ಸಮಾಜದ ಹಿತ ಕಾಯುವ ಕೆಲಸ ಎಲ್ಲರಿಂದಲೂ ಆಗಲಿ: ಒಡಿಯೂರು ಶ್ರೀ
ವ್ಯಕ್ತಿ ನಿರ್ಮಾಣದ ಮೂಲಕ ರಾಮರಾಜ್ಯ ನಿರ್ಮಾಣ ಸಾಧ್ಯ: ನಳೀನ್ ಕುಮಾರ್ ಕಟೀಲು
ಶ್ರೀಗಳ ಧಾರ್ಮಿಕತೆಯೊಂದಿಗೆ ಸಾಮಾಜಿಕ ಕಾರ್ಯ ಅಭಿನಂದನೀಯ: ರಾಜೇಶ್ ನಾಯ್ಕ್ ಉಳಿಪ್ಪಾಡಿ
ಹಿರಿಯರ ಸಂಸ್ಕೃತಿ ಸಂಸ್ಕಾರವನ್ನು ನಾವು ಮೈಗೂಡಿಸಿಕೊಳ್ಳಬೇಕು: ಸದಾಶಿವ ಶೆಟ್ಟಿ ಕೂಳೂರು ಕನ್ಯಾನ
ಕ್ಷೇತ್ರದ ಶಕ್ತಿ ಅಪಾರ: ಡಾ. ಸುರೇಶ್ ಎಸ್.ರಾವ್
ವಿಟ್ಲ: ನಾವು ನಮ್ಮ ದೇಶ, ರಾಜ್ಯದ ಬಗ್ಗೆ ಯೋಚನೆ ಮಾಡಬೇಕಾದ ಕಾಲಘಟ್ಟದಲ್ಲಿದ್ದೆವೆ. ಸಮಾಜದ ಹಿತವನ್ನು ಕಾಯುವ ಕೆಲಸ ಎಲ್ಲರಿಂದಲೂ ಆಗಲಿ. ಜನಹಿತವನ್ನು ಕಾಪಾಡುವ ಕೆಲಸ ಸರಕಾರದಿಂದ ಆಗಬೇಕಿದೆ. ಈಗಿನ ಪೀಳಿಗೆಗೆ ಆಧ್ಯಾತ್ಮ ಶಿಕ್ಷಣದ ಅವಶ್ಯಕತೆಯಿದೆ. ರಾಷ್ಟ್ರ ಪ್ರೇಮದೊಂದಿಗೆ ದೇವರ ಭಕ್ತಿ ತುಂಬುವ ಕೆಲಸವಾಗಬೇಕು ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ತೀಗುರುದೇವಾನಂದ ಸ್ವಾಮೀಜಿಯವರು ಹೇಳಿದರು.
ಅವರು ಒಡಿಯೂರು ಗುರುದೇವದತ್ತ ಸಂಸ್ಥಾನದಲ್ಲಿ ಜ.೩೧ರಂದು ನಡೆದ ತುಳು ಸಾಹಿತ್ಯ ಸಮ್ಮೇಳನದ ಸಮಾರೋಪ ಹಾಗೂ ತುಳುನಾಡ ಜಾತ್ರೆ ಶ್ರೀಒಡಿಯೂರು ರಥೋತ್ಸವದ ಅಂಗವಾಗಿ ನಡೆದ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದರು. ರಾಸಾಯನಿಕ ಬಿಟ್ಟು ಸಾವಯವದತ್ತ ಒಲವು ತೋರುವ ಅಗತ್ಯವಿದೆ. ಸುಸಂಸ್ಕೃತ ಸಮಾಜ ನಿರ್ಮಾಣವಾಗಲು ಇಂತಹ ಧಾರ್ಮಿಕ ಕಾರ್ಯಕ್ರಮಗಳು ಅಗತ್ಯ. ಅಧರ್ಮವನ್ನು ಮೆಟ್ಟಿ ನಿಲ್ಲುವ ಕೆಲಸ ತಾಯಂದಿರಿಂದ ಆಗಬೇಕು. ಯುವ ಸಮುದಾಯ ದುಶ್ಚಟ ಮುಕ್ತ ಸಮಾಜದ ನಿರ್ಮಾಣಕ್ಕೆ ಪಣತೊಡಬೇಕು. ಪ್ರತೀ ಮನೆ ಧಾರ್ಮಿಕ ಶಿಕ್ಷಣಕೇಂದ್ರಗಳಾಗಬೇಕು ಎಂದರು.
ವ್ಯಕ್ತಿ ನಿರ್ಮಾಣದ ಮೂಲಕ ರಾಮರಾಜ್ಯ ನಿರ್ಮಾಣ ಸಾಧ್ಯ:
ಸಂಸದ ನಳೀನ್ ಕುಮಾರ್ ಕಟೀಲ್ ರವರು ಮಾತನಾಡಿ ವ್ಯಕ್ತಿ ನಿರ್ಮಾಣದ ಮೂಲಕ ರಾಮರಾಜ್ಯ ನಿರ್ಮಾಣ ಸಾಧ್ಯ. ಒಡಿಯೂರು ಶ್ರೀಗಳ ಗ್ರಾಮಾಭಿವೃದ್ಧಿಯ ಪರಿಕಲ್ಪನೆಗಳು ಅಭಿನಂದನೀಯ. ಮನೆಮನೆಗಳಲ್ಲಿ ರಾಮನ ಸೃಷ್ಟಿ ಆಗಬೇಕು. ಗಾಂಧೀಜಿ ಅವರ ಗ್ರಾಮರಾಜ್ಯದ ಪರಿಕಲ್ಪನೆ ಗ್ರಾಮವಿಕಾಸದ ಮೂಲಕ ಒಡಿಯೂರು ಶ್ರೀಗಳಿಂದ ನನಸಾಗಿದೆ, ಭಾರತವಿಂದು ಸಾಂಸ್ಕೃತಿಕವಾಗಿ ಎದ್ದು ನಿಲ್ಲುವ ಅಗತ್ಯತೆ ಬಹಳಷ್ಟಿದೆ, ತುಳು, ಭಾಷೆ, ಪರಂಪರೆಗೆ ಧರ್ಮಸ್ಥಳ ಮತ್ತು ಒಡಿಯೂರು ಕ್ಷೇತ್ರದ ಕೊಡುಗೆ ಅಪಾರ. ತುಳು ಭಾಷೆ ಸಂಸ್ಕೃತಿ ಉಳಿವಿಗೆ ಸಂಸ್ಥಾನದ ಕೊಡುಗೆ ಅಭಿನಂದನಾರ್ಹ ಎಂದರು.
ಶ್ರೀಗಳ ಧಾರ್ಮಿಕತೆಯೊಂದಿಗೆ ಸಾಮಾಜಿಕ ಕಾರ್ಯ ಅಭಿನಂದನೀಯ:
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತುರವರು ಮಾತನಾಡಿ ಸ್ವಾಮೀಜಿ ಧಾರ್ಮಿಕತೆಯೊಂದಿಗೆ ಸಾಮಾಜಿಕ ಕಾರ್ಯದಲ್ಲಿ ನಿರತರಾಗಿರುವುದು ಅಭಿನಂದನೀಯ. ಕ್ಷೇತ್ರದ ಪ್ರತಿಯೊಂದು ಅಭಿವೃದ್ಧಿಯಲ್ಲಿ ನಾವು ಸದಾ ಕೈಜೋಡಿಸುತ್ತೇವೆ. ನಮಗೆ ಸಿಕ್ಕಿದ ಅವಕಾಶವನ್ನು ಸದುಪಯೋಗ ಮಾಡುವ ಪ್ರಯತ್ನ ಮಾಡುತ್ತಿದ್ದೆನೆ ಎಂದರು.
ಹಿರಿಯರ ಸಂಸ್ಕೃತಿ ಸಂಸ್ಕಾರವನ್ನು ನಾವು ಮೈಗೂಡಿಸಿಕೊಳ್ಳಬೇಕು:
ಮುಂಬೈ ಹೇರಂಭ ಇಂಡಸ್ಟ್ರೀಸ್ ನ ಮಾಲಕರಾದ ಸದಾಶಿವ ಶೆಟ್ಟಿ ಕೂಳೂರು ಕನ್ಯಾನರವರು ಮಾತನಾಡಿ, ಒಡಿಯೂರಿನ ಹೆಸರು ಹತ್ತೂರಿನಲ್ಲಿ ಪಸರಿಸಿದ ಶ್ರೀಗಳ ಪ್ರಯತ್ನ ಅಪಾರ. ನಮ್ಮ ಭಾರತ ದೇಶದಲ್ಲಿ ಆಧ್ಯಾತ್ಮಿಕ ಶಕ್ತಿ ಅಪಾರ. ಹಿರಿಯರ ಸಂಸ್ಕೃತಿ ಸಂಸ್ಕಾರವನ್ನು ನಾವು ಮೈಗೂಡಿಸಿಕೊಳ್ಳಬೇಕು. ಭಕ್ತಿ ಶ್ರದ್ದೆ ನಮ್ಮಲ್ಲಿರಬೇಕು. ಇಲ್ಲಿ ಗುರು ಶಕ್ತಿಯ ಸಂಚಯನವಾಗುತ್ತದೆ. ನಿಸ್ವಾರ್ಥ ತ್ಯಾಗದಲ್ಲಿ ಗುರುಕೃಪೆ ಇದೆ. ಕಷ್ಟದಲ್ಲಿರುವವರ ಕಣ್ಣೀರೊರೆಸುವ ಕೆಲಸ ಸಂಸ್ಥಾನದಿಂದ ಆಗುತ್ತಿದೆ ಎಂದರು.
ಕ್ಷೇತ್ರದ ಶಕ್ತಿ ಅಪಾರ:
ಮುಂಬೈ ಸಂಜೀವಿನಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. ಸುರೇಶ್ ಎಸ್.ರಾವ್ ರವರು ಮಾತನಾಡಿ ಇಲ್ಲಿನ ಶಕ್ತಿ ಅಪಾರ. ಇಂತಹ ಗುರುಗಳನ್ನು ಪಡೆದ ಈ ಗ್ರಾಮಸ್ಥರು ಧನ್ಯರು. ತಾಳ್ಮೆಯ ಪ್ರತಿರೂಪ ಶ್ರೀಗಳು. ಕ್ಷೇತ್ರದ ಬೆಳವಣಿಗೆಗೆ ಶ್ರೀಗಳ ಶ್ರಮ ಅಪಾರ. ಎಲ್ಲರನ್ನು ಜೊತೆಯಾಗಿ ಕೊಂಡೊಯ್ಯುವ ಅವರ ಜಾಣ್ಮೆ ಮೆಚ್ಚಲೇಬೇಕು ಎಂದರು.
ಸಾಧ್ವೀ ಶ್ರೀ ಮಾತಾನಂದಮಯೀರವರು ಉಪಸ್ಥಿತರಿದ್ದರು. ತುಳು ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾದ ಹಿರಿಯ ಸಾಹಿತಿ ಡಾ. ವಸಂತಕುಮಾರ ಪೆರ್ಲರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಇದೇ ಸಂದರ್ಭದಲ್ಲಿ ಮಲಾರು ಜಯರಾಮ ರೈ ಬರೆದ ಒಡಿಯೂರು ಶ್ರೀಗಳ ಪ್ರವಚನಗಳ ದೃಷ್ಟಾಂತ ಕಥೆಗಳ ಮಾಲಿಕೆ ‘ಕತೆ ಪಂಡೆನ ಜೋಗಿ’ ಪುಸ್ತಕವನ್ನು ಬಿಡುಗಡೆ ಗೊಳಿಸಲಾಯಿತು. ತುಳು ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾದ ಹಿರಿಯ ಸಾಹಿತಿ ಡಾ. ವಸಂತಕುಮಾರ ಪೆರ್ಲರವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು. ಇಬ್ಬರು ಅರ್ಹ ಫಲಾನುಭವಿಗಳಿಗೆ ಗಾಲಿಕುರ್ಚಿಯನ್ನು ವಿತರಿಸಲಾಯಿತು. ದಾವಣಗೆರೆ ಹೂವಿನಹಡಗಲಿಯಲ್ಲಿ ಒಡಿಯೂರು ಶ್ರೀ ಗುರುದೇವ ಸೇವಾ ಬಳಗದ ವತಿಯಿಂದ ನಿರ್ಮಾಣಗೊಳ್ಳಲಿರುವ ಗುರು ಮಂದಿರ ನಿರ್ಮಾಣದ ಶಿಲಾನ್ಯಾಸದ ಆಮಂತ್ರಣ ಪತ್ರಿಕೆಯನ್ನು ಸ್ವಾಮೀಜಿಗಳು ಬಿಡುಗಡೆ ಮಾಡಿದರು.
ವಿಜಯಲಕ್ಷ್ಮೀ ಸುರೇಶ್ ಎಸ್.ರಾವ್, ಮುಂಬೈನ ಉದ್ಯಮಿಗಳಾದ ವಾಮಯ್ಯ ಬಿ. ಶೆಟ್ಟಿ ಚೆಂಬೂರು, ದಯಾನಂದ ಹೆಗ್ಡೆ ಮುಂಬೈ, ಒಡಿಯೂರು ಶ್ರೀ ವಿವಿಧೋದ್ಧೇಶ ಸೌಹಾರ್ದ ಸಹಕಾರಿಯ ಅಧ್ಯಕ್ಷರಾದ ಎ. ಸುರೇಶ್ ರೈ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ತುಳುಸಿರಿ ಮಾನಾದಿಗೆ: ಇದೇ ಸಂದರ್ಭದಲ್ಲಿ ಹಿರಿಯ ಮೃದಂಗ ವಾದಕ ವಿದ್ವಾನ್ ಬಾಬು ರೈ ಕಾಸರಗೋಡು, ತುಳು ಸಾಹಿತಿ ಡಾ. ಸಾಯಿಗೀತಾ ತೋಕೂರುಗುತ್ತು, ಸಹಕಾರಿಯ ಸಾಧಕ ಎಸ್.ಬಿ. ಜಯರಾಮ ರೈ, ತುಳುನಾಡಿನ ಹಳೇಯ ವಸ್ತುಗಳ ಸಂಗ್ರಹಕ್ಕಾಗಿ ಸುಧಾಕರ ಶೆಟ್ಟಿ ಹಿರ್ಗಾನ, ಸಾವಯವ ಕೃಷಿಗಾಗಿ ರಾಮಣ್ಣ ಗೌಡ ಕಣಿಯೂರುರವರಿಗೆ ತುಳುಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಶಿಕ್ಷಕಿಯರಾದ ಜ್ಯೋತಿ, ಸವಿತಾ, ಒಡಿಯೂರು ಶ್ರೀ ವಿವಿಧೋದ್ಧೇಶ ಸೌಹಾರ್ದ ಸಹಕಾರಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ದಯಾನಂದ ಶೆಟ್ಟಿ, ಲೀಲಾ ಪಾದೆಕಲ್ಲು, ಗ್ರಾಮವಿಕಾಸ ಯೋಜನೆಯ ಯಶೋಧರ ಸಾಲ್ಯಾನ್ ಸನ್ಮಾನ ಪತ್ರ ವಾಚಿಸಿದರು.
ರೇಣುಕಾ ಎಸ್. ರೈ ಪ್ರಾರ್ಥಿಸಿದರು. ಪ್ರಕಾಶ್ ಕೆ. ಶೆಟ್ಟಿ ಪೇಟೆಮನೆ ಸ್ವಾಗತಿಸಿದರು. ಯಶವಂತ ವಿಟ್ಲ ಕಾರ್ಯಕ್ರಮ ನಿರೂಪಿಸಿದರು. ಒಡಿಯೂರು ಶ್ರೀ ಗುರುದೇವ ವಿದ್ಯಾಪೀಠದ ಸಂಚಾಲಕರಾದ ಮಾಂತೇಶ್ ಭಂಡಾರಿ ವಂದಿಸಿದರು.