ಬಂಟ್ವಾಳದಲ್ಲಿ ಗ್ರಾಮ ವಿಕಾಸ ಯಾತ್ರೆ ಗ್ರಾಮದೆಡೆಗೆ ಶಾಸಕರ ನಡಿಗೆ ಸಮಾರೋಪ

0

ವಿಶ್ವಾಸದಿಂದ ಮುನ್ನಡೆದರೆ ಸಾಮರಸ್ಯ ನೆಲೆಯೂರಲು ಸಾಧ್ಯ: ಅಣ್ಣಾಮಲೈ
ಅಭಿವೃದ್ಧಿಗೆ ಒತ್ತು ಕೊಟ್ಟ ನಾಯಕ ರಾಜೇಶ್ ನಾಯ್ಕ್ : ಸಿ.ಟಿ.ರವಿ
ಕೋಮು ಗಲಭೆಗೆ ಅಂತ್ಯ ಹಾಡಿದ ನೆಮ್ಮದಿ ನನಗಿದೆ: ರಾಜೇಶ್ ನಾಯ್ಕ್
ಕಾರ್ಯಕರ್ತರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಈ ವಿಕಾಸ ಯಾತ್ರೆಯಿಂದ ಆಗಿದೆ: ಸುದರ್ಶನ್ ಮೂಡಬಿದ್ರೆ

ವಿಟ್ಲ: ಉತ್ತಮ ಯೋಚನೆಗಿಂತ ಕೆಟ್ಟ ಯೋಚನೆಗಳೇ ರಾಜಕೀಯದಲ್ಲಿ ಹೆಚ್ಚು. ಬಂಟ್ವಾಳ ಒಂದು ವಿಚಿತ್ರ ಕ್ಷೇತ್ರ. ನವ ಬಂಟ್ವಾಳದ ನಿರ್ಮಾಣದಲ್ಲಿ ರಾಜೇಶ್ ನಾಯ್ಕ್ ರವರ ಪಾತ್ರ ಅಪಾರವಾಗಿದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆದಾಗ ಸಾಮರಸ್ಯ ನೆಲೆಯೂರಲು ಸಾಧ್ಯ. ಕೃಷಿಕರನ್ನು ಮೇಲೆಕ್ಕೆತ್ತುವ ಕಾರ್ಯ ಕೇಂದ್ರ, ರಾಜ್ಯ ಸರಕಾರದಿಂದ ಆಗುತ್ತಿದೆ ಎಂದು ತಮಿಳುನಾಡು ಬಿಜೆಪಿ ಅಧ್ಯಕ್ಷರಾದ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈರವರು ಹೇಳಿದರು. ಜ.27 ರಂದು ಬಂಟ್ವಾಳದ ಬಸ್ತಿಪಡ್ಪು ಮೈದಾನದಲ್ಲಿ ನಡೆದ ಗ್ರಾಮ ವಿಕಾಸ ಯಾತ್ರೆ – ಗ್ರಾಮದೆಡೆಗೆ ಶಾಸಕರ ನಡಿಗೆ ಕಾರ್ಯಕ್ರಮದ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.


ಪಕ್ಷ, ನಾಯಕರ ಮೇಲೆ ನಂಬಿಕೆ ಅಗತ್ಯ. ನಂಬಿಕೆ ಇಟ್ಟು ವ್ಯವಹರಿಸಿದಾಗ ಕೆಲಸದಲ್ಲಿ ಯಶಸ್ಸಾಗಲು ಸಾಧ್ಯ. ಗೆಲುವಿನ ನಿರೀಕ್ಷೆ ಬಂಟ್ವಾಳದ ಬಿಜೆಪಿಯಲ್ಲಿದೆ. ಆದರೆ ಮತವನ್ನು ಇಮ್ಮುಡಿಗೊಳಿಸುವುದಕ್ಕಾಗಿ ಗ್ರಾಮ ವಿಕಾಸ ಯಾತ್ರೆ ಪೂರಕ. ಮಾತನಾಡುವುದಕ್ಕಿಂತ ಅದನ್ನು ಮಾಡಿತೋರಿಸುವ ತಾಕತ್ತು ನಮ್ಮಲ್ಲಿರಬೇಕು. ಕೆಲಸ ಮಾಡಿ ಹೇಳುವ ಪದ್ದತಿ ಬಿಜೆಪಿಯದ್ದಾಗಿದೆ.


ಕಾಂಗ್ರೆಸ್ ಸುಳ್ಳಿನ ಕಂತೆಯನ್ನು ಹೇಳುವ ಮೂಲಕ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದ ಅಣ್ಣಾಮಲೈ ಅವರು, ವಿಕಾಸ ಯಾತ್ರೆ ಬಹಳಷ್ಟು ಪ್ರಾಮುಖ್ಯವಾದುದು. ಯುವಜನತೆ ಎಚ್ಚೆತ್ತುಕೊಂಡು ಕೆಲಸಮಾಡಬೇಕಿದೆ. ನಾವು ಒಟ್ಟು ಸೇರಿ ಅಭಿವೃದ್ಧಿಯ ಕಡೆ ನಡೆಯಬೇಕು. ಮೋದೀಜಿಯವರ ನಿರಂತರ ಪ್ರಯತ್ನದ ಫಲವಾಗಿ ನಾವಿಂದು ಕೊರೋನಾದಿಂದ ಮುಕ್ತರಾಗಿzವೆ ಎಂದ ಅಣ್ಣಾಮಲೈ ಅವರು, ಪಕ್ಷ ಇನ್ನಷ್ಟು ಆಳವಾಗಿ ಕೆಲಸ ಮಾಡಲು ಎಲ್ಲರ ಸಹಕಾರ ಅಗತ್ಯವಿದೆ. ಕಾಂಗ್ರೆಸ್ ಗೆ ಕರ್ನಾಟಕದ ಮೇಲೆ ಕಣ್ಣಿದೆ. ಕಾಂಗ್ರೆಸ್ ಕಲ್ಪನೆ ವಿಚಿತ್ರವಾಗಿದೆ. ಕಾಂಗ್ರೆಸ್ ಬಗ್ಗೆ ನಮಗೆ ಭಯಬೇಡ. ಮುಂದಿನ ಚುನಾವಣೆಯಲ್ಲಿ ಜನ ಯೋಚನೆ ಮಾಡಬೇಕಾದ ಪರಿಸ್ಥಿತಿ ಕರ್ನಾಟಕದಲ್ಲಿದೆ. ಇಲ್ಲಿನ ಜನರಿಗೆ ವಿಕಾಸ ಬೇಕು. ಬ್ರಿಟೀಷ್ ಆಳ್ವಿಕೆಯ ತರಹ ಕಾಂಗ್ರೆಸ್ ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿದೆ. ಜನರಿಗೆ ನಂಬಿಕೆ ಹುಟ್ಟಿಸುವ ಕೆಲಸವಾಗಬೇಕಿದೆ ಎಂದರು.


ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿರವರು ಮಾತನಾಡಿ ಕಾಂಗ್ರೆಸ್‌ನ ಪ್ರಜಾಧ್ವನಿ ಯಾತ್ರೆ ಪ್ರಜೆಗಳ ಧ್ವನಿ ಕೇಳುವುದಕ್ಕಾಗಿ ಆಗಿರಲಿಲ್ಲ. ಅದು ಬಿಜೆಪಿಗರನ್ನು ಬೈಯ್ಯುವ ಯಾತ್ರೆಯಾಗಿತ್ತು. ಕರಾವಳಿಗರ ನೆಮ್ಮದಿಗೆ ಕಾಂಗ್ರೆಸ್ ಕೊಳ್ಳಿ ಇಟ್ಟಿತ್ತು. ನೈಜ ಹಿಂದೂಗಳು ದೈವ ವಿರೋಧಿಗಳು, ಕುಂಕುಮ ಅಳಿಸೋರಾ ಎಂದು ಪ್ರಶ್ನಿಸಿದಲ್ಲದೆ, ನಕಲಿ ಹಿಂದೂಗಳಿಗೆ ಕೇಸರಿ ಕಂಡರೆ ಆಗಲ್ಲ. ನೈಜ ಹಿಂದುಗಳು ದೈವದೇವರನ್ನು ನಿಂದಿಸಲ್ಲ. ರಾಮಮಂದಿರಕ್ಕೆ ವಿರೋಧ ಮಾಡಿದವರು ನಕಲಿ ಹಿಂದುಗಳು. ಮೊನ್ನೆ ನಡೆದ ಕಾಂಗ್ರೆಸ್ ಕಾರ್ಯಕ್ರಮದಲ್ಲಿದ್ದವರು ನಕಲಿ ಹಿಂದುಗಳು ಎಂದರು.


ಹೇಳದೆ ಕೆಲಸ ಮಾಡುವ ಪಕ್ಷವಿದ್ದರೆ ಅದು ಬಿಜೆಪಿ. ದೇವಸ್ಥಾನದ ಹುಂಡಿಗೆ ಕನ್ನ ಹಾಕುವ ಪ್ರಯತ್ನ ಸಿದ್ದರಾಮಯ್ಯರವರ ಕಾಂಗ್ರೆಸ್ ಸರಕಾರದಿಂದ ಆಗಿದೆ. ಜಾತಿ ತಾರತಮ್ಯ ತೊರೆದು ಯೋಜನೆಯನ್ನು ಫಲಾನುಭವಿಗಳಿಗೆ ಮುಟ್ಟಿಸುವ ಕೆಲಸ ಮೋದೀಜಿ ನೇತೃತ್ವದ ಸರಕಾರದಿಂದ ಆಗಿದೆ. ಜಾತಿ ಕೇಳಿ ಯೋಜನೆಯನ್ನು ನೀಡಿರುವುದು ಕಾಂಗ್ರೆಸ್ ಸರಕಾರ ಜಾತಿಗಿಂತ ನೀತಿ ಮುಖ್ಯ ಎಂದ ಸಿ.ಟಿ. ರವಿ, ವಿವಾದವಿಲ್ಲದ ರಾಜಕಾರಣಿ ರಾಜೇಶ್ ನಾಯ್ಕ್. ಅಭಿವೃದ್ಧಿಗೆ ಒತ್ತು ಕೊಟ್ಟ ನಾಯಕರವರು. ಅವರನ್ನು ಇನ್ಮೊಮ್ಮೆ ಗೆಲ್ಲಿಸುವ ಪ್ರಯತ್ನ ನಿಮ್ಮದಾಗಬೇಕು. ನಕಲಿ ಹಿಂದುಗಳ ಬಗ್ಗೆ ಎಚ್ಚರಿಕೆಯಿಂದ ಇರಿ ಎಂದರು.


ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತುರವರು ಮಾತನಾಡಿ ಗ್ರಾಮ ವಿಕಾಸ ಯಾತ್ರೆಯಿಂದ ನನಗೆ ತುಂಬಾ ಕುಶಿ ತಂದಿದೆ. ಗ್ರಾಮದ ಜನರೊಂದಿಗೆ ಬೆರೆಯಲು ಸಿಕ್ಕಿದ ಅವಕಾಶವಾಗಿದೆ. ನನಗೆ ಪಕ್ಷ ಮುಖ್ಯ ವ್ಯಕ್ತಿ ಮುಖ್ಯವಲ್ಲ. ಪಕ್ಷ ಗಟ್ಟಿಯಾದಂತೆ ಮತಗಟ್ಟಿಯಾಗುತ್ತದೆ. ಈ ಭಾಗದಲ್ಲಿ ಹೆಗಲಿಗೆ ಹೆಗಲು ಕೊಟ್ಟು ಸಹಕಾರ ನೀಡುವ ಕಾರ್ಯಕರ್ತರಿರುವಾಗ ವಿಜಯದ ಬಗ್ಗೆ ಚಿಂತೆಯಿಲ್ಲ. ಬಂಟ್ವಾಳ ವಿಧಾನಸಭಾ ಕ್ಷೇತ್ರ ರಾಜ್ಯದಲ್ಲೇ ಹೆಸರುವಾಸಿಯಾಗಿರುವ ಪ್ರದೇಶ. ಈ ಕ್ಷೇತ್ರದಲ್ಲಿ ಇನ್ನಷ್ಟು ಕೆಲಸ ಕಾರ್ಯಗಳನ್ನು ಮಾಡಲು ಬಾಕಿ ಇದೆ. ಕೋಮು ಗಲಭೆಗೆ ಅಂತ್ಯ ಹಾಡಿದ ನೆಮ್ಮದಿ ನನಗಿದೆ. ಜನತೆ ನನಗೆ ನೀಡಿರುವ ಪ್ರೀತಿಗೆ ನಾನು ಅಭಾರಿಯಾಗಿದ್ದೆನೆ ಎಂದರು.


ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್ ಮೂಡಬಿದ್ರೆರವರು ಮಾತನಾಡಿ ಗ್ರಾಮ ವಿಕಾಸ ಯಾತ್ರೆ ಬಂಟ್ವಾಳದಲ್ಲಿ ಯಶಸ್ವಿಯಾಗಿದೆ. ಬಂಟ್ವಾಳ ವಿಧಾನ ಸಭಾ ಕ್ಷೇತ್ರದಲ್ಲಿ ನಡೆದ ಪಾದಯತ್ರೆ ಇತರರಿಗೆ ಮಾದರಿಯಾಗಿದೆ. ಕಾರ್ಯಕರ್ತರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಈ ವಿಕಾಸ ಯಾತ್ರೆಯಿಂದ ಆಗಿದೆ. ಬಂಟ್ವಾಳ ವಿಧಾನಸಭಾ ಕ್ಷೇತ್ರದ ಜನರಿಗೆ ರಾಜೇಶ್ ನಾಯ್ಕ್‌ರವರ ಅವಧಿಯಲ್ಲಿ ಸಾಮರಸ್ಯದ ಬದುಕು ಸಿಕ್ಕಿದೆ. ಸಜ್ಜನಿಕೆಯ ರಾಜಕೀಯ ಮಾಡಿದ ಕೀರ್ತಿ ರಾಜೇಶ್ ನಾಯ್ಕ್ ರದ್ದಾಗಿದೆ ಎಂದರು.


ಬಿಜೆಪಿ ಬಂಟ್ವಾಳ ಮಂಡಲ ಅಧ್ಯಕ್ಷ ದೇವಪ್ಪ ಪೂಜಾರಿ ಸಭಾಧ್ಯಕ್ಷತೆ ವಹಿಸಿದ್ದರು.
ಮಾಜಿ ಶಾಸಕರಾದ ಎ. ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟಾರಿ, ಕೆಯುಡಬ್ಲುಎಸ್ ಸದಸ್ಯೆ ಸುಲೋಚನಾ ಜಿ.ಕೆ.ಭಟ್, ಸಾಮಾಜಿಕ ಜಾಲತಾಣ,ಮಾಧ್ಯಮ ಪ್ರಕೋಷ್ಠದ ಸಂಚಾಲಕ ವಿಕಾಸ್ ಪುತ್ತೂರು,ದ.ಕ.ಜಿಲ್ಲಾ ಬಿಜೆಪಿ ಪ್ರ.ಕಾರ್ಯದರ್ಶಿಗಳಾದ ರಾಮ್ ದಾಸ್ ಬಂಟ್ವಾಳ, ಕಸ್ತೂರಿ ಪಂಜ, ಮಾಧ್ಯಮ ಪ್ರಮುಖ್ ಸಂದೇಶ್ ಶೆಟ್ಟಿ,ವಿಕಾಸಯಾತ್ರೆ ಸಹಸಂಚಾಲಕರಾದ ಮಾಧವ ಮಾವೆ,ಸುದರ್ಶನ್ ಬಜ,ಬಿಜೆಪಿ ಬಂಟ್ವಾಳ ಮಂಡಲದ ಪ್ರ.ಕಾರ್ಯದರ್ಶಿ ರವೀಶ್ ಶೆಟ್ಟಿ ಕರ್ಕಳ ವೇದಿಕೆಯಲ್ಲಿದ್ದರು.


ಜ.26ರಂದು ನಿಧನರಾದ ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಸೇಸಪ್ಪ ಕೋಟ್ಯಾನ್ ಅವರಿಗೆ ಕಿಯೋನಿಕ್ಸ್ ನಿಗಮದ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ನುಡಿನಮನ ಸಲ್ಲಿಸಿದರು. ಬಳಿಕ ಒಂದು ನಿಮಿಷದ ಮೌನಪ್ರಾರ್ಥನೆಯ ಮೂಲಕ ಶೃದ್ದಾಂಜಲಿಯನ್ನು ಅರ್ಪಿಸಲಾಯಿತು.


ಯಾತ್ರೆಯ ಸಂಚಾಲಕ ದೇವದಾಸ್ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿ ಬಂಟ್ವಾಳ ಕ್ಷೇತ್ರಕ್ಕೆ ಶಾಸಕ ರಾಜೇಶ್ ನಾಯ್ಕ್ ತಮ್ಮ ಶಾಸಕತ್ವದ ಅವಧಿಯಲ್ಲಿ ವಿವಿಧ ಯೋಜನೆಯಡಿ ತಂದಿರುವ ಅನುದಾನ, ಮಾಡಿರುವ ಸಾಧನೆಯನ್ನು ವಿವರಿಸಿ,ಸ್ವಾಗತಿಸಿದರು.


ವಿದ್ಯಾಶ್ರೀ ಆಚಾರ್ಯ ಕಲ್ಲಡ್ಕ ವಂದೇ ಮಾತರಂ ಗೀತೆ ಹಾಡಿದರು. ಬಿಜೆಪಿ ಬಂಟ್ವಾಳ ಮಂಡಲದ ಪ್ರಧಾನ ಕಾರ್ಯದರ್ಶಿ ಡೊಂಬಯ್ಯ ಅರಳ ವಂದಿಸಿದರು. ಬಿಜೆಪಿ ಕಲೆ ಮತ್ತು ಸಾಂಸ್ಕೃತಿಕ ಪ್ರಕೋಷ್ಠದ ದಿನೇಶ್ ಸುವರ್ಣ ರಾಯಿ ಕಾರ್ಯ ಕ್ರಮ ನಿರೂಪಿಸಿದರು.

ಸಂಭ್ರಮದ ಮೆರವಣಿಗೆಯಲ್ಲಿ ಸಾವಿರಾರು ಕಾರ್ಯಕರ್ತರು ಭಾಗಿ
ಬಿ.ಸಿ.ರೋಡಿನ ಪೊಳಲಿ ದ್ವಾರದ ಬಳಿಯಿಂದ ಆರಂಭಗೊಂಡ ಮೆರವಣಿಗೆಯಲ್ಲಿ ಸಾವಿರಾರು ಕಾರ್ಯಕರ್ತರು ಪಾಲ್ಗೊಂಡರು. ತಮಿಳ್ನಾಡು ರಾಜ್ಯ ಬಿಜೆಪಿ ಅಧ್ಯಕ್ಷರಾದ ಅಣ್ಣಾಮಲೈ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಬಿಜೆಪಿ ಬಂಟ್ವಾಳ ಮಂಡಲಾಧ್ಯಕ್ಷ ದೇವಪ್ಪ ಪೂಜಾರಿ, ಕಿಯೊನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್ ಮೂಡಬಿದ್ರೆ, ಮಾಜಿ ಶಾಸಕರಾದ ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟಾರಿ ಮೊದಲಾದವರು ತೆರೆದ ವಾಹನದಲ್ಲಿ ಸಂಚರಿಸಿದರು. ಮೆರವಣಿಗೆ ಮಧ್ಯೆ ಅಲ್ಲಲ್ಲಿ ಹೂಮಳೆ ಸುರಿಸಿ, ಸಿಡಿಮದ್ದು ಸಿಡಿಸುತ್ತಿರುವುದು, ಅಲ್ಲಲ್ಲಿ ಮಾತೆಯರು ಆರತಿ ಎತ್ತಿ ತಿಲಕವಿಡುತ್ತಿರುವುದು ಕಂಡು ಬಂತು.

LEAVE A REPLY

Please enter your comment!
Please enter your name here