ಒಡಿಯೂರು:ನೆಲ, ಜಲ, ನಲಿಕೆ-ತೆಲಿಕೆ ವಿಚಾರಗೋಷ್ಠಿ:ಪಂಚತತ್ವದಲ್ಲಿ ನಡೆದರೆ ಬದುಕು ಹಸನಾಗ ಬಹುದು: ಒಡಿಯೂರು ಶ್ರೀ

0

ವಿಟ್ಲ: ತುಳುನಾಡಿನ ಪರಂಪರೆ ವಿಶೇಷವಾದುದು. ತುಳಸಿಗಿರುವ ಗುಣಗಳು ವಿಶೇಷವಾದುದು. ದೇವರ ಲೀಲೆಯನ್ನು ಲೆಕ್ಕಾಚಾರ ಮಾಡಿದವರಿಲ್ಲ. ಕಣ್ಣ ನೀರಿನಲ್ಲಿ ಸತ್ಯ ಅಡಗಿದೆ. ತುಳುಪಿನಲ್ಲಿ ಆರಾಧನೆ ಸತ್ಯವಿದೆ. ಈ ಒಂದು ಕಾರ್ಯಕ್ರಮದಲ್ಲಿ ಮೂಲನಂಬಿಕೆಗಳ ಅನಾವರಣವಾಗಿದೆ. ವೇಗದಲ್ಲಿ ಸಂಚರಿಸಿದರೆ ಆಪತ್ತು ನಿಶ್ಚಿತ. ಆದ್ಯಾತ್ಮಿಕ ದೃಷ್ಟಿ ಇಟ್ಟಲ್ಲಿ ಉಳಿವು ಖಂಡಿತಾ. ಮಣ್ಣಿನ ಗುಣವನ್ನುತಿಳಿದು ಬದುಕುವ ಮನಸ್ಸು ನಮ್ಮದಾಗಬೇಕು. ಮಣ್ಣು, ನೀರು ಮೂಲ ಸಂಸ್ಕೃತಿಯ ಭಾಗ. ನಮ್ಮಲ್ಲಿರುವ ನಂಬಿಕೆಯನ್ನು ಗಟ್ಟಿಗೊಳಿಸುವ ಕೆಲಸವಾಗಬೇಕು. ಪಂಚತತ್ವದಲ್ಲಿ ನಡೆದರೆ ಬದುಕು ಹಸನಾಗಬಹುದು ಎಂದು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿಯವರು ಹೇಳಿದರು.

ಅವರು ನೆಲ, ಜಲ, ತೆಲಿಕೆ-ನಲಿಕೆ ವಿಚಾರದಲ್ಲಿ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ನಡೆದ ತುಳು ತುಲಿಪು ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು. ಮೂಡಬಿದರೆ ಆಳ್ವಾಸ್ ಕಾಲೇಜಿನ ಉಪನ್ಯಾಸಕ ಡಾ| ಯೋಗೀಶ್ ಕೈರೋಡಿರವರು ನೆಲ ವಿಚಾರವಾಗಿ ಮಾತನಾಡಿ ನೆಲವನ್ನು ನೋಡುವ ದೃಷ್ಠಿ ಬದಲಾಗಿದೆ. ಕೃಷಿ ವಿಚಾರದಲ್ಲಿ ಹಿಂದೆ ನಮ್ಮಲ್ಲಿದ್ದ ಭಾವನೆ ಬದಲಾಗಿದೆ. ನಮ್ಮ ನೆಲದ ನಂಬಿಕೆ ನಮ್ಮ ಕುಟುಂಬವನ್ನು ಒಟ್ಟುಸೇರಿಸುತ್ತದೆ. ಸತ್ಯ ಧರ್ಮಕ್ಕೆ ನಮ್ಮ ತುಳುನಾಡಿನಲ್ಲಿ ವಿಶೇಷ ಮಾನ್ಯತೆ ಇದೆ. ಸತ್ಯ ಧರ್ಮದ ಆಚರಣೆ ಮಾಡುವವರು ನಾವು. ತುಳುನಾಡನ್ನು ಭೌಗೋಳಿಕವಾಗಿ ಹಾಗೂ ದೈವ ಪಾಡ್ಡನಗಳ ಆಧಾರದಲ್ಲಿ ವಿಶ್ಲೇಷಿಸಬಹುದು. ನೆಲದ ಬಗ್ಗೆ ತುಳುವರಿಗೆ ಪೂಜನೀಯ ಭಾವನೆಯಿದ್ದು, ಆರಾಧನೆ – ಆಚರಣೆಗಳ ಮೂಲಕ ಕೃಷಿಯನ್ನು ಮಾಡಲಾಗುತ್ತಿತ್ತು. ನೆಲಮೂಲ ಆಚರಣೆಯಲ್ಲಿರುವ ತುಳುನಾಡಿನಲ್ಲಿ ಆಹಾರಕ್ಕೆ ಕೊರತೆ ಬಂದರೆ ವಿಷಕ್ಕಿಂತ ಅಪಾಯಕಾರಿ ಎಂಬ ಕಲ್ಪನೆಯಿತ್ತು. ಇಂದು ನೆಲವನ್ನು ನೋಡುವ ದೃಷ್ಠಿ ಬದಲಾಗಿದ್ದು, ಪೂಜನೀಯ ಭಾವನೆ ಕಡಿಮೆಯಾಗಿ ವಾಣಿಜ್ಯದತ್ತ ವಾಲುತ್ತಿದೆ ಎಂದರು.

ಹಿರಿಯ ಪತ್ರಕರ್ತ ಯು. ಕೆ. ಕುಮಾರನಾಥ್ ರವರು ಜಲ ವಿಚಾರವಾಗಿ ಮಾತನಾಡಿ ಕೈಗಾರಿಕೀಕರಣದ ಮೂಲಕ ನದಿ ಮೂಲಗಳಿಗೆ ಕೈಹಾಕಿರುವುದು ಮನುಕುಲಕ್ಕೆ ಅಪಾಯದ ಸೂಚಕವಾಗಿದೆ. ಅಭಿವೃದ್ಧಿಯ ಹೆಸರಿನಲ್ಲಿ ನೀರಿನ ಮೂಲಗಳಾದ ಕೆರೆಗಳು ಮಾಯವಾಗುತ್ತಿವೆ. ನದಿ ತಿರುವಿನಂತಹ ಕಾರ್ಯಗಳು ಭವಿಷ್ಯದಲ್ಲಿ ಪರಿಸರಕ್ಕೆ ಮಾರಕವಾಗಿದೆ. ಆಧುನಿಕತೆಯ ಹೆಸರಿನಲ್ಲಿ ನೀರನ್ನು ಅನಾವಶ್ಯಕವಾಗಿ ಪೋಲು ಮಾಡಲಾಗುತ್ತಿದೆ. ಕುಡಿಯುವ ನೀರಿನ ಮೌಲ್ಯವನ್ನು ಅರಿತು ಬಳಸುವ ಕಾರ್ಯವಾಗಬೇಕು ಎಂದರು.

ದೈವ ನರ್ತಕ ಕಿಟ್ಟು ಕಲ್ಲುಗುಡ್ಡೆರವರು ನಲಿಕರ – ತೆಲಿಕೆ ವಿಚಾರವಾಗಿ ಮಾತನಾಡಿ ನೆಲ – ಜಲ ಸರಿಯಿದ್ದಾಗ ಸಮಾಜದಲ್ಲಿ ಸಂತೋಷ ಉಳಿಯುತ್ತದೆ. ದುಡಿ ನಲಿಕೆಯಿಂದ – ಭರತನಾಟ್ಯದವರೆಗೆ ವಿವಿಧ ನೃತ್ಯ ಪ್ರಾಕಾರಗಳಿದ್ದು, ಜನಪದ ಕಲೆಯ ಒಳಗೆ ಬದುಕಿನ ಸಾರ ಹುದುಗಿದೆ. ವೈಜ್ಞಾನಿಕ ಜೀವನ ಹಾಗೂ ಔಧ್ಯೋಗಿಕರಣಕ್ಕೆ ಮಾರುಹೋಗಿ, ತುಳುನಾಡಿನ ನೃತ್ಯ ಪ್ರಾಕಾರಗಳು ನಶಿಸುತ್ತಿದೆ. ತುಳುನಾಡಿನ ಮಣ್ಣಿನ ಗುಣದಿಂದ ಸಂಸ್ಕೃತಿಗೆ ಅಳಿವಿಲ್ಲ ಎಂದರು. ರಾಜಶ್ರೀ ಟಿ. ರೈ ಸ್ವಾಗತಿಸಿದರು. ಸದಾಶಿವ ಶೆಟ್ಟಿ ಕನ್ಯಾನ ವಂದಿಸಿದರು. ವಿಜಯಾ ಶೆಟ್ಟಿ ಸಾಲೆತ್ತೂರು ಕಾರ್ಯಕ್ರಮ ನಿರೂಪಿಸಿದರು.


ತುಳು ಜಾನಪದ ತೆಲಿಕೆ – ನಲಿಕೆ ಸ್ಪರ್ಧೆ ನಡೆಯಿತು.: ಸ್ಪರ್ಧೆ ಯಲ್ಲಿ ಒಟ್ಟು ಎಂಟು ತಂಡಗಳು ಭಾಗವಹಿಸಿದ್ದವು. ರಾಜಶ್ರೀ ಟಿ. ರೈ ಕಾರ್ಯಕ್ರಮ ನಿರೂಪಿಸಿದರು. ಸಾಯಂಕಾಲ ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಕೃಪಾಪೋಷಿತ ಯಕ್ಷಗಾನ ಮಂಡಳಿಯವರಿಂದ ಪಾವನ ಪವನಾತ್ಮಜ ಯಕ್ಷಗಾನ ಬಯಲಾಟ ನಡೆಯಿತು.

LEAVE A REPLY

Please enter your comment!
Please enter your name here