ಪಾಣೆಮಂಗಳೂರು: ಶ್ರೀ ಶಾರದಾ ಪ್ರೌಢಶಾಲೆ, ಪಾಣೆ ಮಂಗಳೂರು ಇಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು.
ಶಾಲಾ ಸಂಚಾಲಕರಾದ ಡಾ.ಪಿ. ವಿಶ್ವನಾಥ್ ನಾಯಕ್ ಅವರು ಧ್ವಜಾರೋಹಣ ನೆರವೇರಿಸಿದರು. ಬಳಿಕ ಮಾತನಾಡಿದ ಅವರು “ವಿಕಸಿತ ಭಾರತದ ಕಲ್ಪನೆ” ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಮುಂದಿನ ದಿನಗಳಲ್ಲಿ ಯುವಕರಾಗುವ ನೀವುಗಳು ಸುಭದ್ರ ದೇಶವನ್ನು ಮುನ್ನಡೆಸುವ ಕಾರ್ಯದಲ್ಲಿ ಕೈಜೋಡಿಸಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳ ಬಹುಮಾನ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಶಾಲಾ ಮುಖ್ಯೋಪಾಧ್ಯಾಯರು ಸ್ವಾತಂತ್ರ್ಯ ದಿನದ ಶುಭಾಶಯಗಳನ್ನು ತಿಳಿಸಿದರು. ಹಿರಿಯ ಶಿಕ್ಷಕಿ ವೀಣಾ ಕೆ. ಅವರು ದೇಶಕ್ಕಾಗಿ ಪ್ರಾಣ ತೆತ್ತ ವೀರ ಯೋಧರನ್ನು ಸ್ಮರಿಸಿ, ವಿದ್ಯಾರ್ಥಿಗಳು ಅವರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು. 10ನೇ ತರಗತಿಯ ವಿದ್ಯಾರ್ಥಿನಿ ತಪಸ್ವಿ ದೇಶಭಕ್ತಿ ಗೀತೆ ಹಾಡಿದರು. ವಿದ್ಯಾರ್ಥಿಗಳ ಬ್ಯಾಂಡ್ ವಾದನ ಕಾರ್ಯಕ್ರಮಕ್ಕೆ ವಿಶೇಷ ಮೆರಗು ನೀಡಿತು. ಶಾಲಾ ನಾಯಕಿ ಸಂಜನಾ ವಂದಿಸಿದರು. ತೇಜಸ್ವಿನಿ ಕಾರ್ಯಕ್ರಮ ನಿರೂಪಿಸಿದರು. ಸಂಯೋಜನೆಯನ್ನು ಶಿಕ್ಷಕಿ ಶ್ರೀಮತಿ ತೇಜಸ್ವಿನಿ ನಡೆಸಿಕೊಟ್ಟರು.








