ಪಕ್ಷದ ವರಿಷ್ಠರು ನೀಡುವ ಸೂಚನೆಯನ್ನು ಪಾಲಿಸುತ್ತೇನೆ-ಪಕ್ಷಕ್ಕೆ ಶಕ್ತಿ ತುಂಬುವ ಕೆಲಸ ಮಾಡುತ್ತೇನೆ: ಸಚಿವ ಬಿ. ರಮಾನಾಥ ರೈ

0

ವಿಟ್ಲ: 2024ರ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು, ನಾನು ಸಕ್ರೀಯ ರಾಜಕಾರಣದಲ್ಲಿರುತ್ತೇನೆ, ಪಕ್ಷವನ್ನು ಸಂಘಟನಾತ್ಮಕ ಮಟ್ಟದಲ್ಲಿ ಬೆಳೆಸುವ ಕಾರ್ಯವನ್ನು ಮಾಡುತ್ತೇನೆ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದ್ದಾರೆ.


ಅವರು ಬಿ.ಸಿರೋಡಿನಲ್ಲಿರುವ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಮೇ.19ರಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಪಕ್ಷದ ವರಿಷ್ಠರು ನೀಡುವ ಸೂಚನೆಯನ್ನು ಪಾಲಿಸುತ್ತೇನೆ, ಪಕ್ಷಕ್ಕೆ ಶಕ್ತಿ ತುಂಬುವ ಕೆಲಸ ಮಾಡುತ್ತೇನೆ. ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ನಿರೀಕ್ಷಿತ ಸ್ಥಾನವನ್ನು ಪಡೆಯಲು ಪಕ್ಷಕ್ಕೆ ಸಾಧ್ಯವಾಗಿಲ್ಲ. ಪ್ರತಿಕೂಲ ಪರಿಸ್ಥಿತಿಯಲ್ಲಿ ಗೆದ್ದ ಅಭ್ಯರ್ಥಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ತನಗೆ ವಯಸ್ಸಾಯಿತು ಎಂದು ಕೆಲವರು ಅಪಪ್ರಚಾರ ಮಾಡಿದ್ದಾರೆ. ರಾಜಕಾರಣ ಮಾಡಲು ಈ ವಯಸ್ಸು ಸರಿಯಾದದ್ದು ಎಂಬುದನ್ನು ಸಾಧಿಸಿ ತೋರಿಸುತ್ತೇನೆ ಎಂದ ಅವರು, ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಸೋಲಿನ ಪರಾಮರ್ಶೆಯನ್ನು ಮಾಡುತ್ತಾ, ಆವರೊಂದಿಗೆ ನನ್ನ ಮನದಾಳದ ಮಾತನ್ನು ಬಿಚ್ಚಿಡುತ್ತೇನೆ ಎಂದರು. ನನಗೆ ಪೂರ್ವಜರಿಂದ ಬಂದ ಬಳುವಳಿಯಿಂದ ಸಣ್ಣ ಮಟ್ಟಿನ ಕೃಷಿ ಮಾಡುತ್ತಿದ್ದೇನೆ ನಾನು ಎಲ್ಲಿಂದಲೋ ಬಂದು ಚುನಾವಣೆಗೆ ನಿಂತಿಲ್ಲ. ಈಗ ನಮ್ಮದೇ ಸರಕಾರ ಇದ್ದು, ಬಂಟ್ವಾಳ ಕ್ಷೇತ್ರದಲ್ಲಿ ಅರ್ಧಕ್ಕೆ ನಿಂತಿರುವ ಕಾಮಗಾರಿಗಳನ್ನು ಪೂರ್ತಿ ಮಾಡಲು ಪ್ರಯತ್ನ ಮಾಡುತ್ತೇನೆ ಎಂದರು. ಮಂಗಳೂರಿನಲ್ಲಿ ನಾನು ರಾಜಕೀಯ ನಿವೃತ್ತಿ ಆಗುತ್ತೇನೆ ಎಂದು ಹೇಳಿಲ್ಲ. ಹೈಕಮಾಂಡ್ ಏನನ್ನು ಸೂಚಿಸುತ್ತದೆಯೋ ಅದನ್ನೇ ಪಾಲಿಸುತ್ತೇನೆ. ನಾನು ವ್ಯಾಪಾರಿಯಲ್ಲ, ಹೊರಗಿನಿಂದ ಕ್ಷೇತ್ರಕ್ಕೆ ಬಂದಿಲ್ಲ. ಮಂಗಳೂರಲ್ಲೂ ಮನೆ ಮಾಡಿಲ್ಲ. ಪಕ್ಷದ ಹೈಕಮಾಂಡ್ ಏನನ್ನು ಸೂಚಿಸುತ್ತದೆಯೋ ಅದನ್ನೇ ಮಾಡುತ್ತೇನೆ. ಪಕ್ಷ ನೀಡುವ ಜವಾಬ್ದಾರಿಗಳನ್ನು ಸ್ವೀಕರಿಸುತ್ತೇನೆ ಎಂದರು.


ಕಮಿಷನ್ ವ್ಯವಹಾರದಲ್ಲಿ ನಾನು ತೊಡಗಿಲ್ಲ ಇಷ್ಟು ವರ್ಷದ ರಾಜಕಾರಣದಲ್ಲಿ ಶುದ್ಧ ಹಸ್ತದ ರಾಜಕೀಯ ಮಾಡಿದ್ದೇನೆ, ಕ್ಷೇತ್ರದ ಜನತೆಗೆ ಗೌರವ ತರುವ ಕೆಲಸ ಮಾಡಿದ್ದೇನೆ ಎಂದು ರೈ ತಿಳಿಸಿದರು.


ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿಕುಂದರ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ಜಿ.ಪಂ.ಮಾಜಿ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಎಂ.ಎಸ್.ಮಹಮ್ಮದ್, ಪದ್ಮಶೇಖರ್ ಜೈನ್, ಪಕ್ಷದ ಪ್ರಮುಖರಾದ ಪಿಯೂಸ್ ಎಲ್ ರೋಡ್ರಿಗಸ್, ಬಿ.ಎಂ. ಅಬ್ಬಾಸ್ ಆಲಿ, ಸುದರ್ಶನ ಜೈನ್ ಪಂಜಿಕಲ್ಲು, ಮಾಯಿಲಪ್ಪ ಸಾಲ್ಯಾನ್, ಇಬ್ರಾಹಿಂ ನವಾಜ್ ಬಡಕಬೈಲು,ಸುರೇಶ ಜೋರಾ, ಸದಾಶಿವ ಬಂಗೇರ, ಸುಭಾಶ್ಚಂದ್ರ ಶೆಟ್ಟಿ ಕೊಳ್ನಾಡು, ಬಿ.ಮೋಹನ್, ಜಗದೀಶ್ ಕೊಯ್ಲ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here