ನಡೆ ನುಡಿ ಒಂದಾಗುವುದೇ ಧರ್ಮಾನುಷ್ಠಾನ : ಒಡಿಯೂರು ಶ್ರೀ
ವಿಟ್ಲ: ನಡೆ, ನುಡಿ ಧರ್ಮದ ಎರಡು ಮುಖಗಳು. ನಡೆ ನುಡಿ ಒಂದಾಗುವುದೇ ಧರ್ಮಾನುಷ್ಠಾನ. ಧರ್ಮವೆಂಬ ರಾಜಮಾರ್ಗ ಸರಿಯಾಗಿದ್ದಾಗ ಬದುಕು ಹಸನು. ಧರ್ಮ ರಕ್ಷಣೆಗೆ ಯುವಕರು ಅಣಿಯಾಗಬೇಕು. ಯುವಶಕ್ತಿ ಎಚ್ಚೆತ್ತುಕೊಳ್ಳುವ ಅನಿವಾರ್ಯತೆ ಈಗಿನ ಕಾಲಘಟ್ಟದಲ್ಲಿದೆ. ಜೀವನ ಸುಗಮವಾಗಿಸಲು ಧರ್ಮದೆಡೆಗೆ ದೃಷ್ಟಿ ಹಾಯಿಸೋಣ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮಿಯವರು ಹೇಳಿದರು.
ಅವರು ಸಂಸ್ಥಾನದಲ್ಲಿ ಡಿ. 1ರಿಂದ ಆರಂಭಗೊಂಡ ಶ್ರೀ ದತ್ತ ಜಯಂತಿ ಮಹೋತ್ಸವ, ಶ್ರೀ ದತ್ತ ಮಹಾಯಾಗ ಸಪ್ತಾಹ ಹಾಗೂ ಹರಿಕಥಾ ಸತ್ಸಂಗ ಸಾಪ್ತಾಹದ ಕೊನೇಯ ದಿನವಾದ ಡಿ.7ರಂದು ನಡೆದ ಧರ್ಮ ಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ದತ್ತ ಎಂದರೆ ಕೊಡಲ್ಪಟ್ಟದ್ದು. ಸಮಾಜದಲ್ಲಿ ಮಾನವೀಯ ಮೌಲ್ಯವನ್ನು ತುಂಬುವ ಕೆಲಸವಾಗಬೇಕು. ಬದುಕಿ ಬದುಕಬಿಡುವ ಅಭ್ಯಾಸ ಎಲ್ಲರಲ್ಲಿ ಬರಬೇಕು. ಸಮಾಜದಲ್ಲಿ ನಾವು ಹೇಗಿರಬೇಕು ಎನ್ನುವುದನ್ನು ಚಿಂತಿಸಬೇಕಾದ ಕಾಲಘಟ್ಟವಿದು. ಭಕ್ತಿ, ವೈರಾಗ್ಯ, ತ್ಯಾಗಕ್ಕೆ ಬೆಲೆ ಕಡಿಮೆಯಾಗುತ್ತಾ ಬರುತ್ತಿದೆ. ಸಮರ್ಪಣಾ ಭಾವದ ಭಕ್ತಿ ನಮ್ಮಲ್ಲಿರಬೇಕು. ಅಂತರ್ ದೃಷ್ಟಿ ತೆರೆಸಲು ಹರಿಕಥೆ ಅತೀ ಮುಖ್ಯ. ನಮ್ಮ ಬದುಕು ದರ್ಮ ಸೂತ್ರದ ಅಡಿಯಲ್ಲಿದೆ. ಅದರಡಿಯಲ್ಲಿ ಬಾಳಿಬದುಕಿದರೆ ಜೀವನ ಸುಂದರವಾಗಬಹುದು. ಆತ್ಮ ತತ್ವವೊಂದೇ ಸತ್ಯ. ಸಂಸಾರ ಸರಿಯಾಗರಿರಲು ಸತ್ಸಂಗಗಳು ಪೂರಕ. ಜೀವನದಲ್ಲಿ ವ್ಯಾಮೋಹ ದೂರವಿರಬೇಕು. ಸಂಸ್ಕಾರಯುತ ಬದುಕು ನಮ್ಮದಾಗಬೇಕು. ಧರ್ಮವೆನ್ಮುವುದು ಚಲನ ಶೀಲವಾದುದು. ಬದುಕು ಸುಂದರವಾಗಲು ಧರ್ಮವಿರಬೇಕು. ತನ್ನನ್ನು ತಾನು ಅರಿತು ಕೊಳ್ಳುವವ ನಿಜವಾದ ಜ್ಞಾನಿ. ನಾಟಕೋತ್ಸವ ಸಂಸ್ಕೃತಿ ಹಾಗೂ ತುಳು ಬಾಷೆಯ ಉಳಿವಿಗೆ ಕ್ಷೇತ್ರದಿಂದ ಕೊಟ್ಟ ಕೊಡುಗೆ. ಅರ್ಪಣಾ ಭಾವದ ಸೇವೆಯಿಂದ ಸಂಸ್ಥಾನ ಬೆಳೆದಿದೆ. ಸಂಸ್ಥಾನ ಬೆಳೆದರೆ ನೀವು ಬೆಳದಂತೆ.ಲೋಕದಲ್ಲಿ ಶಾಂತಿ ಸುವ್ಯವಸ್ಥೆ ನೆಲೆಯೂರಲಿ ಎಂದರು.
ಸಾಧ್ವಿ ಶ್ರೀ ಮಾತಾನಂದಮಯೀ, ಹರಿದಾಸರಾದ ಡಾ. ಪಿ. ಎಸ್. ಗುರುದಾಸ್ ಮಂಗಳೂರು, ಮಂಗಳೂರು ಹರಿಕಥಾ ಪರಿಷತ್ ನ ಅಧ್ಯಕ್ಷರಾದ ಕೆ. ಮಾಹಾಬಲ ಶೆಟ್ಟಿ, ಒಡಿಯೂರು ಶ್ರೀ ವಿವಿದೊದ್ದೇಶ ಸೌಹಾರ್ದ ಸಹಕಾರಿಯ ಅಧ್ಯಕ್ಷರಾದ ಸುರೇಶ್ ಶೆಟ್ಟಿ, ಉದ್ಯಮಿ ವಾಮಯ್ಯ ಬಿ. ಶೆಟ್ಟಿ ಚೆಂಬೂರು, ಡಾ. ಅದೀಪ್ ಶೆಟ್ಟಿ ಮುಂಬೈ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಡಾ. ಪಿ. ಎಸ್. ಗುರುದಾಸ್ ಮಂಗಳೂರುರವರಿಂದ ‘ಅವಧೂತೋಪಖ್ಯಾನ’ ಹರಿಕಥಾ ಪ್ರಸಂಗ ನಡೆಯಿತು. ವಿಟ್ಲ ಶ್ರೀ ಅಯ್ಯಪ್ಪ ದೇವಸ್ಥಾನದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಒಡಿಯೂರು ಶ್ರೀಗಳು ವೇದಿಕೆಯಲ್ಲಿ ಬಿಡುಗಡೆ ಮಾಡಿದರು.
ಯಶವಂತ ವಿಟ್ಲ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು. ಸಂತೋಷ್ ಭಂಡಾರಿ ವಂದಿಸಿದರು.
ಶ್ರೀಗಳಿಂದ ಮಧುಕರಿ
ಬೆಳಗ್ಗೆ ಶ್ರೀ ದತ್ತಮಾಲಾಧಾರಿಗಳಿಂದ ನಾಮಸಂಕೀರ್ತನೆ, ಹರಿಕಥಾ ಸತ್ಸಂಗ ಸಮಾರೋಪ,
ಬಳಿಮ ಶ್ರೀಗಳವರಿಂದ ಧರ್ಮಸಂದೇಶ ಬಳಿಕ ವೇದ ಪಾರಾಯಣ-ಶ್ರೀಗುರುಚರಿತ್ರ ಪಾರಾಯಣ ಸಮಾಪ್ತಿ,
ಶ್ರೀದತ್ತ ಮಹಾಯಾಗದ ಪೂರ್ಣಾಹುತಿ ನಡೆಯಿತು. ಬಳಿಕ ಕಲ್ಪೋಕ್ತ ಪೂಜೆ, ಮಹಾಪೂಜೆ, ದತ್ತ ಸಂಪ್ರದಾಯದಂತೆ ಮಧುಕರೀ ಮಂತಾಕ್ಷತೆ ನಡೆಯಿತು.