ಬಂಟ್ವಾಳ: ಕೇಂದ್ರ ಮತ್ತು ರಾಜ್ಯ ಸರಕಾರಗಳ ಡಬಲ್ ಇಂಜಿನ್ ಸರಕಾರದ ಫಲವಾಗಿ ಬಂಟ್ವಾಳ ಕ್ಷೇತ್ರದಲ್ಲಿ ಸುಮಾರು 2 ಸಾವಿರ ಕೋಟಿ ರೂ ಗಳ ಮೂಲಕ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಸಾಧ್ಯವಾಯಿತು ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹೇಳಿದರು.
ಅವರು ನಾವೂರ ಗ್ರಾಮದಲ್ಲಿ 3.33 ಕೋಟಿ ಅನುದಾನದ ಮೂಲಕ ವಿವಿಧ ಕಾಮಗಾರಿಗಳ ಉದ್ಘಾಟನೆ, ಶಿಲಾನ್ಯಾಸ ಹಾಗೂ ಮತ್ತು ಮಾರ್ಚ್ 12 ರಂದು ಬಂಟ್ವಾಳದಲ್ಲಿ ನಡೆಯುವ ವಿಜಯಸಂಕಲ್ಪ ಯಾತ್ರೆಯ ಬಗ್ಗೆ ಕಾರ್ಯಕರ್ತರ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿದರು.
ಕೊರೊನಾ ಸಂದರ್ಭದಲ್ಲಿ ಸಂಕಷ್ಟದ ಅವಧಿಯಲ್ಲಿ ಜನರ ಸೇವೆ ಮಾಡಲು ಅವಕಾಶ ಸಿಕ್ಕಿದೆ. ಕೊರೊನಾ ಸಂಕಷ್ಟದ ಬಳಿಕ ಅರ್ಥಿಕ ವ್ಯವಸ್ಥೆಯಲ್ಲಿ ಜಗತ್ತಿನಲ್ಲಿ ಅತೀ ಎತ್ತರಕ್ಕೆ ಬೆಳೆದು ನಿಂತಿರುವುದಕ್ಕೆ ಕಾರಣ ಪ್ರಧಾನಿ ನರೇಂದ್ರ ಮೋದಿ ಎಂಬ ಸಂತಸ ನಮಗಿದೆ ಎಂದರು.
ಬೂಡ ಅಧ್ಯಕ್ಷ ದೇವದಾಸ್ ಬಂಟ್ವಾಳ ಮಾತನಾಡಿ,ಕಳೆದು ಐದು ವರ್ಷಗಳಲ್ಲಿ ಅಭಿವೃದ್ಧಿ ಜೊತೆಗೆ ಶಾಂತಿಯುತ ಬಂಟ್ವಾಳ ನಿರ್ಮಾಣವನ್ನು ಶಾಸಕರು ಮಾಡಿದ್ದಾರೆ ಎಂದು ಅವರು ಹೇಳಿದರು. ಕಾನೂನು ಬಾಹಿರ ಚಟುವಟಿಕೆಗಳನ್ನು ನಿಲ್ಲಿಸಲು ಅಧಿಕಾರಿಗಳಿಗೆ ಮುಕ್ತವಾದ ಅವಕಾಶವನ್ನು ಶಾಸಕರು ನೀಡಿದ ಪರಿಣಾಮವಾಗಿ ಇಂದು ಶಾಂತಿಯ ಬಂಟ್ವಾಳ ನಿರ್ಮಾಣವಾಗಿದೆ. ನಾವೂರ 6 ಕೋಟಿ ಗಿಂತಲೂ ಹೆಚ್ಚಿನ ಅನುದಾನದ ಮೂಲಕ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗಿದೆ ಎಂದು ಅವರು ತಿಳಿಸಿದರು.
ಜಿಲ್ಲಾ ಬಿಜೆಪಿ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಸುದರ್ಶನ ಬಜ, ನಾವೂರ ಗ್ರಾ.ಪಂ. ಸದಸ್ಯ ರಾದ ವಿಜಯಕುಮಾರ್, ಜನಾರ್ದನ ಕೊಂಬೆಟ್ಟು, ಇಂದಿರಾ, ನಾರಾಯಣ ಪ್ರಮುಖರಾದ ಶೀಲಾ, ಸದಾನಂದ ನಾವೂರ ಸ್ವಾಗತಿಸಿ ವಂದಿಸಿದರು.