ಸರ್ಕಾರಿ ಪಾಲಿಟೆಕ್ನಿಕ್ ಬಂಟ್ವಾಳದಲ್ಲಿ 80ನೇ ಸ್ವಾತಂತ್ರ್ಯೋತ್ಸವ ಆಚರಣೆ

0

ಬಂಟ್ವಾಳ: ಸರ್ಕಾರಿ ಪಾಲಿಟೆಕ್ನಿಕ್ ಬಂಟ್ವಾಳದಲ್ಲಿ ಭಾರತದ 80ನೇ ಸ್ವಾತಂತ್ರ್ಯೋತ್ಸವವನ್ನು ಅತ್ಯಂತ ಸಂಭ್ರಮ, ಸಡಗರ ಹಾಗೂ ದೇಶಭಕ್ತಿ ಭಾವನೆಯೊಂದಿಗೆ ಆಚರಿಸಲಾಯಿತು.

ಕಾರ್ಯಕ್ರಮದ ಅಂಗವಾಗಿ ಸಂಸ್ಥೆಯ ಪ್ರಾಂಶುಪಾಲರಾದ ಶ್ರೀ ನರಸಿಂಹ ಭಟ್ ಎಚ್. ಅವರು ರಾಷ್ಟ್ರಧ್ವಜಾರೋಹಣ ನೆರವೇರಿಸಿ, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಯನ್ನುದ್ದೇಶಿಸಿ ಸ್ವಾತಂತ್ರ್ಯೋತ್ಸವದ ಸಂದೇಶ ನೀಡಿದರು.

ತಮ್ಮ ಸಂದೇಶದಲ್ಲಿ ಅವರು, “ವಿದ್ಯಾರ್ಥಿಗಳು ತಾವು ಕಲಿಯುತ್ತಿರುವ ತಂತ್ರಜ್ಞಾನ ಹಾಗೂ ಕೌಶಲ್ಯಗಳನ್ನು ನಿರಂತರವಾಗಿ ಅಭಿವೃದ್ಧಿಪಡಿಸಿಕೊಂಡು, ದೇಶದ ಪ್ರಗತಿಗೆ ತಮ್ಮದೇ ಆದ ಮಹತ್ವದ ಕೊಡುಗೆ ನೀಡಬೇಕು. 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನಾಗಿ ರೂಪಿಸುವ ಜವಾಬ್ದಾರಿ ಇಂದಿನ ಯುವಜನತೆಯ ಮೇಲಿದೆ” ಎಂದು ಹೇಳಿದರು.

ಅದೇ ರೀತಿ, “ಸ್ವಚ್ಛತೆ ನಮ್ಮ ಮೊದಲ ಪಾಠ. ಸಂಸ್ಥೆಯ ಆವರಣದಲ್ಲಷ್ಟೇ ಅಲ್ಲದೆ, ನಮ್ಮ ಮನೆ, ಸಮಾಜ ಹಾಗೂ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬರದ್ದಾಗಿದೆ. ” ಎಂದು ಕರೆ ನೀಡಿದರು.

ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಸತ್ಯ, ಪ್ರಾಮಾಣಿಕತೆ, ನಿಸ್ವಾರ್ಥತೆ, ಸಮಯಪಾಲನೆ, ಸ್ವಾಧ್ಯಾಯ ಹಾಗೂ ಶಿಸ್ತು ಮುಂತಾದ ಉತ್ತಮ ಗುಣಗಳನ್ನು ರೂಢಿಸಿಕೊಂಡು, ಸಮಾಜಕ್ಕೆ ಮಾದರಿಯಾಗುವ ಉತ್ತಮ ವ್ಯಕ್ತಿಗಳಾಗಿ ಬೆಳೆಯಬೇಕು. ಪ್ರತಿಯೊಬ್ಬರೂ ಉತ್ತಮ ವ್ಯಕ್ತಿತ್ವವನ್ನು ಬೆಳೆಸಿಕೊಂಡರೆ, ಉತ್ತಮ ಸಮಾಜ ನಿರ್ಮಾಣವಾಗುತ್ತದೆ ಹಾಗೂ ಅಂತಿಮವಾಗಿ ಭಾರತವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವಲ್ಲಿ ಯಾವುದೇ ಸಂದೇಹವಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ದೇಶ, ರಾಜ್ಯ, ಬಂಟ್ವಾಳ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ಸ್ಮರಿಸಿ, ಹಲವಾರು ಸ್ಥಳೀಯ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಹೋರಾಟ ಹಾಗೂ ದೇಶಪ್ರೇಮವನ್ನು ಸ್ಮರಿಸಿ ಅವರಿಗೆ ಗೌರವ ನಮನ ಸಲ್ಲಿಸಿದರು.

ಸ್ವಾತಂತ್ರ್ಯೋತ್ಸವದ ಅಂಗವಾಗಿ ಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ವಿಭಾಗಾಧಿಕಾರಿಗಳು, ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿದ್ದರು. ದೇಶಭಕ್ತಿ ಗೀತೆಗಳು, ಸ್ವಾತಂತ್ರ್ಯೋತ್ಸವದ ಸಂದೇಶ ಹಾಗೂ ವಿವಿಧ ಕಾರ್ಯಕ್ರಮಗಳೊಂದಿಗೆ ಸಮಾರಂಭ ನೆರವೇರಿತು.

LEAVE A REPLY

Please enter your comment!
Please enter your name here