ಮಂಗಳೂರು: ನಗರದ ಪಡೀಲ್ನಲ್ಲಿರುವ ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಪ್ರೊಫೆಶನಲ್ ಎಜ್ಯುಕೇಶನ್ ಸಂಸ್ಥೆಯು ಇರಾಕ್ ದೇಶದ ಕುರ್ದಿಸ್ತಾನ್ನಲ್ಲಿರುವ ಬ್ರೈಟ್ ವೊಕೇಶನಲ್ ಆಂಡ್ ಟೆಕ್ನಿಕಲ್ ಇನ್ಸ್ಟಿಟ್ಯೂಟ್ ಜತೆಗೆ ಒಡಂಬಡಿಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಎರಡೂ ಸಂಸ್ಥೆಗಳ ಪ್ರಮುಖರು ಮಹತ್ವದ ಮಾತುಕತೆ ನಡೆಸಿದ್ದಾರೆ.
ಇರಾಕ್ ಶಿಕ್ಷಣ ಸಂಸ್ಥೆಯ ನಾಲ್ವರು ಪ್ರಾಧ್ಯಾಪಕರು ಹಾಗೂ 11 ವಿದ್ಯಾರ್ಥಿಗಳನ್ನೊಳಗೊಂಡ ನಿಯೋಗವು ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಪ್ರೊಫೆಶನಲ್ ಎಜ್ಯುಕೇಶನ್ಗೆ ಭೇಟಿ ನೀಡಿ ಸಂಸ್ಥೆಯ ಪ್ರಾಂಶುಪಾಲ ಡಾ|ಜ್ಞಾನೇಶ್ವರ್ ಪೈ ಮಾರೂರು ಅವರೊಂದಿಗೆ ಮಾತುಕತೆ ನಡೆಸಿತು. ಸಂಸ್ಥೆಯ ಡಿಜಿಟಲ್ ಫಾರೆನ್ಸಿಕ್ ವಿಭಾಗ ಸೇರಿದಂತೆ ವಿವಿಧ ವಿಭಾಗಗಳಿಗೆ ಭೇಟಿ ನೀಡಿದ ನಿಯೋಗದ ಸದಸ್ಯರು ಸಂಸ್ಥೆಯ ಕಾರ್ಯನಿರ್ವಹಣೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ, ಎರಡೂ ಸಂಸ್ಥೆಗಳ ಒಡಂಬಡಿಕೆಗೆ ಉತ್ಸುಕತೆ ತೋರಿಸಿದ್ದಾರೆ.

ಈ ಮಾತುಕತೆ ಕುರಿತು ಮಾತನಾಡಿದ ಡಾ|ಜ್ಞಾನೇಶ್ವರ್ ಪೈ ಮಾರೂರು, ಇರಾಕ್ನ ಬ್ರೈಟ್ ವೊಕೇಶನಲ್ ಆಂಡ್ ಟೆಕ್ನಿಕಲ್ ಇನ್ಸ್ಟಿಟ್ಯೂಟ್ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ನಮ್ಮ ಸಂಸ್ಥೆಗೆ ಆಗಮಿಸಿ ಇಲ್ಲಿನ ಡಿಜಿಟಲ್ ಫಾರೆನ್ಸಿಕ್ಸ್ ಕುರಿತು ಅಧ್ಯಯನ ನಡೆಸಿದ್ದಾರೆ. ಈ ವರ್ಷಾಂತ್ಯದಲ್ಲಿ ನಮ್ಮ ಸಂಸ್ಥೆಯ ಡಿಜಿಟಲ್ ಫಾರೆನ್ಸಿಕ್ಸ್ ವಿದ್ಯಾರ್ಥಿಗಳನ್ನು ಇರಾಕ್ನ ಶಿಕ್ಷಣ ಸಂಸ್ಥೆಗೆ ಕಳುಹಿಸಿ ಅಧ್ಯಯನಕ್ಕೆ ಪೂರಕ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಈ ಮಾತುಕತೆ ನಡೆಸಲಾಗಿದೆ ಎಂದು ತಿಳಿಸಿದರು.
ನಿಟ್ಟೆ ವಿಶ್ವವಿದ್ಯಾನಿಲಯದಲ್ಲಿ ಒಟ್ಟು 170ಕ್ಕೂ ಅಧಿಕ ಕೋರ್ಸ್ಗಳಿವೆ. ಪಡೀಲ್ನಲ್ಲಿರುವ ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಪ್ರೊಫೆಶನಲ್ ಎಜ್ಯುಕೇಶನ್ ಇದುವರೆಗೆ ದುಬೈ, ಮಲೇಷ್ಯಾ, ಸಿಂಗಾಪುರ ದೇಶಗಳ ಶಿಕ್ಷಣ ಸಂಸ್ಥೆಗಳ ಜತೆ ಒಡಂಬಡಿಕೆ ಮಾಡಿಕೊಂಡಿದ್ದು, ಇದೀಗ ಇರಾಕ್ ಶಿಕ್ಷಣ ಸಂಸ್ಥೆ ಜತೆ ಮಾತುಕತೆ ಹಂತದಲ್ಲಿದ್ದೇವೆ ಎಂದರು.
ಇರಾಕ್ ದೇಶದ ಬ್ರೈಟ್ ವೊಕೇಶನಲ್ ಆಂಡ್ ಟೆಕ್ನಿಕಲ್ ಇನ್ಸ್ಟಿಟ್ಯೂಟ್ನ ಬೋರ್ಡ್ ಆಫ್ ಟ್ರಸ್ಟೀಸ್ ಚೇರ್ಮನ್ ಡಾ|ದನ್ಯರ್ ಅಬೂಬಕ್ಕರ್ ಸಾಲಿ ಮಾತನಾಡಿ, ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಪ್ರೊಫೆಶನಲ್ ಎಜ್ಯುಕೇಶನ್ ಜತೆ ಒಡಂಬಡಿಕೆ ನಡೆದರೆ ಎರಡೂ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳ ಭವಿಷ್ಯದ ಅಧ್ಯಯನಕ್ಕೆ ಅನುಕೂಲವಾಗಲಿದೆ. ನಿಟ್ಟೆ ವಿಶ್ವವಿದ್ಯಾನಿಲಯವು ಸರ್ವ ಸೌಕರ್ಯಗಳೊಂದಿಗೆ ವಿದ್ಯಾರ್ಥಿಗಳಿಗೆ ಅತ್ಯುತ್ತಮ ಶಿಕ್ಷಣ ನೀಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನಿಟ್ಟೆ ವಿಶ್ವವಿದ್ಯಾನಿಲಯದ ಇಂಟರ್ ನ್ಯಾಶನಲ್ ರಿಲೇಶನ್ಸ್ನ ಉಪನಿರ್ದೇಶಕ ಡಾ|ಸಯ್ಯದ್ ರಿಯಾಝ್ ಅಹಮ್ಮದ್, ಇರಾಕ್ ದೇಶದ ಬೈಟ್ ವೊಕೇಶನಲ್ ಆಂಡ್ ಟೆಕ್ನಿಕಲ್ ಇನ್ಸ್ಟಿಟ್ಯೂಟ್ನ ಮೆಡಿಕಲ್ ಲ್ಯಾಬ್ ಟೆಕ್ನಾಲಜಿ ವಿಭಾಗದ ಪ್ರೊ|ಬೆಸ್ಟನ್ ಯೂಸು- ಅಬ್ದುಲ್ಲಾ ಮತ್ತು ನಿಯೋಗದ ವಿದ್ಯಾರ್ಥಿ ಸದಸ್ಯರು ಇದ್ದರು.
ನಿಟ್ಟೆ ಪಡೀಲ್ ಸಂಸ್ಥೆ ಪರವಾಗಿ ಸುದ್ದಿ ಮೀಡಿಯಾದಿಂದ ಇರಾಕ್ ನಿಯೋಗದ ಸಂದರ್ಶನ
ಸುದ್ದಿ ಮೀಡಿಯಾ ಪರವಾಗಿ ಸಂಸ್ಥೆಯ ವಿದ್ಯಾರ್ಥಿನಿ ಅನನ್ಯಾ ಲಕ್ಷ್ಮೀ ಬನಾನ್ ಅವರು ಇರಾಕ್ ನಿಯೋಗದ ಪ್ರಮುಖರು ಮತ್ತು ಅಲ್ಲಿನ ವಿದ್ಯಾರ್ಥಿಗಳ ಸಂದರ್ಶನ ನೆರವೇರಿಸಿಕೊಟ್ಟರು. ಬಳಿಕ ಸುದ್ದಿ ಮೀಡಿಯಾ ಚಾನೆಲ್ ವತಿಯಿಂದ ನಿಟ್ಟೆ ಸಂಸ್ಥೆಯ ಪಡೀಲ್ ಕ್ಯಾಂಪಸ್ಸಿನ ಸಾಧಕ ವಿದ್ಯಾರ್ಥಿಗಳಾದ-ಎಐ ಫೇಸ್ ರೆಕಗ್ನಿಶನ್ ಅಟೆಂಡೆನ್ಸ್ ಸಿಸ್ಟಮ್ ಅಭಿವೃದ್ಧಿಪಡಿಸಿದ ಪ್ರಥಮ ಬಿಸಿಎ ವಿದ್ಯಾರ್ಥಿ ಅರುಣ್ ಕುಮಾರ್ ವಿ., ಆ್ಯಂಕರಿಂಗ್ ಕ್ಷೇತ್ರದಲ್ಲಿ ಛಾಪು ಮೂಡಿಸಿದ ಬಿಬಿಎ 4ನೇ ವರ್ಷದ ವಿದ್ಯಾರ್ಥಿನಿ ಅನನ್ಯಾ ಲಕ್ಷ್ಮೀ ಬನಾನ್, ಆರ್ಮ್ ರೆಸ್ಲಿಂಗ್ನಲ್ಲಿ 75 ಕೆಜಿ ಒಳಗಿನ ಯುವಕರ ವಿಭಾಗದಲ್ಲಿ ಕರ್ನಾಟಕಕ್ಕೆ ಚಿನ್ನದ ಪದಕ ತಂದುಕೊಟ್ಟ ಬಿಬಿಎ ಹಾನರ್ಸ್ ವಿದ್ಯಾರ್ಥಿ ತನಿಷ್ ವಾಲೆ ಅವರ ಸಂದರ್ಶನ ನಡೆಸಲಾಯಿತು.

ಇಂದು ಪ್ರಸಾರ
ನಿಟ್ಟೆ ಪಡೀಲ್ ಸಂಸ್ಥೆ ಪರವಾಗಿ ಸುದ್ದಿ ಮೀಡಿಯಾದಿಂದ ಇರಾಕ್ ನಿಯೋಗದೊಂದಿಗೆ ನಡೆಸಲಾದ ಸಂದರ್ಶನ ಜು.24ರಂದು ಸಂಜೆ 4 ಗಂಟೆಗೆ ಸುದ್ದಿ ನ್ಯೂಸ್ ಯೂ ಟ್ಯೂಬ್ ಚಾನೆಲ್ನಲ್ಲಿ ಪ್ರಸಾರವಾಗಲಿದೆ.
ಇರಾಕ್ ನಿಯೋಗದೊಂದಿಗೆ ಡಾ.ಯು.ಪಿ. ಶಿವಾನಂದ ಮಾತುಕತೆ
ಇದೇ ಸಂದರ್ಭ ಇರಾಕ್ನ ಬ್ರೈಟ್ ವೊಕೇಶನಲ್ ಆಂಡ್ ಟೆಕ್ನಿಕಲ್ ಇನ್ಸ್ಟಿಟ್ಯೂಟ್ ಪ್ರಮುಖರೊಂದಿಗೆ ಸುದ್ದಿ ಸಮೂಹ ಸಂಸ್ಥೆಗಳ ಸಂಸ್ಥಾಪಕರು ಹಾಗೂ ಆಡಳಿತ ನಿರ್ದೇಶಕ ಡಾ.ಯು.ಪಿ.ಶಿವಾನಂದ ಅವರು ಮಾತುಕತೆ ನಡೆಸಿದರು. ಕರ್ನಾಟಕದ ಪತ್ರಿಕೋದ್ಯಮದ ಕುರಿತು ಇರಾಕ್ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ ಡಾ.ಯು.ಪಿ.ಶಿವಾನಂದರು, ಜನರಿಗೆ ವಿಶ್ವಾಸಾರ್ಹ ಸುದ್ದಿಗಳನ್ನು ನೀಡುತ್ತಿರುವ ಸುದ್ದಿ ಬಿಡುಗಡೆ ಪತ್ರಿಕೆಯ ಜನಪರ ಕಾರ್ಯಗಳು, ಪತ್ರಿಕೆಯ ಜತೆಗೆ ಜನತೆ ಹೊಂದಿರುವ ಭಾವನಾತ್ಮಕ ಸಂಬಂಧಗಳನ್ನು ವಿವರಿಸಿದರು.
ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಪ್ರೊಫೆಶನಲ್ ಎಜ್ಯುಕೇಶನ್ ಪಡೀಲ್ ಕ್ಯಾಂಪಸ್ನ ಪ್ರಾಂಶುಪಾಲ ಡಾ|ಜ್ಞಾನೇಶ್ವರ್ ಪೈ ಮಾರೂರು, ನಿಟ್ಟೆ ವಿಶ್ವವಿದ್ಯಾನಿಲಯದ ಇಂಟರ್ ನ್ಯಾಶನಲ್ ರಿಲೇಶನ್ಸ್ನ ಡೆಪ್ಯೂಟಿ ಡೈರೆಕ್ಟರ್ ಡಾ|ಸಯ್ಯದ್ ರಿಯಾಝ್ ಅಹಮ್ಮದ್, ಇರಾಕ್ ದೇಶದ ಬ್ರೈಟ್ ವೊಕೇಶನಲ್ ಆಂಡ್ ಟೆಕ್ನಿಕಲ್ ಇನ್ಸ್ಟಿಟ್ಯೂಟ್ನ ಬೋರ್ಡ್ ಆಫ್ ಟ್ರಸ್ಟೀಸ್ ಚೇರ್ಮನ್ ಡಾ|ದನ್ಯರ್ ಅಬೂಬಕ್ಕರ್ ಸಾಲಿ, ಮೆಡಿಕಲ್ ಲ್ಯಾಬ್ ಟೆಕ್ನಾಲಜಿ ವಿಭಾಗದ ಪ್ರೊ|ಬೆಸ್ಟನ್ ಯೂಸುಫ್ ಅಬ್ದುಲ್ಲಾ ಮತ್ತು ನಿಯೋಗದ ವಿದ್ಯಾರ್ಥಿ ಸದಸ್ಯರು, ಸುದ್ದಿ ಬಿಡುಗಡೆಯ ಭಾಸ್ಕರ ರೈ ಕಟ್ಟ, ಪುತ್ತೂರು ಸುದ್ದಿ ಸೆಂಟರ್ ಮತ್ತು ಸ್ಟ್ರಿಂಜರ್ ಇನ್ಚಾರ್ಜ್ ರಾಜೇಶ್ ಎಂ.ಎಸ್., ಸುದ್ದಿ ಮೀಡಿಯಾ ಬೆಳ್ತಂಗಡಿಯ ದಾಮೋದರ ದೊಂಡೋಲೆ, ಸುದ್ದಿ ಮೀಡಿಯಾ ಪುತ್ತೂರಿನ ಉಮೇಶ್ ಮಿತ್ತಡ್ಕ, ಗೌತಮ್ ಶೆಟ್ಟಿ, ಕ್ಯಾಮರಾಮ್ಯಾನ್ ಕಾರ್ತಿಕ್ ಕರ್ಕೇರ, ಸುದ್ದಿ ಮೀಡಿಯಾ ಹೌಸ್ ಮಂಗಳೂರು ಸಂಪಾದಕ ಸಂದೀಪ್ ವಾಗ್ಲೆ ಇದ್ದರು.








