ಬಿಜೆಪಿ ಯುವನಾಯಕ‌ ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣ|ತನಿಖೆಗೆ ಇಳಿದ ದಕ್ಷ ಪೊಲೀಸ್ ಅಧಿಕಾರಿ ಅಲೋಕ್ ಕುಮಾರ್

0

ಕೊಲೆಗೆ ಸ್ಥಳೀಯರ ಸಹಕಾರದ ಶಂಕೆ

ಪುತ್ತೂರು: ಬೆಳ್ಳಾರೆಯಲ್ಲಿ ಜುಲೈ 26ರಂದು ರಾತ್ರಿ ನಡೆದ ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರ್(34ವ)ರವರ ಬರ್ಬರ ಕೊಲೆ ಪ್ರಕರಣದ ಹಂತಕರ ಬಂಧನಕ್ಕಾಗಿ ಪೊಲೀಸರ ಐದು ತಂಡ ರಚಿಸಲಾಗಿರುವ ನಡುವೆಯೇ ದಕ್ಷ ಪೊಲೀಸ್ ಅಧಿಕಾರಿ ಅಲೋಕ್‌ ಕುಮಾರ್ ತನಿಖೆಗೆ ಇಳಿದಿದ್ದಾರೆ.


ಸುಳ್ಯ ತಾಲೂಕು ಯುವವಾಹಿನಿ ಘಟಕದ ಮಾಜಿ ಅಧ್ಯಕ್ಷರೂ, ಯುವವಾಹಿನಿ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿಯೂ ಬಿಜೆಪಿ ಯುವಮೋರ್ಛಾದ ದ.ಕ. ಜಿಲ್ಲಾ ಕಾರ್ಯಕಾರಿಣಿಯ ಸದಸ್ಯರೂ ಆಗಿದ್ದ ಯುವ ಉದ್ಯಮಿ ಪ್ರವೀಣ್ ನೆಟ್ಟಾರುರವರನ್ನು ದುಷ್ಕರ್ಮಿಗಳು ಕತ್ತಿಯಿಂದ ಕಡಿದು ಹತ್ಯೆ ಮಾಡಿರುವ ಕುರಿತು ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಬೆಳ್ಳಾರೆ ಠಾಣಾ ಪೊಲೀಸರು ತನಿಖೆ ಮುಂದುವರಿಸಿದ್ದು ಶಂಕಿತರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.


ಜುಲೈ 26ರಂದು ರಾತ್ರಿ 8.30ರ ವೇಳೆಗೆ ಪ್ರವೀಣ್‌ರವರು ಬೆಳ್ಳಾರೆ ಮೇಲಿನಪೇಟೆ ಮಾಸ್ತಿಕಟ್ಟೆಯಲ್ಲಿರುವ ತನ್ನ ಅಕ್ಷಯ ಚಿಕನ್ ಸೆಂಟರಿನಲ್ಲಿ ಕುಳಿತುಕೊಂಡಿದ್ದ ವೇಳೆ ಕೆ.ಎಲ್. ನಂಬರಿನ ಸ್ಪ್ಲೆಂಡರ್ ಬೈಕ್‌ನಲ್ಲಿ ಮುಸುಕು ಧರಿಸಿಕೊಂಡು ಬಂದಿದ್ದ ದುಷ್ಕರ್ಮಿಗಳು ಪ್ರವೀಣರವರಿಗೆ ಬರ್ಬರವಾಗಿ ಕಡಿದು ಪರಾರಿಯಾಗಿದ್ದರು.
ಪ್ರವೀಣರವರ ಕೊಲೆ ಕೃತ್ಯ ಯಾವ ಕಾರಣಕ್ಕಾಗಿ ನಡೆಯಿತು ಎಂಬುದು ಇನ್ನೂ ಖಚಿತವಾಗಿಲ್ಲವಾದರೂ ಕೆಲವು ದಿನಗಳ ಹಿಂದೆಯಷ್ಟೇ ಬೆಳ್ಳಾರೆಯಲ್ಲಿ ನಡೆದ ಮಸೂದ್ ಎಂಬವರ ಕೊಲೆಗೆ ಪ್ರತೀಕಾರವಾಗಿ‌ ಹಿಂದೂ ಸಂಘಟನೆಗಳಲ್ಲಿ ಸಕ್ರಿಯವಾಗಿದ್ದ ಪ್ರವೀಣರವರನ್ನು ಟಾರ್ಗೆಟ್ ಮಾಡಲಾಗಿರಬಹುದು ಎಂಬ ಬಲವಾದ ಸಂಶಯದಲ್ಲಿ ಪೊಲೀಸರ ತಂಡ ಕಾರ್ಯಾಚರಣೆಗೆ ಇಳಿದಿದೆ. ಇದೀಗ ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿಯಾಗಿರುವ ರೌಡಿಗಳನ್ನು ಮತ್ತು ನಕ್ಸಲರನ್ನು ಹೆಡೆಮುರಿ ಕಟ್ಟಿರುವ ಅಲೋಕ್ ಕುಮಾರ್ ನೇತೃತ್ವದಲ್ಲಿ ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣದ ತನಿಖೆ ನಡೆಸಲಾಗುತ್ತಿದೆ. ಕೊಲೆಗೆ ಬೆಳ್ಳಾರೆಯವರೇ ಸಾಥ್ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

LEAVE A REPLY

Please enter your comment!
Please enter your name here