ಬಂಟ್ವಾಳ:ವಿಟ್ಲ ಠಾಣಾ ವ್ಯಾಪ್ತಿಯ ಬೋಳಂತೂರುನಿಂದ ನಾಪತ್ತೆಯಾಗಿದ್ದ ಯುವಕನೋರ್ವನನ್ನು ಸೀಮೆಎಣ್ಣೆ ಸುರಿದು ಕೊಲೆ ಮಾಡಲಾಗಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.ಕೊಲೆಯಾಗಿರುವುದಾಗಿ ಹೇಳಲಾದ ಯುವಕನ ಶವಪತ್ತೆ ಮಾಡಲಾಗಿದ್ದು ಕಾರ್ಯಾಚರಣೆಯನ್ನು ಪೊಲೀಸರು ನ.9ಕ್ಕೆ ಮುಂದೂಡಿದ್ದಾರೆ.
ಬೋಳಂತೂರು ಗ್ರಾಮ ನಿವಾಸಿ ಅಬ್ದುಲ್ ಸಮದ್ ಕೊಲೆಯಾದ ಯುವಕ ಎಂದು ಹೇಳಲಾಗಿದೆ. ಆತನನ್ನು ಅದೇ ಗ್ರಾಮದ ನಿವಾಸಿ ಅಬ್ದುಲ್ ರಹಿಮಾನ್ ಎಂಬಾತ ಕೊಲೆ ಮಾಡಿ ಗುಡ್ಡದಲ್ಲಿರುವ ಪಾತಾಳಕ್ಕೆ ಎಸೆದಿದ್ದಾನೆ ಎಂದು ಆರೋಪಿಸಲಾಗಿದ್ದು, ಕೊಲೆಗೀಡಾದ ಯುವಕನ ಮೃತದೇಹ ಪತ್ತೆಯಾಗಿಲ್ಲ.
ಘಟನೆ ವಿವರ:
ಬೊಳಂತೂರು ನಿವಾಸಿ ಸಮದ್ ಕಾಣೆಯಾಗಿರುವ ಕುರಿತು ಮನೆಯವರು ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ನಡುವೆ ಸಮದ್‍ರನ್ನು ಇರಾ ಸೈಟ್ ಪರಿಸರದ ಮುಳೂರುಪದವು ಗುಡ್ಡಕ್ಕೆ ಕರೆದೊಯ್ದ ರಹಿಮಾನ್ ಮೊದಲ ದಿನವೇ ಆತನನ್ನು ಕೊಲೆಗೈದಿದ್ದು, ಮಾರನೇ ದಿನ ಮತ್ತೊಬ್ಬ ಸ್ನೇಹಿತನನ್ನು ಆ ಸ್ಥಳಕ್ಕೆ ಕರೆದೊಯ್ದು ಸಮದ್ ಅವರನ್ನು ಕೊಲೆ ನಡೆಸಿರುವ ವಿಚಾರ ತಿಳಿಸಿದ್ದಾನೆ. ವಿಚಾರ ತಿಳಿದು ಭಯಗೊಂಡ ವ್ಯಕ್ತಿಯಿಂದಾಗಿ ಆರೋಪಿಯ ಕೃತ್ಯ ಬಯಲಾಗಿದೆ. ಸುದ್ದಿ ಹರಡುತ್ತಿದ್ದಂತೆಯೇ ಆರೋಪಿ ರಹಿಮಾನ್ ಸಮದ್ ಮೃತದೇಹವನ್ನು ಸುಟ್ಟು ಹಾಕಿ ಹೊಂಡಕ್ಕೆ ಎಸೆದಿದ್ದಾನೆ ಎಂದು ತಿಳಿದುಬಂದಿದೆ.
ಅದರಂತೆ ಪೊಲೀಸರು ತನಿಖೆ ನಡೆಸಿದಾಗ ಇಡೀ ಪ್ರಕರಣದ ಚಿತ್ರಣ ಹೊರ ಬಿದ್ದಿದೆ.
ಸುಟ್ಟು ಕರಕಲಾಗಿರುವ ಮೃತದೇಹವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಮೃತದೇಹವನ್ನು ಹೊರ ತೆಗೆಯಲು ಮಂಗಳವಾರ ಕಾರ್ಯಾಚರಣೆ ನಡೆಸಿದ್ದಾರೆ. ಆದರೆ ಕತ್ತಲಾದ ಕಾರಣ ಕಾರ್ಯಾಚರಣೆ ಮುಂದೂಡಿದ್ದಾರೆ.
ಘಟನೆಗೆ ಸಂಬಂಧಿಸಿ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬೋಳಂತ್ತೂರು ನಿವಾಸಿ ಅದ್ದು ಯಾನೆ ಅದ್ರಾಮ ಬಂ„ತ ಆರೋಪಿ.ಸುರಿಬೈಲು ನಿವಾಸಿ ಸುಲೈಮಾನ್ ಅವರ ಪುತ್ರ ಅಬ್ದುಲ್ ಸಮದ್ ಅವರ ಕೊಲೆ ಮಾಡಲಾಗಿದೆ ಎನ್ನಲಾಗಿದ್ದು ಮೃತದೇಹದ ಇನ್ನೂ ಗುರುತು ಪತ್ತೆಯಾಗದೆ ಇರುವ ಹಿನ್ನೆಲೆಯಲ್ಲಿ ಸ್ಪಷ್ಟ ಚಿತ್ರಣ ಲಭ್ಯವಾಗಿಲ್ಲ. ಬೋಳಂತೂರು ಗ್ರಾಮದ ಕೊಕ್ಕೆಪುಣಿ ಮನೆ ಅಬ್ದುಲ್ ಖಾದರ್ ಎಂಬವರ ಮಗ ಸೆಲೀಂ ಎಂಬವರು ನೀಡಿರುವ ದೂರಿನಂತೆ ಬಂಟ್ವಾಳ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ತಾನು ಮೆಲ್ಕಾರ್‍ನಲ್ಲಿ ಕ್ಲಿಕ್ ಮೊಬೈಲ್ ಅಂಗಡಿ ನಡೆಸುತ್ತಿರುವುದಾಗಿದೆ.ನನ್ನ ತಾಯಿಯ ತಮ್ಮನಾದ, ರಿಕ್ಷಾ ಚಾಲಕನಾಗಿ ಕೆಲಸ ಮಾಡುವ ಅಬ್ದುಲ್ ರಹಿಮಾನ್ ಯಾನೆ ಅದ್ರಾಮರವರ ಮನೆಯು ನನ್ನ ಮನೆ ಸಮೀಪವಿದ್ದು, ನ.7ರಂದು ರಾತ್ರಿ 8 ಗಂಟೆಗೆ ನಾನು ಮನೆ ಬಳಿ ಇರುವ ಸಮಯ ಅಬ್ದುಲ್ ರಹಿಮಾನ್ ಯಾನೆ ಅದ್ರಾಮರವರು ನನ್ನ ಬಳಿ ಬಂದು ಅಗತ್ಯದ ಕೆಲಸದ ಬಗ್ಗೆ ಒಂದು ಕಡೆಗೆ ಹೋಗಲಿದೆ.ಆದರೆ ರಿಕ್ಷಾದಲ್ಲಿ ಪೆಟ್ರೋಲ್ ಇಲ್ಲ. ನಿಮ್ಮ ಬೈಕ್‍ನಲ್ಲಿ ಜೊತೆಯಾಗಿ ಹೋಗೋಣವೆಂದು ತಿಳಿಸಿದ್ದರು.ಅದರಂತೆ ನಾನು ಪಲ್ಸರ್ ಬೈಕ್ (ಕೆ.ಎ.19 ಹೆಚ್.ಜೆ. 3375)ನಲ್ಲಿ ಅಬ್ದುಲ್ ರಹಿಮಾನ್ ಯಾನೆ ಅದ್ರಾಮರವರನ್ನು ಹಿಂಬದಿ ಕುಳ್ಳಿರಿಸಿ, ಬೈಕ್‍ನ್ನು ಬೋಳಂತೂರು -ಮಂಚಿಕಟ್ಟೆ- ಮೋಂತಿಮಾರು ದ್ವಾರದಿಂದಾಗಿ ಇರಾ ಸೋಮನಾಥ ದೇವಸ್ಥಾನದಿಂದ ಸ್ವಲ್ಪ ಮುಂದಕ್ಕೆ ಹೋಗುತ್ತಾ, ಬಲಕ್ಕೆ ಇರುವ ರಸ್ತೆಯಲ್ಲಿ ಸುಮಾರು 2 ಕಿ.ಮೀ. ದೂರ ಹೋಗುತ್ತಾ ಇರಾ ಪದವು ಮಣ್ಣು ರಸ್ತೆಯ ಪಕ್ಕ ಅಬ್ದುಲ್ ರಹಿಮಾನ್ ಯಾನೆ ಅದ್ರಾಮರವರು ಬೈಕ್ ನಿಲ್ಲಿಸಲು ತಿಳಿಸಿದಾಗ ಬೈಕ್ ನಿಲ್ಲಿಸಿ, ಇಲ್ಲಿ ಯಾಕೆ ಬೈಕ್ ನಿಲ್ಲಿಸಬೇಕೆಂದು ಕೇಳಿದೆ.ಆ ಸಮಯ ಅಬ್ದುಲ್ ರಹಿಮಾನ್ ಯಾನೆ ಅದ್ರಾಮರವರು ಬೈಕಿನಿಂದ ಇಳಿದು ನ. 01ರಂದು ರಾತ್ರಿ 8.30 ಗಂಟೆಗೆ ಸುರಿಬೈಲುನ ಅಬ್ದುಲ್ ಸಮಾದ್‍ನೊಂದಿಗೆ ಜಗಳವಾಗಿ ಸೀಮೆಎಣ್ಣೆ ಹಾಕಿ, ಬೆಂಕಿ ಕೊಟ್ಟು ಪಕ್ಕದ ಗುಡ್ಡದಲ್ಲಿ ಸಾಯಿಸಿದ್ದೇನೆ.ಹೆಣವನ್ನು ಗುಂಡಿಗೆ ಹಾಕಿ ಮುಚ್ಚಲು ಸಹಕರಿಸುವಂತೆ ಕೇಳಿಕೊಂಡಾಗ, ಗಾಬರಿಗೊಂಡ ನಾನು ಅಬ್ದುಲ್ ರಹಿಮಾನ್ ಯಾನೆ ಅದ್ರಾಮರನ್ನು ಅಲ್ಲೇ ಬಿಟ್ಟು ತಪ್ಪಿಸಿ, ಬೈಕ್‍ನಲ್ಲಿ ನೇರವಾಗಿ ಮನೆಗೆ ಬಂದೆ.ಭಯದಿಂದ ರಾತ್ರಿ ಜ್ವರ ಬಂದು ನ.08ರಂದು ನನ್ನ ಅಣ್ಣ ಶರೀಫ್ ಗೆ ಅಬ್ದುಲ್ ರಹಿಮಾನ್‍ರವರು ಅಬ್ದುಲ್ ಸಮದ್‍ನನ್ನು ಇರಾದಲ್ಲಿ ಕೊಲೆ ಮಾಡಿರುವ ವಿಷಯ ತಿಳಿಸಿ, ದೂರು ನೀಡಿರುವುದಾಗಿದೆ ಎಂದು ಸೆಲೀಂ ಅವರು ದೂರಿನಲ್ಲಿ ತಿಳಿಸಿದ್ದಾರೆ.ಅವರು ನೀಡಿರುವ ದೂರಿನ ಮೇರೆಗೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆರೋಪಿಯ ಬಂಧನ: ಪೆಟ್ರೋಲ್ ಸುರಿದು ಯುವಕನನ್ನು ಕೊಲೆ ಮಾಡಿದ್ದೇನೆ ಎಂದು ಹೇಳಿಕೊಂಡಿದ್ದ ವ್ಯಕ್ತಿಯೋರ್ವನನ್ನು ವಿಟ್ಲ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದಾಗ ಕೊಲೆ ಮಾಡಿದ ಮಾಹಿತಿ ಲಭ್ಯವಾಗಿದೆ.ಆ ಆಧಾರದ ಮೇಲೆ ಪೊಲಿಸರು ಕೊಲೆ ಪ್ರಕರಣ ದಾಖಲಿಸಿ ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.
ರವಿವಾರ ರಾತ್ರಿ ಯುವಕನೋರ್ವನನ್ನು ಕಿಡ್ನಾಪ್ ಮಾಡಿ ಅನೈತಿಕ ಚಟುವಟಿಕೆಗೆ ಬಳಸಿ ಬಳಿಕ ಕೊಲೆ ಮಾಡಲಾಗಿದೆ ಎಂಬ ಸುದ್ದಿ ಸೋಮವಾರ ಬೆಳಿಗ್ಗೆಯಿಂದ ಹರಡಿತ್ತು.ಇದು ವದಂತಿಯೋ ಅಥವಾ ಸತ್ಯ ವಿಚಾರ ವೋ ಎಂದು ಗೊತ್ತಿಲ್ಲದೆ ಪೊಲೀಸರು ತಲೆಕೆಡಿಸಿಕೊಂಡಿದ್ದರು.ಹೇಳಿಕೆ ನೀಡಿದ ವ್ಯಕ್ತಿಗಾಗಿ ಬಲೆ ಬೀಸಿದ್ದರು. ಕೊನೆಗೂ ಕೊಲೆ ಮಾಡಿದ್ದೇನೆ ಎಂದು ಹೇಳಿದ್ದ ವ್ಯಕ್ತಿ ಬೋಳಂತೂರು ನಿವಾಸಿ ಎಂಬ ಮಾಹಿತಿ ಆಧಾರದ ಮೇಲೆ ಬೋಳಂತರು ನಿವಾಸಿ ಅದ್ದು ಯಾನೆ ಅದ್ರಾಮನನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ಬಳಿಕ ವಿಚಾರಣೆಯ ವೇಳೆ ಆತ ಕೊಲೆ ಮಾಡಿದ ಬಗ್ಗೆ ತಪೊಪ್ಪಿಕೊಂಡಿದ್ದರಿಂದ ಆತನನ್ನು ಬಂಧಿಸಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ. ಕಳೆದ ಎರಡು ದಿನಗಳಿಂದ ಬೋಳಂತೂರು ನಿವಾಸಿ ಯುವಕನೋರ್ವ ನಾಪತ್ತೆಯಾಗಿದ್ದಾರೆ ಎಂಬ ದೂರು ಕೇಳಿಬಂದಿದ್ದು, ಅ ಯುವಕನನ್ನೇ ಕೊಲೆ ಮಾಡಲಾಗಿದೆಯಾ? ಅಥವಾ ಬೇರೆ ಯಾರನ್ನಾದರೂ ಕೊಲೆ ಮಾಡಿರುವುದೇ ಎಂಬುದು ಇನ್ನಷ್ಟೇ ತಿಳಿಯಬೇಕಾಗಿದೆ.ಇರಾ ಪದವು ಎಂಬಲ್ಲಿ ಕೊಲೆ ಮಾಡಲಾಗಿದೆ ಎಂಬ ವದಂತಿಗಳು ಹಬ್ಬಿತ್ತು. ಪೊಲೀಸರು ಆತನ ಹೇಳಿಕೆಯಂತೆ ಸ್ಥಳದಲ್ಲಿ ಬಂದು ನೋಡಿದಾಗ ಸುಮಾರು ಆಳದಲ್ಲಿ ಶವವೊಂದು ಪತ್ತೆಯಾಗಿದೆ.ರಾತ್ರಿಯಾದ ಕಾರಣಕ್ಕಾಗಿ ಶವವನ್ನು ಮೇಲಕ್ಕೆತ್ತಲು ಸಾಧ್ಯವಾಗುವುದಿಲ್ಲ ಎಂದು ಅಲ್ಲಿ ನಾಲ್ಕು ಜನ ಪೊಲೀಸರನ್ನು ಕಾವಲಿರಿಸಲಾಗಿದೆ. ನ.9ರಂದು ಪೊಲೀಸರು ಶವವನ್ನು ಮೇಲೆ ತೆಗೆದು ಮರಣೋತ್ತರ ಪರೀಕ್ಷೆ ನಡೆಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಸ್ಥಳಕ್ಕೆ ಎಸ್.ಪಿ.ಋಷಿಕೇಶ್ ಸೋನಾವಣೆ,ಬಂಟ್ವಾಳ ಡಿ.ವೈ.ಎಸ್.ಪಿ.ಪ್ರತಾಪ್ ಸಿಂಗ್ ಥೋರಾಟ್, ಗ್ರಾಮಾಂತರ ಪೊಲೀಸ್ ಇನ್ಸ್‍ಪೆಕ್ಟರ್ ಟಿ.ಡಿ.ನಾಗರಾಜ್, ವಿಟ್ಲ ಪೊಲೀಸ್ ಇನ್ಸ್‍ಪೆಕ್ಟರ್ ನಾಗರಾಜ್ ಎಚ್.ಇ. ಹಾಗೂ ಇತರ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.