನುವಾರ ನಡೆದ ಬ್ರಹ್ಮಶ್ರೀ ನಾರಾಯಣಗುರು ಇವರ 168ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಪ್ರಾಸ್ತಾವಿಕ ಮಾತನಾಡಿದರು.
ಸರ್ಕಾರದ ವತಿಯಿಂದ ಇದೇ ಪ್ರಥಮ ಬಾರಿಗೆ ಮಂಗಳೂರಿನಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮ ದಸರಾ ನೆನಪಿಸುವಂತೆ ಮಾಡಿದೆ ಎಂದರು. ಕನ್ಯಾಡಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು. ‘ಜಾತೀವಾದ ದೇಶಕ್ಕೆ ಅಪಾಯ ಉಂಟು ಮಾಡಲಿದ್ದು, ವಿದೇಶಿ ಮಾದರಿ ರಾಷ್ಟ್ರೀಯತೆ ಮೂಲಕ ದೇಶದ ಪ್ರಗತಿಗೆ ಸಂಘಟಿತ ಪ್ರಯತ್ನ ನಡೆಯಬೇಕು’ ಎಂದರು.
ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಕೆ.ಸೇಸಪ್ಪ ಕೋಟ್ಯಾನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಸಂಘದ ಅಧ್ಯಕ್ಷರಾಗಿ ೨೫ ವರ್ಷ ಪೂರೈಸಿದ ಕೆ.ಸೇಸಪ್ಪ ಕೋಟ್ಯಾನ್ ದಂಪತಿಗೆ ಸನ್ಮಾನ, ’25ರ ಶುಭ ಯಾನ’ ಪುಸ್ತಕ ಬಿಡುಗಡೆ, ಸಾಧಕರಾದ ಎಂ.ತುಂಗಪ್ಪ ಬಂಗೇರ, ವಕೀಲೆ ಶೈಲಜಾ ರಾಜೇಶ್, ಬಿ.ವಿಶ್ವನಾಥ ಪೂಜಾರಿ ಇವರಿಗೆ ಸನ್ಮಾನ, ವಿದೂಷಿ ಡಾ.ದಾಕ್ಷಾಯಿಣಿ ಕಂದೂರು, ಸ್ವಾತಿ ಕುದ್ಕೋಳಿ ಇವರನ್ನು ಅಭಿನಂದಿಸಲಾಯಿತು.
ಸಂಘದ ಉಪಾಧ್ಯಕ್ಷ ಎನ್.ಮಹಾಬಲ ಬಂಗೇರ, ಪ್ರಧಾನ ಕಾರ್ಯದರ್ಶಿ ರಮೇಶ್ ಎಂ. ತುಂಬೆ, ಜತೆ ಕಾರ್ಯದರ್ಶಿ ಆನಂದ ಸಾಲಿಯಾನ್ ಶಂಭೂರು, ಕೋಶಾಧಿಕಾರಿ ಉಮೇಶ್ ಸುವರ್ಣ, ಲೆಕ್ಕಪರಿಶೋಧಕ, ವಕೀಲ ಸತೀಶ್ ಬಿ., ಮಹಿಳಾ ಸಮಿತಿ ಅಧ್ಯಕ್ಷೆ ರೇವತಿ ಬಡಗಬೆಳ್ಳೂರು ಮತ್ತಿತರರು ಇದ್ದರು.
ಮಾಜಿ ಸಚಿವ ಬಿ.ರಮಾನಾಥ ರೈ, ಬೇಬಿ ಕುಂದರ್, ರಾಜೇಶ, ಭುವನೇಶ್ ಪಚ್ಚಿನಡ್ಕ ಮತ್ತಿತರರು ಗುರುಪೂಜೆಯಲ್ಲಿ ಪಾಲ್ಗೊಂಡರು. ದಿನೇಶ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.