ಬಂಟ್ವಾಳ: ಬೆಳ್ಳಾರೆಯ ಕರ್ನಾಟಕ ಪಬ್ಲಿಕ್ ಸ್ಕೂಲ್ನಲ್ಲಿ ಸೆ. 2ರಂದು ನಡೆದ ಜಿಲ್ಲಾಮಟ್ಟದ 17ರ ವಯೋಮಾನದ ಕರಾಟೆ ಸ್ಪರ್ಧೆಯಲ್ಲಿ ಬಂಟ್ವಾಳ ತಾಲೂಕಿನ ಅಮ್ಟೂರು- ಕರಿಂಗಾಣದ ದೇವ ಮಾತ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿ ಮಾಸ್ಟರ್ ಲಿಖಿತ್ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಜಿಲ್ಲೆಯ ವಿವಿಧ ಶಾಲೆಗಳಿಂದ ಆಗಮಿಸಿದ್ದ ಹಲವಾರು ಪ್ರತಿಭಾವಂತ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಕಠಿಣ ಪೈಪೋಟಿಯ ನಡುವೆಯೂ ಲಿಖಿತ್ ಅವರು ತಮ್ಮ ಕರಾಟೆ ಕೌಶಲ್ಯ, ಆತ್ಮವಿಶ್ವಾಸ ಹಾಗೂ ಶಿಸ್ತುಬದ್ಧ ಪ್ರದರ್ಶನದ ಮೂಲಕ ಅತ್ಯುತ್ತಮ ಸಾಧನೆ ಮಾಡಿ ಪ್ರಥಮ ಸ್ಥಾನ ಗಳಿಸಿದರು.
ಮಾಸ್ಟರ್ ಲಿಖಿತ್ ಅವರು ಅಮಟೂರಿನ ಶಶಿಕಾಂತ್ ಮತ್ತು ರೇಖಾ ದಂಪತಿಯ ಪುತ್ರರಾಗಿದ್ದಾರೆ. ವಿದ್ಯಾರ್ಥಿಯ ಸಾಧನೆಗೆ ದೇವ ಮಾತ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಸಂಚಾಲಕ ವಂದನೀಯ ಅನಿಲ್ ಕೆನ್ಯುಟ್ ಡಿಮೆಲ್ಲೋ, ಮುಖ್ಯೋಪಾಧ್ಯಾಯರಾದ ವಂದನೀಯ ನವೀನ್ ಪ್ರಕಾಶ್ ಪಿಂಟೋ, ಕರಾಟೆ ತರಬೇತುದಾರ ಸತೀಶ್, ಶಾಲಾ ಆಡಳಿತ ಮಂಡಳಿ, ಶಿಕ್ಷಕ-ರಕ್ಷಕ ಸಂಘದ ಸರ್ವ ಸದಸ್ಯರು, ಶಿಕ್ಷಕರು, ಶಿಕ್ಷಕೇತರ ವೃಂದ, ವಿದ್ಯಾರ್ಥಿ ಬಳಗ ಹಾಗೂ ಪೋಷಕರು ಅಭಿನಂದನೆ ಸಲ್ಲಿಸಿದ್ದಾರೆ.








