ಬಂಟ್ವಾಳ: ತಾಲೂಕಿನ ಕುರಿಯಾಳ ಗ್ರಾಮದ ದಾಸೋಟ್ಟು-ಕುಕ್ಕಾಜೆ ನಿವಾಸಿ ರಮೇಶ್ ಪೂಜಾರಿ ಅವರ ಮನೆಯ ಹಿಂಭಾಗ ಹಾಗೂ ಅದಕ್ಕೆ ಹೊಂದಿಕೊಂಡಿದ್ದ ಬಚ್ಚಲು ಮನೆ, ಹಸುವಿನ ಕೊಟ್ಟಿಗೆಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿ ಸಂಪೂರ್ಣ ಸುಟ್ಟು ಭಸ್ಮವಾದ ಘಟನೆ ರವಿವಾರ ರಾತ್ರಿ ಸಂಭವಿಸಿದೆ.

ಅದೃಷ್ಟವಶಾತ್ ಸ್ಥಳೀಯ ನಿವಾಸಿಗಳು ಸಮಯಪ್ರಜ್ಞೆ ಮೆರೆದು ಕೊಟ್ಟಿಗೆಯೊಳಗಿದ್ದ ದನಗಳನ್ನು ಸುರಕ್ಷಿತವಾಗಿ ಹೊರಗೆ ಕರೆತಂದಿದ್ದರಿಂದ ಯಾವುದೇ ಜಾನುವಾರುಗಳಿಗೆ ಅಪಾಯ ಸಂಭವಿಸಿಲ್ಲ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳೀಯರು ಹಾಗೂ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದರು. ಇದರಿಂದ ಬೆಂಕಿ ಮತ್ತಷ್ಟು ವ್ಯಾಪಿಸುವುದನ್ನು ತಡೆಯಲು ಸಾಧ್ಯವಾಯಿತು. ಅಗ್ನಿ ಅವಘಡದಿಂದಾಗಿ ಸುಮಾರು 4 ಲಕ್ಷ ರೂ.ಗಳಿಗೂ ಅಧಿಕ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದ್ದು, ಬೆಂಕಿ ಕಾಣಿಸಿಕೊಳ್ಳಲು ನಿಖರ ಕಾರಣ ಏನು ಎಂಬ ಬಗ್ಗೆ ಪರಿಶೀಲನೆ ನಡೆಯುತ್ತಿದೆ.








