ವಿಟ್ಲ: ಆಟೋ ರಿಕ್ಷಾ ಚಾಲಕರೊಬ್ಬರು ಮಕ್ಕಳನ್ನು ಶಾಲೆಗೆ ಕರೆದುಕೊಂಡು ಬರುತ್ತಿದ್ದ ದಾರಿ ಮಧ್ಯೆ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ನ.೯ರಂದು ಬಂಟ್ವಾಳ ತಾಲೂಕಿನ ಮಾಣಿ ಸಮೀಪ ನಡೆದ ಬಗ್ಗೆ ವರದಿಯಾಗಿದೆ.
ಕಲ್ಲಡ್ಕ ಕುದ್ರೆಬೆಟ್ಟು ನಿವಾಸಿ ಜಯಕರ ಪೂಜಾರಿ (45 ವ.) ಮೃತಪಟ್ಟವರು. ಜಯಕರ ಪೂಜಾರಿ ರವರು ತನ್ನ ಆಟೋದಲ್ಲಿ ಕೆಲ ಮಕ್ಕಳನ್ನು ಶಾಲೆಗೆ ಬಿಡುತ್ತಿದ್ದರು. ಮಕ್ಕಳನ್ನು ಆಟೋರಿಕ್ಷಾದಲ್ಲಿ ಶಾಲೆಗೆ ಕರೆದುಕೊಂಡು ಬರುತ್ತಿದ್ದ ವೇಳೆ ಆಟೋ ರಿಕ್ಷಾ ಮಾಣಿ ತಲುಪುತ್ತಿದ್ದಂತೆ ಮಕ್ಕಳು ಜೆರಾಕ್ಸ್ ಶಾಪ್ ಹತ್ತಿರ ಆಟೋ ನಿಲ್ಲಿಸಲು ಸೂಚಿಸಿದ್ದಾರೆ. ಈ ವೇಳೆ ಆಟೋರಿಕ್ಷಾ ನಿಲ್ಲಿಸಿದ್ದು, ಮಕ್ಕಳು ಜೆರಾಕ್ಸ್ ತೆಗೆದು ಹಿಂದಿರುಗಿದ ವೇಳೆ ಅವರು ಕುಸಿದು ಬಿದ್ದಿದ್ದರು. ತಕ್ಷಣ ಅವರನ್ನು ಹತ್ತಿರದ ಕ್ಲಿನಿಕ್ ಗೆ ಕರೆದೊಯ್ಯಲಾಯಿತಾದರೂ ಅದಾಗಲೇ ಅವರು ಮೃತಪಟ್ಟಿದ್ದರು ಎಂದು ವೈದ್ಯರು ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.