ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ಅಧ್ಯಕ್ಷರಾಗಿ ಡಾ|ನರೇಂದ್ರ ರೈ ದೇರ್ಲ ನೇಮಕ

0

ಬೆಂಗಳೂರು:ರಾಜ್ಯ ಸರಕಾರದಿಂದ ರಚಿಸಲ್ಪಟ್ಟು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಚಿಕ್ಕಮಗಳೂರಿನ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ಅಧ್ಯಕ್ಷರಾಗಿ ಲೇಖಕ,ಅಂಕಣಕಾರ ಪ್ರಾಧ್ಯಾಪಕ ಡಾ|ನರೇಂದ್ರ ರೈ ದೇರ್ಲ ಅವರನ್ನು ನೇಮಕಗೊಳಿಸಲಾಗಿದೆ. ದ.ರಾ.ಬೇಂದ್ರೆ,ಮಾಸ್ತಿ,ಶಿವರಾಮ ಕಾರಂತ, ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಸೇರಿದಂತೆ ಒಟ್ಟು ೨೧ ಟ್ರಸ್ಟ್/ ಪ್ರತಿಷ್ಠಾನಗಳ ಅಧ್ಯಕ್ಷರು ಹಾಗೂ ಸದಸ್ಯರ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ನೂತನ ಅಧ್ಯಕ್ಷ ಹಾಗೂ ಸದಸ್ಯರನ್ನು ನೇಮಕ ಮಾಡಲಾಗಿದೆ.

ಪುತ್ತೂರಿನ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಸಹ ಪ್ರಾಧ್ಯಾಪಕ, ಕನ್ನಡ ವಿಭಾಗದ ಮುಖ್ಯಸ್ಥರಾಗಿರುವ ಡಾ| ನರೇಂದ್ರ ರೈ ದೇರ್ಲ ಅವರು ತೇಜಸ್ವಿ ಪತ್ರಗಳು' ಸೇರಿದಂತೆ ಈಗಾಗಲೇ ೨೭ ಪುಸ್ತಕಗಳನ್ನು ಬರೆದಿದ್ದಾರೆ.ಜೊತೆಗೆ ೯ ಸಂಪಾದಿತ ಕೃತಿಗಳನ್ನು ಪ್ರಕಟಿಸಿದ್ದಾರೆ.ಇವರ ೧೩ ಲೇಖನಗಳು ಮಂಗಳೂರು ವಿವಿ., ಕುವೆಂಪು ವಿವಿ, ಬೆಂಗಳೂರು ವಿವಿ, ಯೆನೆಪೋಯ ವಿವಿಯ ವಿವಿಧ ಪದವಿ ತರಗತಿಗಳ ಪಠ್ಯಗಳಲ್ಲಿ ಮತ್ತು ಕರ್ನಾಟಕ, ಕೇರಳದ ಪ್ರೌಢ ಮತ್ತು ಪ್ರಾಥಮಿಕ ಶಾಲಾ ವಿವಿಧ ತರಗತಿಗಳ ಪಠ್ಯ ಪುಸ್ತಕಗಳಲ್ಲಿ ಪಾಠವಾಗಿ ಸೇರಿದೆ.ಇವರ ೫ ಕೃತಿಗಳಿಗೆ ಫೆಲೋಶಿಪ್ ದೊರೆತಿದೆ. ದೊರೆತ ಪ್ರಶಸ್ತಿಗಳು: ಡಾ|ದೇರ್ಲ ಅವರ ಹಲವು ಕೃತಿಗಳಿಗೆ ಈಗಾಗಲೇ ಪ್ರಶಸ್ತಿಗಳು ಲಭಿಸಿವೆ.ನೆಲಮುಖಿ’ ವಿಚಾರ ಸಾಹಿತ್ಯ ಕೃಷಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯ ಪರಿಸರ ಪತ್ರಿಕೋದ್ಯಮ ಪ್ರಶಸ್ತಿ, ಡಾ|ಹಾ.ಮಾ.ನಾಯಕ ಅಂಕಣ ಸಾಹಿತ್ಯ ಪ್ರಶಸ್ತಿ, ಕರ್ವಾಲೋ'ತುಳು ಅನುವಾದಕ್ಕೆ ಕುವೆಂಪು ಭಾಷಾ ಅಭಿವೃದ್ಧಿ ಪ್ರಾಧಿಕಾರದ ಅನುವಾದ ಪ್ರಶಸ್ತಿ,ಹಸಿರು-ಉಸಿರು’ ಕೃತಿಗೆ ಬೆಂಗಳೂರು ಕೃಷಿ ವಿವಿಯ ಅತ್ಯುತ್ತಮ ಕೃಷಿ ಪುಸ್ತಕ ಪ್ರಶಸ್ತಿ, ಅಕ್ಷರ ಪ್ರತಿಷ್ಠಾನದ ಅತ್ಯುತ್ತಮ ಪರಿಸರ ಪುಸ್ತಕ ಪ್ರಶಸ್ತಿ, ಬೇರು ಬದುಕು' ಕೃತಿಗೆ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಅತ್ಯುತ್ತಮ ಕೃಷಿ ಪುಸ್ತಕ ಪ್ರಶಸ್ತಿ,ಇದು ನೀರಿನ ಊರಿನ ಕಥೆ’ ನುಡಿಚಿತ್ರಕ್ಕೆ ಪ.ಗೋ.ಪ್ರಶಸ್ತಿ,ಇವರು ಸಂಪಾದಿಸಿದ ಕಾಲೇಜು ವಾರ್ಷಿಕಾಂಕಕ್ಕೆ ಸತತ ನಾಲ್ಕು ಬಾರಿ ಮಂಗಳೂರು ವಿವಿ ಮಟ್ಟದಲ್ಲಿ ಅತ್ಯುತ್ತಮ ವಾರ್ಷಿಕಾಂಕ ಪ್ರಶಸ್ತಿ ಲಭಿಸಿದೆ.ಕೆಯ್ಯೂರಿನಲ್ಲಿ ನಡೆದಿದ್ದ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿಯೂ ಇವರು ಆಯ್ಕೆಯಾಗಿದ್ದರು.ಇದೀಗ ಇವರನ್ನು ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ಅಧ್ಯಕ್ಷರಾಗಿ ಸರಕಾರ ನೇಮಕಗೊಳಿಸಿದೆ.

ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನಕ್ಕೆ ಪ್ರಭುಲಿಂಗ ಶಾಸ್ತ್ರಿ, ದೀಪಕ್ ದೊಡ್ಡಯ್ಯ, ಶಿವಾನಂದ ಕಳವೆ, ವಿನೋದ್ ಕುಮಾರ್ ನಾಯ್ಕ್, ಲಕ್ಷ್ಮೀನಾರಾಯಣ ಕಜಗದ್ದೆ, ಮಾರ್ಷಲ್ ಶರಾಮ್ ಹಾಗೂ ರಾಜೇಶ್ವರಿ ಪೂರ್ಣಚಂದ್ರ ತೇಜಸ್ವಿ ಅವರನ್ನು ಸದಸ್ಯರನ್ನಾಗಿ ನೇಮಿಸಲಾಗಿದ್ದು,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಚಿಕ್ಕಮಗಳೂರಿನ ಸಹಾಯಕ ನಿರ್ದೇಶಕರನ್ನು ಸದಸ್ಯ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ.

ಮೃತರಿಗೂ ಸ್ಥಾನ!

`ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನಕ್ಕೆ ತೇಜಸ್ವಿ ಅವರ ಪತ್ನಿ ರಾಜೇಶ್ವರಿ ಪೂರ್ಣಚಂದ್ರ ತೇಜಸ್ವಿ ಅವರನ್ನು ಓರ್ವ ಸದಸ್ಯರನ್ನಾಗಿ ನೇಮಿಸಲಾಗಿದೆ.ಆದರೆ, ಅವರು ೨೦೨೧ರ ಡಿಸೆಂಬರ್ ೧೪ರಂದು ನಿಧನರಾಗಿದ್ದಾರೆ.ಅವರನ್ನು ಸದಸ್ಯರಾಗಿ ನೇಮಕಗೊಳಿಸುವ ಮೂಲಕ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಎಡವಟ್ಟು ಮಾಡಿದೆ.

LEAVE A REPLY

Please enter your comment!
Please enter your name here