ಪುಂಜಾಲಕಟ್ಟೆ: ಬಿ.ಸಿ.ರೋಡ್‌ನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಹತ್ಯೆಯಾದ ಯುವತಿ ಲಾವಣ್ಯ ಅವರ ನಿವಾಸಕ್ಕೆ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ಶನಿವಾರ ಭೇಟಿ ನೀಡಿ ಸರಕಾರದಿಂದ ಮಂಜೂರಾದ ಮುಖ್ಯಮಂತ್ರಿಗಳ ಪರಿಹಾರ ಧನ 10 ಲಕ್ಷ ರೂ.ಗಳ ಮಂಜೂರಾತಿಪತ್ರವನ್ನು ಹೆತ್ತವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ದು:ಖತಪ್ತ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಅವರು ಮಾತನಾಡಿ, ಬಾಳಪ್ಪ ಗೌಡ ಅವರು ಬಹಳ ಕಷ್ಟದಲ್ಲಿ ಮೂವರು ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಿದ್ದಾರೆ. ಮನೆಗೆ ಆಧಾರವಾಗಬೇಕಿದ್ದ ಲಾವಣ್ಯ ಅವರ ನಿಧನದಿಂದ ಕುಟುಂಬ ಕಂಗಾಲಾಗಿದೆ. ಸಚಿವರಾದ ಯು.ಟಿ.ಖಾದರ್, ಮಾಜಿ ಸಚಿವ ಬಿ.ರಮಾನಾಥ ರೈ ಹಾಗೂ ನನ್ನ ವಿನಂತಿ ಮೇರೆಗೆ ಮಾನವೀಯತೆಯ ನೆಲೆಯಲ್ಲಿ ಮುಖ್ಯಮಂತ್ರಿ ಅವರು ಹತ್ತು ಲಕ್ಷ ರೂ.ಗಳ ಪರಿಹಾರ ಧನ ಮಂಜೂರುಗೊಳಿಸಿದ್ದಾರೆ ಎಂದರು. ಕೊಯಿಲ ಪಶು ವೈದ್ಯಕೀಯ ಕಾಲೇಜಿನಲ್ಲಿ ಲಾವಣ್ಯ ಸಹೋದರಿಗೆ ಗುತ್ತಿಗೆ ಆಧಾರದಲ್ಲಿ ಉದ್ಯೋಗ ಒದಗಿಸಿಕೊಡುವುದಾಗಿ ಅವರು ಭರವಸೆ ನೀಡಿದರು.
ಪ್ರಮುಖರಾದ ಕೆ.ಮಾಯಿಲಪ್ಪ ಸಾಲ್ಯಾನ್, ಪುತ್ತೂರು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಕೃಷ್ಣಪ್ರಸಾದ್ ಆಳ್ವ, ಯು.ಟಿ.ತೌಸೀಫ್, ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಡಾ.ರಾಜಾರಾಂ ಕೆ.ಬಿ., ಜಯಪ್ರಕಾಶ್ ಬದಿನಾರು, ಸಂಜೀವ ಗೌಡ ಅಗಲ, ಅಬ್ದುಲ್ ರಹಿಮಾನ್, ಬಾಬು ನಾಯ್ಕ ಉಪಸ್ಥಿತರಿದ್ದರು.








