ವಿಟ್ಲ: ಬಂಟ್ವಾಳ ತಾಲೂಕಿನ ಇಡ್ಕಿದು ಸೇವಾ ಸಹಕಾರಿ ಸಂಘವು 2025-26ನೇ ಸಾಲಿನಲ್ಲಿ ರೂ. 923.42 ಕೋಟಿ ಮೊತ್ತದ ಒಟ್ಟು ವ್ಯವಹಾರ ಮಾಡಿ ರೂ.2.85ಕೋಟಿ ನಿವ್ವಳ ಲಾಭ ಗಳಿಸಿ ಉತ್ತಮ ಆರ್ಥಿಕ ಸಾಧನೆ ದಾಖಲಿಸಿದ್ದು, ನಮ್ಮ ಸಂಘವು ಸದಸ್ಯರ ವಿಶ್ವಾಸದಿಂದ ಅಭಿವೃದ್ಧಿಯ ಹೊಸ ಶಿಖರ ತಲುಪಿದೆ ಎಂದು ಸಂಘದ ಅಧ್ಯಕ್ಷರಾದ ಸುಧಾಕರ್ ಶೆಟ್ಟಿ ಬೀಡಿನಮಜಲು ತಿಳಿಸಿದರು.
ಅವರು ಸಂಘದ ಪ್ರಧಾನ ಕಚೇರಿಯಲ್ಲಿ ನಡೆದ ನಿರ್ದೇಶಕರ ಸಭೆಯಲ್ಲಿ ಮಾಹಿತಿ ನೀಡಿದರು. ಬಳಿಕ ಮಾತನಾಡಿದ ಅವರು ಸಂಘದಲ್ಲಿ ಸದಸ್ಯರ ಷೇರು ಬಂಡವಾಳವು ಸುಮಾರು 4.45 ಕೋಟಿ ರೂಪಾಯಿ ತಲುಪಿದ್ದು, ವಿವಿಧ ಮೀಸಲು ನಿಧಿಗಳು ಹಾಗೂ ಅಭಿವೃದ್ಧಿ ನಿಧಿಗಳು ಮತ್ತಷ್ಟು ಬಲಗೊಂಡಿವೆ. ಸದಸ್ಯರಿಂದ ಸಂಗ್ರಹಿಸಿದ ಠೇವಣಿಗಳ ಮೊತ್ತ ಸುಮಾರು ರೂ 121.00 ಕೋಟಿ ತಲುಪಿರುವುದು ಸಂಘದ ಮೇಲಿನ ಜನರ ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ. ಸಂಘವು ಕೃಷಿ, ಮನೆ ನಿರ್ಮಾಣ, ಚಿನ್ನಾಭರಣ, ವಾಹನ, ಶಿಕ್ಷಣ, ವ್ಯಾಪಾರ ಹಾಗೂ ಇತರೆ ವಿವಿಧ ಉದ್ದೇಶಗಳಿಗೆ ಸುಮಾರು ರೂ. 84.86ಕೋಟಿಗೂ ಅಧಿಕ ಸಾಲವನ್ನು ವಿತರಿಸಿ ಗ್ರಾಮೀಣ ಆರ್ಥಿಕ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದೆ. ಸಂಘದ ನಗದು, ಬ್ಯಾಂಕ್ ಠೇವಣಿಗಳು, ಸ್ಥಿರಾಸ್ತಿಗಳು, ಹೂಡಿಕೆಗಳು ಹಾಗೂ ಇತರ ಆಸ್ತಿಗಳು ದೃಢ ಆರ್ಥಿಕ ನಿರ್ವಹಣೆಯನ್ನು ಪ್ರತಿಬಿಂಬಿಸುತ್ತಿವೆ. ಸದಸ್ಯರಿಗೆ ಆಧುನಿಕ ಬ್ಯಾಂಕಿಂಗ್ ಹಾಗೂ ಸಹಕಾರ ಸೇವೆಗಳನ್ನು ನೀಡುವಲ್ಲಿ ಸಂಘ ಯಶಸ್ವಿಯಾಗಿದೆ ಎಂದರು.
ಸಂಘವು ಕೇವಲ ಬ್ಯಾಂಕಿಂಗ್ ಸೇವೆಗಳಿಗೆ ಸೀಮಿತವಾಗದೆ, ಸದಸ್ಯರ ಕಲ್ಯಾಣಕ್ಕೆ ಆದ್ಯತೆ ನೀಡುತ್ತಿದ್ದು, ಯಶಸ್ವಿನಿ ಆರೋಗ್ಯ ವಿಮೆ, ಬೆಳೆ ವಿಮೆ, ಸರ್ಕಾರದ ವಿವಿಧ ಕಲ್ಯಾಣ ಯೋಜನೆಗಳು ಹಾಗೂ ಸಹಕಾರಿ ಯೋಜನೆಗಳ ಮಾಹಿತಿಯನ್ನು ಸಕಾಲದಲ್ಲಿ ಸದಸ್ಯರಿಗೆ ತಲುಪಿಸುವ ಮೂಲಕ ಸೇವೆಯನ್ನು ವಿಸ್ತರಿಸುತ್ತಾ ಬಂದಿದೆ. ಆರೋಗ್ಯಾಮೃತ ಯೋಜನೆಯಲ್ಲಿ ಪ್ರಧಾನ ಮಂತ್ರಿ ಜನೌಷದಿ ಕೇಂದ್ರ ವಿಧ್ಯಾಮೃತ ಯೋಜನೆಯಲ್ಲಿ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ನೆರವು, ಹೀಗೆ ಹಲವಾರು ಕಾರ್ಯಕ್ರಮಗಳ ಮೂಲಕ ಸಮಾಜ ಸೇವೆ ಯಲ್ಲಿಯೂ ತೊಡಗಿಕೊಂಡಿದೆ. ಸಂಘದ ವ್ಯಾಪ್ತಿಯ ಪ್ರಮುಖ ರಸ್ತೆಗೆ ಕಾಂಕ್ರೀಟೀಕರಣ ಗೊಳಿಸಿ ಜಿಲ್ಲೆಯ ಮೊದಲ ಸಾರ್ವಜನಿಕ ಸಹಕಾರಿ ಪಥ ನಿರ್ಮಿಸಿದ ಸಹಕಾರಿ ಸಂಘ ನಮ್ಮದು. ಸದಸ್ಯ ಠೇವಣಿದಾರರ ಅಚಲ ನಂಬಿಕೆ ಹಾಗೂ ಸಾಲಗಾರರ ಶಿಸ್ತಿನ ಸಕಾಲದ ಸಾಲ ಮರುಪಾವತಿ ಸಂಸ್ಥೆಯ ಪ್ರಗತಿಗೆ ಭದ್ರ ಅಡಿಪಾಯವಾಗಿ, ಅಭಿವೃದ್ಧಿಯ ಹೊಸ ಮೈಲಿಗಲ್ಲುಗಳನ್ನು ಸಾಧಿಸಲು ಸಹಕಾರಿಯಾಗಿದೆ.
ಸಂಘದ ನಿರ್ದೇಶಕ ಮಂಡಳಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಸಿಬ್ಬಂದಿಯ ಸಮರ್ಪಿತ ಸೇವೆಯಿಂದ ಈ ಸಾಧನೆ ಸಾಧ್ಯವಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಸದಸ್ಯ ಸ್ನೇಹಿ ಯೋಜನೆಗಳನ್ನು ಜಾರಿಗೊಳಿಸಿ ಗ್ರಾಮೀಣ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದರು.
ಸಂಘದ ಉಪಾಧ್ಯಕ್ಷರಾದ ರಾಮ್ ಭಟ್ ನೀರಪಳಿಕೆ, ನಿರ್ದೇಶಕರಾದ ಚಂದ್ರಹಾಸ ಕೆಂರ್ದೆಲು, ಜಯಂತ ಕಂಪ, ನವೀನ ಕೆ.ಪಿ. ಪಾಂಡೇಲು, ಹೃಷಿಕೇಶ್ ಮುಕ್ಕುಡ,ಉಮೇಶ ವಡ್ಯರ್ಪೆ, ಲೋಹಿತಾಶ್ವ ಎಂ. ಮುಂಡ್ರಬೈಲು, ಸತೀಶ ಕೆ. ಅಳಕೆಮಜಲು, ಆನಂದ ಕೆ. ಅಡ್ಯಾಲು, ಪದ್ಮಾವತಿ ಕುವೆತ್ತಿಲ, ವಿದ್ಯಾ ವಿ. ಮುದಲೆಗುಂಡಿ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರವೀಂದ್ರನಾಥ್ ಮೇಲಾಂಟ ಉಪಸ್ಥಿತರಿದ್ದರು.
ಸದಸ್ಯರ ವಿಶ್ವಾಸವೇ ನಮ್ಮ ಶಕ್ತಿ ಗ್ರಾಮೀಣ ಅಭಿವೃದ್ಧಿಯೇ ನಮ್ಮ ಗುರಿ

ವರ್ಷದಿಂದ ವರ್ಷಕ್ಕೆ ನಮ್ಮ ಸಂಘವು ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ. “ಸದಸ್ಯರ ವಿಶ್ವಾಸವೇ ನಮ್ಮ ಶಕ್ತಿ – ಗ್ರಾಮೀಣ ಅಭಿವೃದ್ಧಿಯೇ ನಮ್ಮ ಗುರಿ” ಎಂಬ ಸಂಕಲ್ಪದಲ್ಲಿ ಇಡ್ಕಿದು ಸೇವಾ ಸಹಕಾರಿ ಸಂಘವು ಮುನ್ನಡೆಯುತ್ತಿದೆ. ಸಂಘದ ಅಭಿವೃದ್ಧಿ ಮತ್ತು ಸದಸ್ಯರ ಠೇವಣಿದಾರರ ಹಿತ ಕಾಯುವುದೇ ನಮ್ಮ ಪ್ರಥಮ ಆಧ್ಯತೆ. ಮುಂದಿನ ದಿನಗಳಲ್ಲಿ ಇನ್ನಷ್ಟು ತಂತ್ರಜ್ಞಾನ ಆಧಾರಿತ, ಪಾರದರ್ಶಕ ಹಾಗೂ ಸದಸ್ಯ ಸ್ನೇಹಿ ಸೇವೆಗಳನ್ನು ನೀಡುವ ಮೂಲಕ ಸಂಘವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ಸಂಕಲ್ಪ ಹೊಂದಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ತಂತ್ರಜ್ಞಾನ ಆಧಾರಿತ, ಪಾರದರ್ಶಕ ಹಾಗೂ ಸದಸ್ಯ ಸ್ನೇಹಿ ಸೇವೆಗಳನ್ನು ನೀಡುವ ಮೂಲಕ ಸಂಘವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವ ಸಂಕಲ್ಪ ಹೊಂದಿದ್ದೇವೆ. ಈ ಯಶಸ್ಸಿಗೆ ಕಾರಣರಾದ ಎಲ್ಲಾ ಸದಸ್ಯರು, ಠೇವಣಿದಾರು, ಗ್ರಾಹಕರು, ನಿರ್ದೇಶಕ ಮಂಡಳಿ ಮತ್ತು ಸಿಬ್ಬಂದಿ ವರ್ಗದವರಿಗೆ ಆಭಾರಿಯಾಗಿದ್ದೇವೆ. ಮುಂದೆಯೂ ತಮ್ಮೆಲ್ಲರ ಸಹಕಾರವನ್ನು ಯಾಚಿಸುತ್ತಿದ್ದೇವೆ.
ಬಿ. ಸುಧಾಕರ್ ಶೆಟ್ಟಿ, ಅಧ್ಯಕ್ಷರು, ಇಡ್ಕಿದು ಸೇವಾ ಸಹಕಾರಿ ಸಂಘ ನಿ.








