ಶಾಲಾಭಿವೃದ್ಧಿ ಸಮಿತಿಯ ಇಚ್ಛಾಶಕ್ತಿ ಶಾಲೆಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ- ಅಬೂಬಕ್ಕರ್ ಅಶ್ರಫ್
ಬಂಟ್ವಾಳ: ಶಾಲಾಭಿವೃದ್ಧಿ ಸಮಿತಿಯ ಇಚ್ಛಾಶಕ್ತಿ ಶಾಲೆಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಕಲ್ಲಡ್ಕ ಮಾದರಿ ಶಾಲಾ ಮುಖ್ಯ ಶಿಕ್ಷಕ ಅಬೂಬಕ್ಕರ್ ಅಶ್ರಫ್ ಹೇಳಿದರು.

ಅವರು ಗುರುವಾರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಜಿ ವೀರಕಂಭದಲ್ಲಿ ಕಲ್ಲಡ್ಕ ಕ್ಲಸ್ಟರ್ನ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಸದಸ್ಯರಿಗೆ ನಡೆದ ಒಂದು ದಿನದ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿ, ಒಂದು ಶಾಲೆಯ ಅಭಿವೃದ್ಧಿಯ ದೃಷ್ಟಿಯಿಂದ ಶಾಲಾಭಿವೃದ್ಧಿ ಸಮಿತಿಯ ಕರ್ತವ್ಯ ಹಾಗೂ ಜವಾಬ್ದಾರಿಗಳ ಬಗ್ಗೆ ತಿಳಿಯಲು ಸದಸ್ಯರಿಗೆ ನೀಡುವಂತ ತರಬೇತಿ ಕಾರ್ಯಗಾರವು ಉತ್ತಮ ವೇದಿಕೆ ಆಗಿದೆ ಎಂದರು.

ಮಜಿ ಹಿರಿಯ ಪ್ರಾಥಮಿಕ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಕೊರಗಪ್ಪ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಕಳೆದ ಶೈಕ್ಷಣಿಕ ವರ್ಷದಲ್ಲಿ ಶಿಕ್ಷಣ ಇಲಾಖೆಯ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜನೆ ಮಾಡಿದ ಶಾಲಾಭಿವೃದ್ಧಿ ಸಮಿತಿಗೆ ಅಭಿನಂದನ ಪತ್ರವನ್ನು ವಿತರಿಸಲಾಯಿತು ಹಾಗೂ ಸರಕಾರಿ ಶಾಲೆಗಳ ಶ್ರೇಯೋಭಿವೃದ್ಧಿಗೆ ಸಹಕರಿಸುತ್ತಿರುವ ಚಿನ್ನಾ ಕಲ್ಲಡ್ಕ ರವರನ್ನು ಗೌರವಿಸಲಾಯಿತು. ನಂತರ ನಡೆದ ತರಬೇತಿ ಕಾರ್ಯದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಶಿಕ್ಷಕಿ ಸಂಗೀತ ಶರ್ಮ,ಸಿ ಆರ್ ಪಿ ಜ್ಯೋತಿ ತರಬೇತಿ ನೀಡಿದರು.
ವಿಟ್ಲ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಶಮನ್ .ಜೆ. ಶೆಟ್ಟಿ 14 ವರ್ಷ ತುಂಬಿದ ಎಲ್ಲಾ ಹೆಣ್ಣು ಮಕ್ಕಳಿಗೆ ಸರ್ಕಾರದಿಂದ ಉಚಿತವಾಗಿ ನೀಡಲಾಗುವ ಹೆಚ್.ಪಿ.ವಿ ಲಸಿಕೆಯ ಬಗ್ಗೆ ಮಾಹಿತಿ ನೀಡಿದರು. ಆರೋಗ್ಯ ಸುರಕ್ಷಣಾಧಿಕಾರಿ ಜ್ಯೋತಿ ಮತ್ತು ಆಶಾ ಕಾರ್ಯಕರ್ತೆ ಕೋಮಲಾಕ್ಷಿ ಸಹಕರಿಸಿದರು. ವೇದಿಕೆಯಲ್ಲಿ ಮಜಿ ಸರ್ಕಾರಿ ಪ್ರೌಢಶಾಲೆ ಇಲ್ಲಿನ ಸಹ ಶಿಕ್ಷಕಿ ಸುನೀತ ಉಪಸ್ಥಿತರಿದ್ದರು.
ಕಲ್ಲಡ್ಕ ಕ್ಲಸ್ಟರ್ ಸಿಆರ್‌ಪಿ ಜ್ಯೋತಿ ಸ್ವಾಗತಿಸಿ, ಮಜಿ ಶಾಲಾ ಮುಖ್ಯ ಶಿಕ್ಷಕಿ ಬೆನೆಡಿಕ್ಟಾ ಆಗ್ನೇಸ್ ಮೆಂಡೋನ್ಸಾ ವಂದಿಸಿ, ಸಹ ಶಿಕ್ಷಕ ತೌಸೀಫ್ ಅಹಮದ್ ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಇಂದುಶೇಖರ್ ಸಹಕರಿಸಿದರು.








