ಮಾಣಿ ಮಠ: ರಾಘವೇಶ್ವರ ಶ್ರೀಗಳಿಂದ ಬ್ರಹ್ಮಕಲಶೋತ್ಸವ ಸಂಪನ್ನ

0

ಮಾಣಿ: ಇಲ್ಲಿನ ಶ್ರೀ ರಾಮಚಂದ್ರಾಪುರ ಮಠದಲ್ಲಿ ನೂತನ ಶಿಲಾಮಯ ಗರ್ಭಾಗಾರದಲ್ಲಿ ಸಪರಿವಾರ ಶ್ರೀರಾಮದೇವರ ಪ್ರತಿಷ್ಠಾಪನೆಯ ಬ್ರಹ್ಮಕಲಶೋತ್ಸವವನ್ನು ಬುಧವಾರ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ನೆರವೇರಿಸಿದರು. ಗೋಕರ್ಣದ ತಂತ್ರಿಗಳಾದ ಶ್ರೀ ಅಮೃತೇಶ ಭಟ್ ಹಿರೇ ಹಾಗೂ ಶ್ರೀಮಠದ ಧರ್ಮಕರ್ಮ ವಿಭಾಗದ ಕೇಶವ ಪ್ರಸಾದ್ ಕೂಟೇಲು ನೇತೃತ್ವದಲ್ಲಿ ಬೆಳಿಗ್ಗೆಯಿಂದಲೇ ಧಾರ್ಮಿಕ ವಿಧಿವಿಧಾನಗಳು ನಡೆದವು. ವೇದಘೋಷ, ಸಾವಿರಾರು ಭಕ್ತರ ಜೈಕಾರಗಳ ನಡುವೆ ೧೦ ಗಂಟೆಗೆ ಶ್ರೀ ರಾಘವೇಶ್ವರ ಸ್ವಾಮೀಜಿಯವರು ಬ್ರಹ್ಮಕಲಶ ನೆರವೇರಿಸಿದರು.


ಜತೆಗೆ ಮೂಲಮಂತ್ರ ಹವನ, ಗಣಪತಿ ಅಥರ್ವಶೀರ್ಷ ಹವನ, ಶ್ರೀ ರುದ್ರಹವನ, ಪರಿವಾರ ದೇವರುಗಳಿಗೆ ನವಕಾಭಿಷೇಕ ಜರುಗಿತು. ಬಳಿಕ ಮಾಣಿಮಠ ಮಹಾಸಮಿತಿ ಅಧ್ಯಕ್ಷ ಹಾರಕೆರೆ ನಾರಾಯಣ ಭಟ್ ಅವರು ಗರ್ಭಾಗಾರದ ಶಿಖರದಲ್ಲಿ ರಜತ ಕಲಶಾಭಿಷೇಕ ನೆರವೇರಿಸಿದರು. ಮಧ್ಯಾಹ್ನ ಬ್ರಹ್ಮಕಲಶದ ಬಳಿಕ ನಿಯನೈಮಿತ್ತಿಕ ನಿರ್ಣಯ, ಪ್ರಾರ್ಥನೆ, ಪ್ರಸಾದ ವಿತರಣೆ, ಸಂಜೆ ಆಶ್ಲೇಷ ಬಲಿ ಸೇವೆ ನಡೆಯಿತು.


ಮಹಾಸಮಿತಿ ಪದಾಧಿಕಾರಿಗಳಾದ ಹಾರಕೆರೆ ನಾರಾಯಣ ಭಟ್, ಜನಾರ್ದನ ಭಟ್ ಬಂಗಾರಡ್ಕ, ಮೈಕೆ ಗಣೇಶ್ ಭಟ್, ಮಂಡಲ ಗುರಿಕ್ಕಾರರಾದ ಉದಯಕುಮಾರ್ ಖಂಡಿಗ, ವಾಸ್ತು ತಜ್ಞ ಮಹೇಶ್ ಮುನಿಯಂಗಳ ಮತ್ತಿತರರು ಪಾಲ್ಗೊಂಡಿದ್ದರು. ಗುರುವಾರ ಶ್ರೀದೇವರ ಮಂಗಲೋತ್ಸವ, ಅವಶಿಷ್ಟಹವನ, ಮಹಾಪೂರ್ಣಾಹುತಿ, ಶ್ರೀ ಲಕ್ಷ್ಮೀನಾರಾಯಣ ಹೃದಯ ಹವನ, ವೈದಿಕ ಮಂತ್ರಾಕ್ಷತೆ ಮತ್ತು ಪ್ರಸಾದ ವಿತರಣೆ ನಡೆಯಲಿದೆ.

LEAVE A REPLY

Please enter your comment!
Please enter your name here