ಬಂಟ್ಟಾಳ: ಸಾಲೆತ್ತೂರು ರಥನ್ ಕಾಂಪ್ಲೆಕ್ಸ್‌ನಲ್ಲಿ ಎ.1 ರಂದು ಸಜೀಪ ಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘದ 11ನೇ ಸಾಲೆತ್ತೂರು ಶಾಖೆಯನ್ನು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಚಿತ್ತರಂಜನ್ ದೀಪ ಬೆಳಗಿಸಿ ಉದ್ಘಾಟಿಸಿದರು.
ಬಳಿಕ ಅವರು ಮಾತನಾಡಿ ಸಹಕಾರಿಯು ಗ್ರಾಮಾಂತರ ಪ್ರದೇಶದಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗೆ ಪೈಪೋಟಿ ನೀಡುವಷ್ಟು ಬೆಳೆದಿದೆ. ಉತ್ತಮ ಸೇವೆ ಅದರ ಯಶಸ್ಸಿಗೆ ಕಾರಣವಾಗಿದೆ. ಅನೇಕರಿಗೆ ಸ್ಥಳೀಯವಾಗಿ ಉದ್ಯೋಗ ನೀಡಿದೆ. ಎಲ್ಲರೂ ಮಹಿಳಾ ಸಿಬಂದಿಗಳು ಈ ಸಹಕಾರಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇನ್ನಷ್ಟು ಉನ್ನತ ಸ್ಥಿತಿಗೆ ಮುಟ್ಟಲಿ ಎಂದರು.
ಮುಖ್ಯ ಅತಿಥಿ ಕೊಳ್ನಾಡು ಗ್ರಾ.ಪಂ. ಮಾಜಿ ಅಧ್ಯಕ್ಷ ಸುಭಾಶ್ಚಂದ್ರ ರೈ ಮಾತನಾಡಿ ಸಾಲೆತ್ತೂರು ಭಾಗದಲ್ಲಿ ಐದು ಸಹಕಾರಿ ಸಂಸ್ಥೆಗಳು ಯಶಸ್ವಿಯಾಗಿ ಕೆಲಸ ಮಾಡುತ್ತಿದೆ. ಜನರ ಆರ್ಥಿಕ ಸ್ವಾವಲಂಬನೆಗೆ ಪ್ರೇರಣೆ ನೀಡುತ್ತಿದೆ ಎಂದರು.
ಪಾಲ್ತಾಜೆ ದೇವದಾಸ ಶೆಟ್ಟಿ ಮುಖ್ಯ ಅತಿಥಿಯಾಗಿ ಮಾತನಾಡಿ ಇಂದು ಎಲ್ಲಾ ಜನರು ಆರ್ಥಿಕ ಸಂಸ್ಥೆಗಳ ಜೊತೆ ಸಂಪರ್ಕ ಹೊಂದಿದ್ದಾರೆ. ಸಂಘವು 160 ಕೋಟಿ ರೂ. ವ್ಯವಹಾರದಿಂದ ಸಹಸ್ರಾರು ಕೋಟಿ ವ್ಯವಹಾರಕ್ಕೆ ಮುಟ್ಟಲಿ ಎಂದು ಹಾರೈಸಿದರು.
ಸಂಘದ ಅಧ್ಯಕ್ಷ ಕೆ. ಸಂಜೀವ ಪೂಜಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ ಶೇಂದಿ ಮಾರಾಟ ಸಂಘದ ಮೂಲಕ ಆರಂಭವಾದ ನಮ್ಮ ಸಹಕಾರಿಯು ಬ್ಯಾ೦ಕಿಂಗ್ ವ್ಯವಹಾರದ ಮೂಲಕ 160 ಕೋಟಿ ರೂ. ಮಿಕ್ಕಿ ವ್ಯವಹಾರ ಮಾಡಲು ಸಾಧ್ಯ ಆಗಿರುವುದು ಆಡಳಿತ ಮಂಡಳಿಯ ಸದಸ್ಯರು ಮತ್ತು ಸಿಬ್ಬಂದಿಗಳ ಸಹಕಾರದಿಂದ ಮುಂದಿನ ಆರ್ಥಿಕ ವರ್ಷಕ್ಕೆ ಐದು ಶಾಖೆಗಳ ನಿರ್ಮಾಣ ಉದ್ದೇಶವಿದೆ. ಸಂಘವು ಶೇ.25 ಡಿವಿಡೆಂಡ್ ನೀಡುವ ಸಾಧನೆ ಮಾಡಿದೆ. ಮುಂದಕ್ಕೆ ನೂರು ಮಂದಿ ಮಹಿಳೆಯರಿಗೆ ಉದ್ಯೋಗ ನೀಡುವ ಗುರಿಯೊಂದಿಗೆ 25 ಶಾಖೆ ತೆರೆಯುವ ಚಿಂತನೆ ಇದೆ ಎಂದರು.
ಮುಖ್ಯ ಅತಿಥಿಗಳಾಗಿ ಮಾಧವ ಮಾವೆ ಮಾತನಾಡಿ ಈ ಸಂಘದ ಅಧ್ಯಕ್ಷರಾಗಿ ಸಂಜೀವ ಪೂಜಾರಿ ಎಲ್ಲಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಇಂದು ಅವರ ದಾಂಪತ್ಯ ಜೀವನದ 43ನೇ ವರ್ಷಾಚರಣೆಯೂ ಆಗಿದ್ದು ಅಭಿನಂದನೆಗಳು ಎಂದರು. ಜಿಲ್ಲೆಯ ಮಟ್ಟಕ್ಕೆ ಈ ಸಹಕಾರಿಯು ಬೆಳೆದು ಬರಲಿ ಎಂದರು.
ನ್ಯಾಯವಾದಿ ಈಶ್ವರ ಪೂಜಾರಿ ಶುಭ ಹಾರೈಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕು ಮಮತಾ ಜಿ, ಶಾಖಾ ವ್ಯವಸ್ಥಾಪಕಿ ಪ್ರಜ್ಞಾ ಕೆ. ಭಗವತಿ ಬ್ಯಾಂಕ್ ನಿರ್ದೇಶಕ ಲೀಲಾ ರಾಮ್ ಯು., ಸಹಕಾರಿ ನೌಕರರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತೀಶ್, ಕಟ್ಟಡ ಮಾಲಕ ಆನಂದ ಪೂಜಾರಿ, ಸಾಲೆತ್ತೂರು ಬಿಲ್ಲವ ಸಂಘದ ಅಧ್ಯಕ್ಷ ಜನಾರ್ದನ ಪೂಜಾರಿ ಸಾಲೆತ್ತೂರು, ಮಾಜಿ ಅಧ್ಯಕ್ಷ ವಿಶ್ವನಾಥ ಪೂಜಾರಿ. ಗ್ರಾಪಂ ಅಧ್ಯಕ್ಷ ಪ್ರಶಾಂತ್ ಕುಮಾರ್ ಶೆಟ್ಟಿ, ಮೂರ್ತೆದಾರರ ಸೇ.ಸ.ಸ೦ಘದ ‘ಉಪಾಧ್ಯಕ್ಷ ಸುಂದರ ಪೂಜಾರಿ, ನಿರ್ದೇಶಕರಾದ ರಮೇಶ ಅನ್ನಪ್ಪಾಡಿ, ವಿಠಲ ಬೆಳ್ಚಾಡ ಸಾಲೆತ್ತೂರು, ಅಶೋಕ ಪೂಜಾರಿ ಕೋಮಾಲಿ, ಕೆ. ಸುಜಾತ ಎಂ., ವಾಣಿ ವಸಂತ, ಆರುಣ್ ಕುಮಾರ್ ಎಂ., ಆಶಿಶ್ ಪೂಜಾರಿ ಭಾಗವಹಿಸಿದ್ದರು. ನಿರ್ದೇಶಕ ಗಿರೀಶ್ ಕುಮಾರ್ ಪೆರ್ವ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಜಯಶಂಕರ ಕಾನ್ಸಾಲೆ ವಂದಿಸಿದರು. ಮಾಜಿ ಸಚಿವ ಬಿ. ರಮಾನಾಥ ರೈ ಭೇಟಿ ನೀಡಿದ್ದರು.