ಮುಂಗಾರು ಆಗಮನದ ನಿರೀಕ್ಷೆಯಲ್ಲಿ ಗದ್ದೆ ಬೇಸಾಯಗಾರರು | ಕೊಳೆರೋಗ ಸಾಧ್ಯತೆ ಕಡಿಮೆ – ಸಂತಸದಲ್ಲಿ ಅಡಿಕೆ ಕೃಷಿಕರು
ವರದಿ : ಉಮೇಶ್ ಮಿತ್ತಡ್ಕ
ಎಲ್ನಿನೊ ಚಂಡಮಾರುತ ಭಾರತದ ಮಳೆಯ ಪ್ರಮಾಣದ ಮೇಲೆ ಭಾರೀ ದುಷ್ಪರಿಣಾಮ ಬೀರಿದೆ. ನೈರುತ್ಯ ಮುಂಗಾರು ಮಳೆಯನ್ನು ಎಲ್ನಿನೊ ಕ್ಷೀಣವಾಗಿಸಿದೆ. ಹೀಗಾಗಿ ಮಳೆಯಾಧಾರಿತ ಕೃಷಿಕರು ಆತಂಕಕ್ಕೀಡಾಗಿದ್ದಾರೆ. ಮುಂಗಾರು ಪೂರ್ವ ಮಳೆ ಬಂದು ತೋಟಗಾರಿಕಾ ಕೃಷಿಕರು ಸ್ವಲ್ಪ ನಿಟ್ಟುಸಿರುಬಿಟ್ಟಿದ್ದರೂ, ಭತ್ತ ಬೇಸಾಯಗಾರರು ಮುಂಗಾರು ಮಳೆ ಎದುರು ನೋಡುತ್ತಿದ್ದು, ಭತ್ತ ಕೃಷಿಗೆ ಹಿನ್ನಡೆಯಾಗಿದೆ.
ದಕ್ಷಿಣ ಕನ್ನಡಕ್ಕೆ ಪೂರ್ವ ಮುಂಗಾರು ಸಹ ಕಡಿಮೆ
ಕರಾವಳಿ ಜಿಲ್ಲೆಗಳಾದ ಉಡುಪಿ, ಉತ್ತರಕನ್ನಡ ಜಿಲ್ಲೆಗಳಿಗೆ ಹೋಲಿಸಿದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪೂರ್ವ ಮುಂಗಾರು ಮಳೆಯೂ ಗಣನೀಯ ಇಳಿಕೆಯಿದೆ. ಉತ್ತರಕನ್ನಡದಲ್ಲಿ ಶೇ 42 ರಷ್ಟು ಹೆಚ್ಚು ಮಳೆಯಾಗಿದೆ. ಉಡುಪಿಯಲ್ಲಿ ಶೇ. 17 ರಷ್ಟು ಕಡಿಮೆಯಾಗಿದ್ದರೆ, ದಕ್ಷಿಣ ಕನ್ನದಲ್ಲಿ ಗಣನೀಯ ಶೇ. 32 ರಷ್ಟು ಮಳೆ ಕಡಿಮೆಯಾಗಿದೆ.

ಭತ್ತ ಬೇಸಾಯಕ್ಕೆ ಹಿನ್ನಡೆ
ಭತ್ತ ಕೃಷಿಯಿಂದ ವಿಮುಖರಾಗಿ ವಾಣಿಜ್ಯ ಕೃಷಿಗಳತ್ತ ಕೃಷಿಕ ಮುಖಮಾಡಿರುವ ಕಾಲಘಟ್ಟದಲ್ಲಿ ಬೆರಳೆಣಿಕೆಯ ಭತ್ತ ಬೇಸಾಯಗಾರರಿಗೆ ಈ ಮುಂಗಾರು ಹೊಡೆತ ನೀಡಿದೆ. ಸಾಕಷ್ಟು ಮಳೆ ಬಂದು ನೀರಿನ ಹರಿವು ಆರಂಭವಾದರೆ ಉಳುಮೆ, ಬೀಜ ಬಿತ್ತನೆ ನಡೆಯಬೇಕು. ಆದರೆ ಈ ಬಾರಿ ಎಲ್ಲವೂ ವಿಳಂಬವಾಗಿ ಭತ್ತ ಬೇಸಾಯಗಾರರ ಟೈಮ್ ಟೇಬಲ್ ನ್ನು ತಲೆಕೆಳಗಾಗಿಸಿದೆ. ‘ಪಗ್ಗು 18’ (ಮೇ 1) ತುಳು ಸಂಪ್ರದಾಯದಲ್ಲಿ ರೈತರು ಭೂಮಿಯಲ್ಲಿ ಬೀಜ ಬಿತ್ತುವ ಮೂಲಕ ಸಾಂಪ್ರದಾಯಿಕ ಕೃಷಿಗೆ (ಕೈಬಿತ್ತ್) ಚಾಲನೆ ನೀಡುವ ಅತ್ಯಂತ ಪವಿತ್ರ ದಿನವಾಗಿದೆ. ಕೈ ಬಿತ್ತ್ ಮಾಡಿದ ಮೇಲೆ 20-25 ದಿನಗಳಲ್ಲಿ (ಪತ್ತನಾಜೆ) ಮಳೆ ಆರಂಭವಾಗಿ ನೇಜಿ ನಾಟಿ ಮಾಡುತ್ತಿದ್ದ ಕಾಲವೊಂದಿತ್ತು. ಈಗ ಕಾರ್ಮಿಕರ ಕೊರತೆಯಿಂದ ಯಾಂತ್ರಿಕೃತ ನಾಟಿಗಾಗಿ ಚಾಪೆ ನೇಜಿ ಮಾಡಲಾಗುತ್ತಿದೆ. ಚಾಪೆ ನೇಜಿ ಹಾಕಿ 20 ದಿನಗಳಲ್ಲಿ ನಾಟಿಗೆ ಸಿದ್ದವಾಗುತ್ತವೆ.
ಕಳೆದ ವರ್ಷ ಅತಿವೃಷ್ಟಿ ಬೆಳೆಹಾನಿ ಮಾಡಿತ್ತು
ಕಳೆದ ವರ್ಷ ಎಡೆಬಿಡದೆ ಸುರಿದ ಮಳೆ ಅಡಿಕೆ ಕೃಷಿಕರನ್ನು ಧರಶಾಹಿಯನ್ನಾಗಿಸಿತ್ತು. ಕೊಳೆರೋಗದಿಂದ ಬಹುತೇಕ ಅಡಿಕೆ ಕೃಷಿ ನಾಶಹೊಂದಿತ್ತು. ಈ ಬಾರಿ ಕಡಿಮೆ ಮಳೆ ಕೊಳೆರೋಗಕ್ಕೆ ಪ್ರಯೋಜನವಾದರೂ ಬೇಸಿಗೆಯಲ್ಲಿ ನೀರಿನ ಪ್ರಮಾಣ ಸಾಕಷ್ಟು ಕುಂಠಿತವಾಗಿಸಬಹುದೆಂಬ ಆತಂಕ ಅಡಿಕೆ ಕೃಷಿಕರಲ್ಲಿದೆ.
ಕಾರ್ತೆಲ್ ತಿಂಗಳಲ್ಲೂ ಕೈಕೊಟ್ಟ ಮಳೆ
ಸಾಮಾನ್ಯವಾಗಿ ಜೂನ್ ತಿಂಗಳ ಆರಂಭದಲ್ಲಿ ಮುಂಗಾರು ಮಳೆ ಸುರಿದರೂ ತುಳುವರ ಕಾರ್ತೆಲ್ ತಿಂಗಳಲ್ಲಿ (ಮಿಥುನ) ಹೆಚ್ಚು ಮಳೆಯನ್ನು ನಿರೀಕ್ಷಿಸಲಾಗಿತ್ತು. ಆದರೆ ಸಂಕ್ರಮಣ ಕಳೆದು ಕಾರ್ತೆಲ್ ತಿಂಗಳು ಆರಂಭಗೊಂಡರೂ ಮಳೆಯ ಪತ್ತೆಯೇ ಇಲ್ಲದಿರುವುದು ರೈತರಲ್ಲಿ ಆತಂಕದ ಸ್ಥಿತಿ ಸೃಷ್ಟಿಸುತ್ತಿದೆ.
ಆಟಿಯಲ್ಲಿ ಬಿಸಿಲು ಕಾಯಬೇಕು
ಅಡಿಕೆ ಕೃಷಿಕರ ಪಾಲಿಗೆ ತುಳುವರ ಆಟಿ ತಿಂಗಳ (ಕರ್ಕಟ) ನಿರಂತರ ಮಳೆ ಸುರಿದರೆ ಕೊಳೆರೋಗ ಶೀಘ್ರವಾಗಿ ಹರಡಿ ಬೆಳೆನಾಶವಾಗುತ್ತದೆ. ಅದಕ್ಕಾಗಿ ಕಾರ್ತೆಲ್ ತಿಂಗಳಲ್ಲಿ ಹೆಚ್ಚು ಮಳೆ ಸುರಿದು ಆಟಿ ತಿಂಗಳಲ್ಲಿ ಬಿಸಿಲು ಕಾಯಬೇಕು. ಸದ್ಯ ಕೊಳೆರೋಗ ಬಾಧಿಸುವಿಕೆ ಒಂದು ತಿಂಗಳು ಮುಂದೆ ಹೋಗಿದೆ’ ಎನ್ನುತ್ತಾರೆ ಸಮಗ್ರ ಕೃಷಿಕ ಕಡಮಜಲು ಸುಭಾಸ್ ರೈರವರು.

ಅಡಿಕೆ, ಕೊಕ್ಕೋ, ರಬ್ಬರ್ ಬೆಳೆಗೂ ಹಾನಿಯಿಲ್ಲ :
ಕಡಿಮೆ ಮಳೆಯಿಂದಾಗಿ ಅಡಿಕೆಗೆ ಬಾಧಿಸುವ ಕೊಳೆರೋಗ ಪ್ರಮಾಣ ಈ ವರ್ಷ ಕಡಿಮೆಯಾಗಲಿದೆ. ಕೊಕ್ಕೋ ಬೆಳೆಗೂ ಯಾವುದೇ ಫಂಗಸ್ ಹಾನಿಯಾಗದೇ ಈಗಲೂ ಕೊಕ್ಕೊ ಕೊಯ್ಲು ನಡೆಯುತ್ತಿದೆ. ಕಳೆದ ವರ್ಷ ಅತಿವೃಷ್ಟಿಯಿಂದಾಗಿ ರಬ್ಬರ್ ಮರಗಳ ಎಲೆಉದುರಿ ಇಳುವರಿ ಮೇಲೆ ಅಡ್ಡ ಪರಿಣಾಮ ಬೀರಿತ್ತು. ಈ ಬಾರಿ ರಬ್ಬರ್ ಗೂ ಯಾವುದೇ ಸಮಸ್ಯೆ ಉಂಟಾಗಿಲ್ಲ.
ತುಂಬದ ಕೆರೆ, ಹರಿಯದ ಹೊಳೆ :
ಮಳೆ ಕುಂಠಿತವಾಗಿ ತುಂಬಿ ತುಳುಕಬೇಕಿದ್ದ ಕೆರೆಗಳು ಬರಿದಾಗುತ್ತಿವೆ. ಸಮೃದ್ದವಾಗಿ ಹರಿಯಬೇಕಿದ್ದ ಹೊಳೆ, ನದಿಗಳು ಇನ್ನೂ ತನ್ನೊಡಲಿನಿಂದ ಕಸ ತ್ಯಾಜ್ಯಗಳನ್ನು ಬಿಟ್ಟಿಲ್ಲ. ʻಕಾಲ ಕಾಲಕ್ಕೆ ಮಳೆ ಬೆಳೆʼ ಎಂಬ ನಾಣ್ಣುಡಿಯಂತೆ ಸಕಾಲದಲ್ಲಿ ಮಳೆಯಾಗದೇ ಅಕಾಲದಲ್ಲಿ ಮಳೆಯಾದರೆ ಬೆಳೆಯೂ ನಾಶಗೊಂಡು ಸಮೃದ್ದತೆ ಅಸಾಧ್ಯ. ಪರಿಸರ ಅಸಮತೋಲನದಿಂದ ಉಂಟಾಗುವ ಪ್ರಾಕೃತಿಕ ವಿಕೋಪಗಳಿಗೆ ಮನುಷ್ಯನೇ ನೇರ ಹೊಣೆಯಾಗುತ್ತಾನೆ. ಮಳೆ ಬೆಳೆ ಸಮೃದ್ಧವಾಗದಿದ್ದಾಗ ವಾಣಿಜ್ಯ ವ್ಯವಹಾರಗಳೂ ಕುಂಠಿತಗೊಳ್ಳುತ್ತವೆ. ಮನುಷ್ಯ ಜೀವನವೇ ಅಸಮತೋಲನಕ್ಕೆ ನಾಂದಿ ಹಾಡುತ್ತದೆ.
ಮುಂದಿನ 20 ದಿನಗಳಲ್ಲಾದರೂ ಅಪಾರ ಮಳೆ ಅಗತ್ಯ
ಭತ್ತದ ಕೃಷಿಯಲ್ಲಿ ಮುಂಗಾರು ಬೆಳೆಗೆ ಮಳೆ ನೀರೇ ಅವಶ್ಯಕ. ಮಳೆ ವಿಳಂಬವಾಗಿ ವಿದ್ಯುತ್ ಪಂಪ್ ಮೂಲಕ ನೀರು ಹಾಯಿಸಿದರೂ ಮಳೆಯ ಬೆಳೆ ತೆಗೆಯಲು ಸಾಧ್ಯವಿಲ್ಲ. ಮುಂಗಾರು ಬೆಳೆ ತಂಪು ಮತ್ತು ತೇವಾಂಶಾಧಾರಿತವಾಗಿರುತ್ತದೆ. ಈಗಾಗಲೇ ನಾವು ಚಾಪೆ (ಟ್ರೇ) ನೇಜಿ ಹಾಕಿದ್ದೇವೆ. ಮುಂದಿನ 20 ದಿನಗಳಲ್ಲಾದರೂ ಸಾಕಷ್ಟು ಮಳೆ ಬಂದು ನೀರಾಗಬಹುದೆಂದು ನಮ್ಮ ನಿರೀಕ್ಷೆ ಇದೆ. ಬಾರದಿದ್ದಲ್ಲಿ ಭತ್ತದ ಬೇಸಾಯ ಸಂಪೂರ್ಣ ನೆಲಕಚ್ಚಲಿದೆ.
ಕೇಶವ ಭಂಡಾರಿ ಕೈಪ ಭತ್ತ ಬೇಸಾಯಗಾರರು
- ತೋಟಗಾರಿಕಾ ಬೆಳೆಗಳಿಗಿಲ್ಲ ಸಮಸ್ಯೆ
- ಪೂರ್ವ ಸಂಪ್ರದಾಯ ಪ್ರಕಾರ ಕಾರ್ತೆಲ್ ತಿಂಗಳು ಕಾರ್ಮೋಡಗಳಿಂದ ತುಂಬಿ ಅಪಾರ ಮಳೆಯಾಗುವ ತಿಂಗಳು ಎಂದರ್ಥ. ಕಾರ್ತೆಲ್ ತಿಂಗಳು ಮತ್ತು ಸ್ವಾತಿ ನಕ್ಷತ್ರದ 9 ದಿನಗಳು ಅಪಾರ ಮಳೆಯಾದರೆ ಭೂಮಿ ಹೇರಳವಾಗಿ ನೀರಿದಿಟ್ಟುಕೊಳ್ಳುತ್ತದೆ ಎಂಬುದು ವಾಡಿಕೆ. ಕಳೆದ ವರ್ಷ ಆಟಿ ತಿಂಗಳಲ್ಲಿ ನಿರಂತರ ಮಳೆಯಿಂದಾಗಿ ಕೊಳೆರೋಗದಿಂದ ಅಡಿಕೆ ಸಂಪೂರ್ಣ ನಾಶವಾಗಿತ್ತು. ಅದಕ್ಕೆ ಹೋಲಿಸಿದರೆ ಈ ಬಾರಿ ಕೊಳೆರೋಗ ಸಾಧ್ಯತೆ ತೀರಾ ಕಡಿಮೆ. ಅಡಿಕೆ, ರಬ್ಬರ್, ಕೊಕ್ಕೋ, ಗೇರು ಬೀಜ ಇಳುವರಿ ಸಾಕಷ್ಟಿದೆ. ಸದ್ಯ ನಮಗೆ ಸಮಸ್ಯೆಯಿಲ್ಲದಿದ್ದರೂ ಕಾಲ ಕಾಲಕ್ಕೆ ಸಾಕಷ್ಟು ಮಳೆ ಅಗತ್ಯವಾಗಿದೆ.
- ಕಡಮಜಲು ಸುಭಾಸ್ ರೈ ಸಮಗ್ರ ಕೃಷಿಕರು
ಚಾಪೆ ನೇಜಿಗೆ ಬೇಡಿಕೆ ಬಂದಿಲ್ಲ
ಗದ್ದೆ ಬೇಸಾಯಕ್ಕೆ ಆರಂಭಿಸಲು ಯಾವೊಬ್ಬ ಕೃಷಿಕನೂ ಧೈರ್ಯ ತೋರುತ್ತಿಲ್ಲ. ಹಾಗಾಗಿ ಚಾಪೆ ನೇಜಿಗೆ ಈ ಬಾರಿ ಏನೂ ಬೇಡಿಕೆ ಬಂದಿಲ್ಲ. ಕಳೆದ ವರ್ಷ ಮುಂಗಾರು ಪೂರ್ವ ಮಳೆಯಿಂದಾಗಿ ಜೂನ್ 26 ಕ್ಕೆ ನೇಜಿ ನಾಟಿ ಆರಂಭವಾಗಿತ್ತು.
ಉಮೇಶ್ ಕರ್ಕೇರ ಚಾಪೆ ನೇಜಿ ಪೂರೈಕೆದಾರರು
ಪುತ್ತೂರಿನಲ್ಲಿ ಗರಿಷ್ಟ ಪ್ರಮಾಣದಲ್ಲಿ ಮಳೆ ಕುಸಿತ
ದಕ್ಷಿಣ ಕನ್ನಡ ಜಿಲ್ಲೆಯ ಇತರ ತಾಲೂಕುಗಳ ಪೈಕಿ ಪುತ್ತೂರು ತಾಲೂಕಿನಲ್ಲಿ ಜೂನ್ ತಿಂಗಳಲ್ಲಿ ವಾಡಿಕೆಗಿಂತ ಗರಿಷ್ಟ ಪ್ರಮಾಣದಲ್ಲಿ (ಶೇ. 62 ರಷ್ಟು) ಮಳೆ ಕಡಿಮೆ ದಾಖಲಾಗಿದ್ದು, ಕಡಬ ತಾಲೂಕಿನಲ್ಲಿ ಶೇ. 32 ರಷ್ಟು ಕಡಿಮೆ ಮಳೆಯಾಗಿದೆ. ಕರಾವಳಿ ಪ್ರದೇಶದಲ್ಲಿ ವಾಡಿಕೆಗಿಂತ ಶೇ. 47 ರಷ್ಟು ಮಳೆ ಕಡಿಮೆಯಾಗಿದೆ. ದೇಶಾದ್ಯಂತ ವಾಡಿಕೆಗಿಂತ ಶೇ. 28 ರಷ್ಟು ಮಳೆ ಪ್ರಮಾಣ ಕಡಿಮೆಯಾಗಿದೆ. ಜೂ.4ರಿಂದ ಜೂ.14ರ ಅವಧಿಯಲ್ಲಿ ದೇಶದಲ್ಲಿ 34.3 ಮಿ.ಮೀ ಮಳೆಯಾಗಿದೆ. ಆದರೆ ಈ ಅವಧಿಯಲ್ಲಿ ವಾಡಿಕೆ ಪ್ರಕಾರ 47.7 ಮೀ.ಮೀ ಮಳೆಯಾಗಬೇಕಿತ್ತು.
ಜೂನ್ ತಿಂಗಳ (1-16) ಸರಾಸರಿ ಮಳೆಯ ಪ್ರಮಾಣ
ತಾಲೂಕು ವಾಡಿಕೆ ಮಳೆ ಬಿದ್ದಿರುವ ಮಳೆ ಶೇಕಡಾವಾರು ಮಳೆ ಕುಸಿತ
ಪುತ್ತೂರು 391.7 ಮಿ.ಮೀ. 150.4 ಮಿ.ಮೀ. ಶೇ. 62
ಕಡಬ 358 ಮಿ.ಮೀ. 249.3 ಮಿ.ಮೀ. ಶೇ. 30
ನಷ್ಟಕ್ಕೊಳಗಾಗಲಿರುವ ಭತ್ತ ಬೇಸಾಯಗಾರರು
ಪುತ್ತೂರು ತಾಲೂಕಿನಲ್ಲಿ 210 ಹೆಕ್ಟೇರ್ ಪ್ರದೇಶ ಹಾಗೂ ಕಡಬ ತಾಲೂಕಿನಲ್ಲಿ 165 ಹೆಕ್ಟೇರ್ ಪ್ರದೇಶ ಒಟ್ಟು 375 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೇಸಾಯಗಾರರಿದ್ದಾರೆ. ಸಮರ್ಪಕ ಸಮಯದಲ್ಲಿ ಮಳೆ ಬಂದು ಸಾಕಷ್ಟು ನೀರಾವರಿ ಆಗದಿದ್ದಲ್ಲಿ ಈ ಕೃಷಿಕರು ನಷ್ಟಕ್ಕೊಳಗಾಗಲಿದ್ದಾರೆ. ಈ ಬಗ್ಗೆ ಸರಕಾರ ಗಮನ ಹರಿಸಿ ಭತ್ತ ಕೃಷಿ ವಿರಳವಾಗುತ್ತಿರುವ ಕಾಲಘಟ್ಟದಲ್ಲಿ ಇರುವ ಕೃಷಿಕರನ್ನು ಪ್ರೋತ್ಸಾಹಿಸುವ ಕಾರ್ಯ ಮಾಡಬೇಕಿದೆ.








