ಇಡ್ಕಿದು: ಮಲಗಿದಲ್ಲೇ ಮೃತಪಟ್ಟ ಅರವಿಂದ ಭಾಸ್ಕರರದ್ದು ಅಸಹಜ ಸಾವಲ್ಲ – ಕೊಲೆ ಶಂಕೆ

0

ಮೃತರ ಪತ್ನಿ ಸಹಿತ ಇಬ್ಬರ ವಿರುದ್ಧ ಪ್ರಕರಣ ದಾಖಲು

ವಿಟ್ಲ: ಇಡ್ಕಿದು ಗ್ರಾಮದ ಸೂರ್ಯ ಸಮೀಪದ ಅರ್ಕೆಚಾರ್ ಕುಮೇರು ಎಂಬಲ್ಲಿ ರಾತ್ರಿ ವೇಳೆ ಮಲಗಿದ್ದ ವ್ಯಕ್ತಿಯೋರ್ವರು ಬೆಳಗ್ಗೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆಗೆ ಸಂಬಂಧಿಸಿದಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಮೃತ ವ್ಯಕ್ತಿಯ ಪತ್ನಿ ಸೇರಿದಂತೆ ಇಬ್ಬರ ಮೇಲೆ ಕೊಲೆಪ್ರಕರಣ ದಾಖಲಾಗಿದೆ.

ಬಂಟ್ವಾಳ ತಾಲೂಕು ಇಡ್ಕಿದು ಗ್ರಾಮದ ಕುಮೇರು ಚೈತನ್ಯ ನಿವಾಸದ ದಿ.‌ವಾಸು ನಾಯ್ಕ್ ರವರ ಪುತ್ರ ಅರವಿಂದ ಭಾಸ್ಕರ(39 ವ.) ಮೃತಪಟ್ಟವರಾಗಿದ್ದಾರೆ.

ಮೃತ ವ್ಯಕ್ತಿಯ ಸಾವಿನಲ್ಲಿ ಸಂಶಯ ವ್ಯಕ್ತಪಡಿಸಿರುವ ವಿಟ್ಲ ಕಸಬಾ ಗ್ರಾಮದ ಮೇಗಿನ ಪೇಟೆ ನಿವಾಸಿ ಮಹಾಲಿಂಗ ನಾಯ್ಕರ ಪುತ್ರ ರಘುನಾಥ‌ ನಾಯ್ಕ್ ರವರು ನೀಡಿದ ದೂರಿ‌ನಂತೆ ಮೃತ ವ್ಯಕ್ತಿಯ ಪತ್ನಿ ಆಶಾ ಹಾಗೂ ಯೋಗೀಶ್ ಗೌಡ ಎಂಬವರ‌ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತ ಅರವಿಂದ ಭಾಸ್ಕರ ರವರ ಮೃತದೇಹದ ಸ್ಥಿತಿಗತಿಯನ್ನು ನೋಡಿದಾಗ ಅರವಿಂದ ಭಾಸ್ಕರನ ಕುತ್ತಿಗೆಯನ್ನು ಅಮುಕಿ ಹಿಡಿದು ಉಸಿರುಗಟ್ಟಿಸಿ ಕೊಲೆ ಮಾಡಿರುವ ಸಂಶಯವಿರುವುದಾಗಿ ಹಾಗೂ ಫೆ. 25 ರಂದು ರಾತ್ರಿಯಿಂದ ಫೆ.26 ರ ಬೆಳಿಗ್ಗೆಯ ಮಧ್ಯ ಸಮಯದಲ್ಲಿ ಬಂಟ್ವಾಳ ತಾಲೂಕು ಇಡ್ಕಿದು ಗ್ರಾಮದ ಚೈತನ್ಯಕುಮೇರು ಎಂಬಲ್ಲಿ ಮೃತರ ವಾಸದ ಮನೆಯಲ್ಲಿ ಆರೋಪಿಗಳಾದ ಯೋಗೀಶ ಗೌಡ ಹಾಗೂ ಅರವಿಂದ ಭಾಸ್ಕರನ ಪತ್ನಿ ಆಶಾ ರವರು ಒಟ್ಟು ಸೇರಿಕೊಂಡು ಕೊಲೆ ಮಾಡುವ ಸಮಾನ ಉದ್ದೇಶದಿಂದ ಕುತ್ತಿಗೆಯನ್ನು ಅಮುಕಿ ಹಿಡಿದು ಉಸಿರುಗಟ್ಟಿಸಿ ಕೊಲೆ ಮಾಡಿರುವುದಾಗಿ ರಘುನಾಥ‌ ನಾಯ್ಕ್ ರವರು ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ 30/2023 ಕಲಂ: ಕಲಂ 302 ಜೊತೆಗೆ 34 ಐಪಿಸಿ ಮತ್ತು ಕಲಂ 3(2) (V),3(2)(Va) SC/ST (POA) Ammendmanent Act-2015 ಕಲಂ ಗಳ ಅಡಿಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣವನ್ನು ದಾಖಲಿಸಿ ಕೊಂಡಿರುವ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದಿರುವುದಾಗಿ ಮಾಹಿತಿ ಲಭಿಸಿದೆ.

ತನಿಖೆ ಚುರುಕುಗೊಳಿಸಿದ ತಂಡಕ್ಕೆ ಮಹತ್ವದ ಸುಳಿವು ಲಭ್ಯ
ಮೃತ ವ್ಯಕ್ತಿಯ ಸಾವಿನಲ್ಲಿ ಸಂಶಯ ವ್ಯಕ್ತಪಡಿಸಿ ಸ್ನೇಹಿತ ನೀಡಿದ‌ ದೂರಿನ ಆಧಾರದಲ್ಲಿ ತನಿಖಾ ತಂಡ ಇದೀಗಾಗಲೇ ಕೆಲವೊಂದು ಪ್ರಮುಖ ಮಾಹಿತಿಯನ್ನು ಕಲೆಹಾಕಿಕೊಂಡಿದ್ದು, ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದೆ ಎಂದು ಮಾಹಿತಿ ಲಭಿಸಿದೆ.
ಇದೀಗಾಗಲೇ ತನಿಖಾ ತಂಡ ಘಟನೆಯ ಪ್ರಮುಖ ಎಳೆಯ ಆಧಾರದಲ್ಲಿ ಕಾರ್ಯಾಚರಣೆ ನಡೆಸಿದ್ದು,
ಮರಣೋತ್ತರ ಪರೀಕ್ಷೆಯ ವರದಿಯ ಬಳಿಕ ಪ್ರಕರಣಕ್ಕೆ ಒಂದು ಸ್ಪಷ್ಟ ಚಿತ್ರಣ ದೊರೆಯಲಿದ್ದು ಘಟನೆಯ ಸತ್ಯಾಸತ್ಯತೆ ಹೊರಬರಲಿದೆ.

LEAVE A REPLY

Please enter your comment!
Please enter your name here