ಬಂಟ್ವಾಳ : ಶಿವಮೊಗ್ಗದಲ್ಲಿ ಬಂಧನವಾಗಿ ಪೊಲೀಸ್ ವಶದಲ್ಲಿರುವ ಶಂಕಿತ ಉಗ್ರ ಮಾಝ್ ಮುನೀರ್ ಅಹಮ್ಮದ್‌ನನ್ನು ತೀರ್ಥಹಳ್ಳಿಯ ಡಿವೈಐಸ್‌ಪಿ ಶಾಂತವೀರ ನೇತೃತ್ವದ ಪೊಲೀಸ್ ತಂಡ, ಆಗುಂಬೆ ಪಿಎಸ್‌ಐ ಶಿವಕುಮಾರ್ ಸಹಿತ ಹಲವು ಪೊಲೀಸರು ನಾಲ್ಕೈದು ವಾಹನಗಳ ಮೂಲಕ ನಾವೂರಿಗೆ ಕರೆ ತಂದು ಮಹಜರು ನಡೆಸಿದ್ದಾರೆ. ಇದರ ಜೊತೆಗೆ ಶ್ವಾನದಳ, ಬಾಂಬ್ ನಿಷ್ಕ್ರೀಯ ದಳ ಜೊತೆಗಿದ್ದರು.
ನಾವೂರಿನ ಬೋವಿನಪಾಡಿ ನೇತ್ರಾವತಿ ನದಿ ಕುದ್ರು, ನಾವೂರು ಶಾಲಾ ಬಳಿ ಪ್ರದೇಶ ಪೊಲೀಸರು ಆರೋಪಿಯನ್ನು ಕರೆದೊಯ್ದು ಮಹಜರು ನಡೆಸಿದ್ದಾರೆ. ಪ್ರಾರಂಭದಲ್ಲಿ ಪೊಲೀಸ್ ತಂಡವು ಸಿಂತನಿಕಟ್ಟೆ ಪ್ರದೇಶಕ್ಕೆ ಆಗಮಿಸಿದ್ದು ಅಲ್ಲಿ ಅವನು ವಾಸವಾಗಿದ್ದಾನೆಯೇ ಎಂಬ ಮಾಹಿತಿಯನ್ನು ಕಲೆ ಹಾಕಿದರು. ನಾವೂರು ಅಗ್ರಹಾರ ಪ್ರದೇಶದಲ್ಲಿ ಆತನ ಸಂಬಂಧಿಕರ ಮನೆಯಿತ್ತು ಎನ್ನಲಾಗಿದೆ. ನೇತ್ರಾವತಿ ಕುದ್ರು ಪ್ರದೇಶವು ನಿರ್ಜನ ಪ್ರದೇಶವಾಗಿದ್ದು ಈ ಪ್ರದೇಶದಲ್ಲಿ ಯಾರ ಸಂಚಾರವು ಇರದೇ ಇರುವುದರಿಂದ ಈ ಪ್ರದೇಶವನ್ನು ಇವರು ಆಯ್ಕೆ ಮಾಡಿರಬಹುದು ಎಂದು ಸ್ಥಳೀಯರು ಅಭಿಪ್ರಾಯ ಪಟ್ಟಿದ್ದಾರೆ. ಈ ಕುದ್ರು ಪ್ರದೇಶದಲ್ಲಿ ಇವರು ಆವಾಗ ಆವಾಗ ಬಾಂಬ್ ಬ್ಲಾಸ್ಟ್ ಮಾಡುವ ಶಬ್ದ ಇಲ್ಲಿಯ ಸ್ಥಳೀಯರಿಗೆ ಕೇಳಿ ಬರುತ್ತಿತ್ತು ಎಂದು ಹೇಳುತ್ತಿದ್ದಾರೆ. ಆದರೆ ಕೆಲವರು ನದಿಯಲ್ಲಿ ಬಾಂಬ್ ಬ್ಲಾಸ್ಟ್ ಮಾಡುವ ಪರವಾನಿಗೆ ಇಲ್ಲದಿದ್ದರು ಕೂಡ ಕೆಲವೊಂದು ಜನರು ನದಿಯಲ್ಲಿ ಮೀನಿಗಾಗಿ ತೋಟೆ ಹಾಕಿ ಮೀನು ಹಿಡಿಯುತ್ತಿದ್ದರು ಎಂದು ಇಲ್ಲಿನ ಜನರು ಭಾವಿಸುತ್ತಿದ್ದರು. ಈಗ ಉಗ್ರಗಾಮಿಗಳು ಬಾಂಬ್ ತಯಾರಿಕೆ ಮಾಡಿ ಇಲ್ಲಿ ಪ್ರಯೋಗವನ್ನು ಮಾಡಿ ತದ ನಂತರ ಬೇರೆ ಸ್ಥಳಗಳಿಗೆ ಇದನ್ನು ರವಾನೆ ಮಾಡುತ್ತಿದ್ದಾರೆ ಎಂದು ಜನರು ಶಂಕಿಸುತ್ತಿದ್ದಾರೆ. ಇದರ ಹಿಂದೆ ಇಲ್ಲಿಯ ಸ್ಥಳೀಯರು ಕೂಡ ಈ ಕೆಲಸದಲ್ಲಿ ಕೈಜೋಡಿಸಿರಬಹುದೆಂದು ಜನರ ಅಭಿಪ್ರಾಯ. ಈಗಾಗಲೇ ಪ್ರಕರಣವನ್ನು ಕೈಗೆತ್ತಿಕೊಂಡ ಎನ್‌ಐಎ ಮಂಗಳೂರಿಗೆ ಆಗಮಿಸಿ ಅಲ್ಲಿಯ ಕೆಲವು ಶಂಕಿತ ಸ್ಥಳಗಳನ್ನು ತಪಾಸಣೆ ಮಾಡಿ ಬಿ.ಸಿ.ರೋಡಿಗೆ ಆಗಮಿಸಿದ್ದಾರೆ.