ಬಿ.ರಮಾನಾಥ ರೈ, ಯು.ಟಿ.ಖಾದರ್, ಮಂಜುನಾಥ ಭಂಡಾರಿ, ಐವನ್ ಡಿಸೋಜ
ಎಐಸಿಸಿ ಸದಸ್ಯರಾಗಿ ನೇಮಕ

0

ಮಂಗಳೂರು:ಅಖಿಲ ಭಾರತ ಕಾಂಗ್ರೆಸ್ ಪಕ್ಷದ ನೂತನ ಸದಸ್ಯರಾಗಿ ದ.ಕ. ಜಿಲ್ಲೆಯಿಂದ ಮಾಜಿ ಸಚಿವರಾದ ಬಿ.ರಮಾನಾಥ ರೈ, ಶಾಸಕ ಯು.ಟಿ.ಖಾದರ್, ವಿಧಾನ ಪರಿಷತ್ ಸದಸ್ಯ ಡಾ|ಮಂಜುನಾಥ ಭಂಡಾರಿ ಹಾಗೂ ವಿಧಾನ ಪರಿಷತ್‌ನ ಮಾಜಿ ಸದಸ್ಯ ಐವನ್ ಡಿಸೋಜ ಅವರು ನೇಮಕರಾಗಿದ್ದಾರೆ.


ವಿಶೇಷ ಆಹ್ವಾನಿತರಾಗಿ ಮಾಜಿ ಸಚಿವ ಅಭಯಚಂದ್ರ ಜೈನ್ ಹಾಗೂ ವಿಷಯ ಪರಿಣಿತರಾಗಿ ಪಿಸಿಸಿ ಉಪಾಧ್ಯಕ್ಷ ಪಿ.ವಿ. ಮೋಹನ್ ಅವರನ್ನು ನೇಮಿಸಿ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಆದೇಶಿಸಿರುವುದಾಗಿ ದ.ಕ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಹರೀಶ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಪುತ್ತೂರು ತಾಲೂಕು ಬೆಳ್ಳಿಪ್ಪಾಡಿ ಮೂಲದವರಾಗಿರುವ ಬಿ.ರಮಾನಾಥ ರೈಯವರು ಕಾಂಗ್ರೆಸ್‌ನ ಹಿರಿಯ ನಾಯಕರಾಗಿದ್ದು ಈ ಹಿಂದೆ ಬಂಟ್ವಾಳ ಕ್ಷೇತ್ರದಿಂದ ಐದು ಬಾರಿ ಶಾಸಕರಾಗಿ ಚುನಾಯಿತರಾಗಿದ್ದು ರಾಜ್ಯ ಸರಕಾರದಲ್ಲಿ ಗೃಹ ಖಾತೆ, ಅರಣ್ಯ ಖಾತೆ, ಸಾರಿಗೆ, ಅಬಕಾರಿ, ಬಂದರು ಮತ್ತು ಮೀನುಗಾರಿಕೆ ಸಚಿವರಾಗಿ ಯಶಸ್ವಿ ಜವಾಬ್ದಾರಿ ನಿಭಾಯಿಸಿದ್ದರು.ಕಾಂಗ್ರೆಸ್ ಪಕ್ಷದಲ್ಲಿಯೂ ಜಿಲ್ಲಾಧ್ಯಕ್ಷರಾಗಿ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸೇರಿದಂತೆ ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದರು. ಮಲ್ನಾಡು ಅಭಿವೃದ್ಧಿ ನಿಗಮ, ಬಯಲು ಸೀಮೆ ಅಭಿವೃದ್ಧಿ ನಿಗಮ, ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ಸಾಮಾಜಿಕವಾಗಿಯೂ ವಿವಿಧ ಸಂಘಟನೆಗಳಲ್ಲಿ ಅವರು ಸಕ್ರಿಯರಾಗಿ ತೊಡಗಿಸಿಕೊಂಡಿದ್ದಾರೆ. ಜಿಲ್ಲೆಯ ಪ್ರಭಾವಿ ಕಾಂಗ್ರೆಸ್ ನಾಯಕರಾಗಿರುವ ಬಿ.ರಮಾನಾಥ ರೈಯವರನ್ನು ಇದೀಗ ಎಐಸಿಸಿ ಸದಸ್ಯರಾಗಿ ನೇಮಕಗೊಳಿಸಲಾಗಿದೆ.


ಕಡಬ ಮೂಲದವರಾಗಿರುವ ಯು.ಟಿ.ಖಾದರ್ ಅವರು ನ್ಯಾಯವಾದಿಯಾಗಿದ್ದು, ಪ್ರಸ್ತುತ ರಾಜ್ಯ ವಿಧಾನ ಸಭೆ ವಿಪಕ್ಷ ಉಪನಾಯಕನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ನಾಲ್ಕು ಬಾರಿ ಶಾಸಕರಾಗಿ ಚುನಾಯಿತರಾಗಿರುವ ಇವರು ರಾಜ್ಯ ಸರಕಾರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ, ವಸತಿ ಮತ್ತು ನಗರಾಭಿವೃದ್ಧಿ ಸಚಿವರಾಗಿಯೂ ಯಶಸ್ವಿ ಕಾರ್ಯನಿರ್ವಹಣೆ ಮಾಡಿದ್ದರು.ಮಂಜುನಾಥ ಭಂಡಾರಿಯವರು ಕೆಲ ತಿಂಗಳ ಹಿಂದೆಯಷ್ಟೆ ವಿಧಾನಪರಿಷತ್ ಶಾಸಕರಾಗಿ ಚುನಾಯಿತರಾಗಿದ್ದರು.ಇವರು 2014 ರಲ್ಲಿ ಮಾಜಿ ಮುಖ್ಯ ಮಂತ್ರಿ ಬಿಜೆಪಿಯ ಬಿ.ಎಸ್.ಯಡಿಯೂರಪ್ಪ ವಿರುದ್ದ ಶಿವಮೊಗ್ಗದಲ್ಲಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಪರಾಜಯರಾಗಿದ್ದರು. ಸಹ್ಯಾದ್ರಿ ಸಮೂಹ ಶಿಕ್ಷಣ ಸಂಸ್ಥೆಗಳ ಮಾಲಕರೂ ಆಗಿದ್ದಾರೆ.ಐವನ್ ಡಿಸೋಜ ಅವರು ಈ ಹಿಂದೆ ವಿಧಾನ ಪರಿಷತ್ ಶಾಸಕರಾಗಿ ಕಾರ್ಯನಿರ್ವಹಿಸಿದ್ದರು.

LEAVE A REPLY

Please enter your comment!
Please enter your name here