ವಿವಿಧ ಕಾಲೇಜುಗಳ 159 ವಿದ್ಯಾರ್ಥಿಗಳ ಪರೀಕ್ಷೆ : 71 ನೆಗೆಟಿವ್ 1 ಪಾಸಿಟಿವ್
ಬಂಟ್ವಾಳ: ವಿದ್ಯಾರ್ಥಿಗಳು ಡ್ರಗ್ಸ್ ವ್ಯಸನಿಗಳಾಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ ಮಂಗಳೂರು ಪೊಲೀಸರಿಂದ ದಿಟ್ಟ ಕ್ರಮವೊಂದು ಸಾರ್ವಜನಿಕ ಶ್ಲಾಘನೆಗೆ ವ್ಯಕ್ತವಾಗಿದೆ. ಮಂಗಳೂರು ಪೊಲೀಸ್ ಕಮಿಷನರ್ ಮಾರ್ಗದರ್ಶನದಲ್ಲಿ, ಎಸಿಪಿಗಳ ನೇತೃತ್ವದಲ್ಲಿ ದಕ್ಷಿಣ ಮತ್ತು ಕೇಂದ್ರ ವಿಭಾಗದ ಪೊಲೀಸರು ಕೋಟೆಕಾರ್ ಬೀರಿ ಹಾಗೂ ಬಂಟ್ಸ್ ಭವನ್ ಕೊಣಾಜೆ ಎರಡು ಕಡೆ ವಿದ್ಯಾರ್ಥಿಗಳ ಪರೀಕ್ಷೆ ನಡೆಸಿದ್ದಾರೆ.
ಕೋಟೆಕಾರ್ ಬೀರಿಯಲ್ಲಿ ಎಸ್‌ಡಿಎಂ ಕಾಲೇಜು, ನಿಟ್ಟೆ ಕೆ.ಎಸ್. ಹೆಗ್ಡೆ, ಅಲೋಶಿಯಸ್ ಕಾಲೇಜು, ಪಿಎ ಕಾಲೇಜು, ಬ್ಯಾರೀಸ್ ಇನ್‌ಸ್ಟಿಟ್ಯೂಟ್, ಟಿಪ್ಪು ಸುಲ್ತಾನ್ ಕಾಲೇಜು ಮತ್ತು ಕೆನರಾ ಕಾಲೇಜಿನ 72 ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಒಳಪಡಿಸಲಾಯಿತು. ಇದರಲ್ಲಿ 71 ನೆಗೆಟಿವ್ ಹಾಗೂ 1 ಪಾಸಿಟಿವ್ ದೊರೆತಿದೆ. ಕೊಣಾಜೆ ವ್ಯಾಪ್ತಿಯಲ್ಲಿ ಪಿಎ ಕಾಲೇಜಿನ 2 ಕಾಲೇಜು ಬಸ್ ಗಳನ್ನು ನಿಲ್ಲಿಸಿ 87 ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. 87 ಕೂಡಾ ನೆಗೆಟಿವ್ ವರದಿಯಾಗಿದೆ. ಪರೀಕ್ಷೆಗೆ ಮಲ್ಟಿ ಡ್ರಗ್ ಟೆಸ್ಟಿಂಗ್ ಕಿಟ್ ಬಳಸಲಾಗಿದೆ.
ಜು.28ರಂದು ಸಂಜೆ 4.30 ರಿಂದ 6.30ರ ಮಧ್ಯೆ ಪೊಲೀಸರು ಈ ಕ್ರಮ ಅನುಸರಿಸಿದ್ದು, ಜಿಲ್ಲೆಯಲ್ಲಿ ಡ್ರಗ್ಸ್ ನಿಯಂತ್ರಣಕ್ಕೆ ಪೊಲೀಸರ ದಿಟ್ಟ ಹೆಜ್ಜೆ ಎಂದು ಹೇಳಬಹುದಾಗಿದೆ. ನಿರಂತರವಾಗಿ ಈ ರೀತಿಯ ಪರೀಕ್ಷೆ ನಡೆಸಿದ್ದಲ್ಲಿ ಡ್ರಗ್ಸ್ ಸೇವನೆ ತಡೆಯೊಂದಿಗೆ ಮಾಫಿಯಾವನ್ನು ಸಹಜವಾಗಿ ನಿಯಂತ್ರಿಸಬಹುದಾಗಿದೆ.








