ಕಲ್ಲಡ್ಕ ಶ್ರೀರಾಮ ಶಾಲೆಯಲ್ಲಿ ಕೆಡ್ಡಸೊ ಆಚರಣೆ

0

ಬಂಟ್ವಾಳ : ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸ ಧ್ಯಾನ ಮಂದಿರದಲ್ಲಿ ಕೆಡ್ಡಸ ಹಬ್ಬ ಆಚರಿಸಲಾಯಿತು.
ಕಾರ್ಯಕ್ರಮದ ಮೊದಲಿಗೆ ತುಳಸಿ ಕಟ್ಟೆಯ ಮುಂದೆ ಗೋಮಯದಿಂದ ಶುದ್ಧೀಕರಿಸಿ, ಭೂಮಿದೇವಿಯ ಸಾನಿಧ್ಯ ರಚಿಸಿ, ದೀಪಹಚ್ಚಿ, ಮಣೆಯ ಮೇಲೆ ಎಣ್ಣೆ, ಸೀಗೆಕಾಯಿ, ಅರಶಿನ – ಕುಂಕುಮ, ಪಚ್ಚೆ ಹಸಿರಿನ ಹುಡಿ, ವೀಳ್ಯದೆಲೆ ಇತ್ಯಾದಿಗಳನ್ನು ಭೂಮಿ ದೇವಿಯ ಸ್ನಾನಕೋಸ್ಕರ ಇಟ್ಟು ಹುರುಳಿ, ಹೆಸರುಕಾಳು, ಒಣ ಕೊಬ್ಬರಿ, ಕಡಲೆಕಾಯಿಗಳ ಮಿಶ್ರಣ(ನನ್ನೇರಿ) ಇದರೊಂದಿಗೆ ತುಳುನಾಡಿನ ವಿವಿಧ ಭಕ್ಷ್ಯಗಳನ್ನು(ಸಾರ್ನಡ್ಡೆ) ಊರಿನ ಹಿರಿಯರಾದ ಜಯಂತಿಯವರು ಭೂಮಿಗೆ ಎಣ್ಣೆ ಹಾಲು ಹಾಕಿ ಬಡಿಸಿದರು. ವಿದ್ಯಾರ್ಥಿಗಳು ಸುತ್ತ ನಿಂತು ಈ ಕಾರ್ಯಕ್ರಮ ವೀಕ್ಷಿಸಿದರು.


ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ಅಧ್ಯಾಪಕಿ ವಿದ್ಯಾಶ್ರೀ, ಕೆಡ್ಡಸದ ಮಹತ್ವ ತಿಳಿಸುತ್ತಾ, ತುಳುನಾಡಿನಲ್ಲಿ ವಾರ್ಷಿಕ ವರ್ತನದಲ್ಲಿ ಆಚರಣೆಯಾಗುವ ಹಬ್ಬ. ಪೂರ್ವಿಕರು ಭೂಮಿಯನ್ನು ಹೆಣ್ಣೆಂದೇ ಪರಿಗಣಿಸಿ ಆರಾಧಿಸಿದವರು. ಅವರ ಎಲ್ಲಾ ಆಚರಣೆಯಲ್ಲೂ ಪ್ರಕೃತಿ ಪ್ರೇಮ, ಅಂತಃಕರಣ, ಮಾನವೀಯ ಸಂಬಂಧಗಳು ಎದ್ದುಕಾಣುತ್ತದೆ. ಕೆಡ್ಡಸ ಆಚರಣೆಯನ್ನು ಭೂಮಿ ತಾಯಿಯ ಮೀಯುವ ಹಬ್ಬವೆಂದು ಕರೆದು ಭೂಮಿಯನ್ನು ಸಾಮಾನ್ಯ ಸ್ತ್ರೀಯಂತೆ ಅವರು ಪರಿಭಾವಿಸಿದ್ದಾರೆ. ಹೆಣ್ಣಿನಂತೆ ಭೂಮಿಯು ಮುಟ್ಟಾಗುತ್ತಾಳೆಂದು ಪರಿಗಣಿಸಿ, ಆ ನಂಬಿಕೆಯ ಪ್ರಕಾರ ಅವಳನ್ನು ಮಡಿಗೊಳಿಸುವ ದಿನವೆಂದು ಈ ಆಚರಣೆಯನ್ನು ನಡೆಸುತ್ತಾರೆ. ಕೆಡ್ಡಸ ಹಬ್ಬವನ್ನು ಶುರು ಕೆಡ್ಡಸ, ನಡು ಕೆಡ್ಡಸ ಹಾಗೂ ಕಡೆ ಕೆಡ್ಡಸ ಎಂದು ಮೂರು ದಿನ ಆಚರಿಸುತ್ತಾರೆ. ಈ ಮೂರು ದಿನ ನಡೆಯುವ ಹಬ್ಬದ ಆಚರಣೆಯಲ್ಲಿ ನೆಲ ಅಗೆಯುವುದು, ಮರಗಳನ್ನು ಕಡಿಯುವುದು ನಿಷಿದ್ಧ. ಯಾಕೆಂದರೆ ಭೂಮಿ ರಜೋಮಯವಾಗಿರುವುದರಿಂದ ಕೃಷಿ ಕಾರ್ಯದಲ್ಲಿ ತೊಡಗಿದರೆ ಭೂಮಿಗೆ ನೋವಾಗುತ್ತದೆ ಎಂಬ ನಂಬಿಕೆಯಿದೆ.ಕೆಡ್ಡಸದ ಸಮಯದಲ್ಲಿ ಮೂಡಣ ದಿಕ್ಕಿನಿಂದ ಒಂದು ವಿಲಕ್ಷಣವಾದ ಗಾಳಿ ಬೀಸುತ್ತದೆ. ಇದನ್ನು ಕೆಡ್ಡಸದ ಗಾಳಿ ಎಂದು ಕರೆಯುತ್ತಾರೆ.ಈ ಸಂದರ್ಭ ಋತುಸ್ನಾನ ಮುಗಿಸಿರುವ ಭೂಮಿದೇವಿಯ ಈ ಗಾಳಿಯಿಂದ ಪುಲಕಗೊಂಡು ಫಲವತಿಯಾಗಲು ಸಜ್ಜಾಗುತ್ತಾಳೆ ಎಂಬ ನಂಬಿಕೆಯಿದೆ. ಇಂತಹ ಆಚರಣೆಗಳಿಂದ ಮಕ್ಕಳಲ್ಲಿ ಪ್ರಕೃತಿ ಆರಾಧನೆ ಮತ್ತು ಕಾಳಜಿ ಎಳವೆಯಲ್ಲಿಯೇ ಮೂಡವುದಲ್ಲದೆ, ತುಳುನಾಡಿನ ಆಚಾರ, ಸಂಸ್ಕೃತಿ ಮನೆ, ಮನೆಯಲ್ಲಿ ಉಳಿಸಿ ಬೆಳಸುವಂತಾಗಬೇಕು ಎಂದರು.


ನಂತರ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರಿಂದ ಕೆಡ್ಡಸ ಕುರಿತಾದ ಹಾಡನ್ನು ಹಾಡಿದರು.
ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿಗಳಿಗೆ ನನ್ನೇರಿಯನ್ನು ಹಂಚಲಾಯಿತು.


ವೇದಿಕೆಯಲ್ಲಿ ಶ್ರೀರಾಮ ಸೌಹಾರ್ದ ಸಹಕಾರಿ ನಿಯಮಿತ ಇದರ ಕಾರ್ಯನಿರ್ವಾಹಕರಾದ ಸಂಗೀತ, ಶ್ರೀರಾಮ ಶಿಶುಮಂದಿರದ ಪ್ರಮುಖರಾದ ಶೋಭಾ ಹಾಗೂ ಶ್ರೀರಾಮ ಪ್ರಾಥಮಿಕ ವಿಭಾಗದ ಅಧ್ಯಾಪಕರಾದ ಸುಮಂತ್ ಆಳ್ವ ಎಮ್, ರೂಪಕಲಾ ಎಂ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ಸುಖೇಶ್ ಸ್ವಾಗತಿಸಿ, ಸುಶ್ಮಿತಾ ಭಟ್ ನಿರೂಪಿಸಿ, ವೈದೇಹಿ ವಂದಿಸಿದರು.

LEAVE A REPLY

Please enter your comment!
Please enter your name here