ರಕ್ತದಾನ ನಾಲ್ಕು ಮಂದಿಯ ಜೀವ ಉಳಿಸುವ ಮಾದರಿ ಕೆಲಸ- ಪೂಂಜ
ಬಂಟ್ವಾಳ : ಹುಟ್ಟು ಹಬ್ಬವನ್ನು ಅನೇಕ ರೀತಿಯಲ್ಲಿ ಆಚರಿಸುವವರಿದ್ದಾರೆ. ಆದರೆ ಮಾಜಿ ಸಚಿವ ಬಿ.ರಮಾನಾಥ ರೈ ಅವರು ವಿಶಿಷ್ಟ ರೀತಿಯಲ್ಲಿ ರಕ್ತದಾನ ಶಿಬಿರವನ್ನು ಏರ್ಪಡಿಸಿ, ಬಡವರ ಕಣ್ಣೀರು ಒರಸುವಲ್ಲಿ ಮಾದರಿಯಾಗಿದ್ದಾರೆ. ಒಂದು ಕಾಲದಲ್ಲಿ ರಕ್ತದಾನ ಒಬ್ಬರ ಜೀವ ಉಳಿಸುತ್ತದೆ ಎನ್ನುತ್ತಿದ್ದು, ಪ್ರಸ್ತುತ ನಾಲ್ಕು ಮಂದಿಯ ಜೀವಕ್ಕೆ ಪ್ರಯೋಜನ ಆಗುತ್ತಿದೆ. ಇದು ಕೂಡಾ ಸಾಮಾಜಿಕ ಸೇವೆಯಾಗಿದೆ ಎಂದು ಫರಂಗಿಪೇಟೆ ಸೇವಾಂಜಲಿ ಪ್ರತಿಷ್ಠಾನದ ಸಂಚಾಲಕ ಕೆ. ಕೃಷ್ಣಕುಮಾರ್ ಪೂಂಜಾ ಹೇಳಿದರು.
ಅವರು ಸೆ.14ರಂದು ಬಿ.ಸಿ.ರೋಡ್ ರಂಗೋಲಿ ಸಭಾಂಗಣದಲ್ಲಿ ಮಾಜಿ ಸಚಿವ ಬಿ. ರಮಾನಾಥ ರೈ ಅವರ ಹುಟ್ಟು ಹಬ್ಬದ ಅಂಗವಾಗಿ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಮತ್ತು ಯುವ ಕಾಂಗ್ರೆಸ್ ಆಶ್ರಯದಲ್ಲಿ ನಡೆದ ರಕ್ತದಾನ ಶಿಬಿರವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಮಾಜಿ ಸಚಿವ ಬಿ.ರಮಾನಾಥ ರೈ ಅವರು ಕೇಕ್ ಕತ್ತರಿಸುವ ಮೂಲಕ ಹುಟ್ಟು ಹಬ್ಬ ಆಚರಿಸಿಕೊಂಡರು. ಬಳಿಕ ಮಾತನಾಡಿ ನಾನು ಯಾವುದೇ ಕಠಿಣ ಸಂದರ್ಭ ಎದುರಾದರೂ ಪ್ರಾಮಾಣಿಕತೆಯಲ್ಲಿ ರಾಜಿ ಮಾಡಿಕೊಂಡಿಲ್ಲ. ` ಬ್ಯಾಂಕ್ ಅಧ್ಯಕ್ಷನಾಗಿ, ಸಚಿವನಾಗಿ ಎಲ್ಲಾ ಸಂದರ್ಭಗಳಲ್ಲಿ ಬದ್ದತೆಯಿಂದ ಕೆಲಸ ಮಾಡಿದ್ದೇನೆ. ಕಾರ್ಯಕರ್ತರು ನನ್ನ ಹುಟ್ಟು ಹಬ್ಬದ ಅಂಗವಾಗಿ ರಕ್ತದಾನ ಶಿಬಿರ ಹಮ್ಮಿಕೊಂಡಿದ್ದಾರೆ. ಸೆ. 13ರಂದು ನನ್ನ ಜನ್ಮ ದಿನವಾಗಿದ್ದು , ನಿನ್ನೆ ಆಸ್ಕರ್ ಫೆರ್ನಾಂಡಿಸ್ ಅವರ ಪುಣ್ಯ ಸ್ಮರಣೆ ಇದ್ದ ಕಾರಣ ಇಲ್ಲಿರಲು ಸಾಧ್ಯವಾಗಿಲ್ಲ ಎಂದರು.
ಇದೇ ಸಂದರ್ಭ ಬ್ಲಾಕ್ ಕಾರ್ಯಕರ್ತರಿಂದ ರೈಗಳಿಗೆ ಬೃಹತ್ ಗಾತ್ರದ ಮಾಲಾರ್ಪಣೆ, ಬಂಟ್ವಾಳ ಬ್ಲಾಕ್ ಪದಾಧಿಕಾರಿಗಳಿಂದ ಹೂಗುಚ್ಚ ಸಮರ್ಪಣೆ ನಡೆಯಿತು. ಜಿಲ್ಲಾ ಅಲ್ಪ ಸಂಖ್ಯಾತರ ಘಟಕ ಅಧ್ಯಕ್ಷ ಶಾಹುಲ್ ಹಮೀದ್ ಮಾತನಾಡಿ ರೈಗಳು ಒಬ್ಬ ಮುತ್ಸದಿ ಜನಪರ ರಾಜಕಾರಣಿ, ಮಾದರಿ ನೇತಾರ ಎಂದು ಅಭಿನಂದಿಸಿದರು.
ಜಿ.ಪಂ. ಮಾಜಿ ಸದಸ್ಯರಾದ ಚಂದ್ರಪ್ರಕಾಶ ಶೆಟ್ಟಿ ತುಂಬೆ, ಬಿ. ಪದ್ಮಶೇಖರ ಜೈನ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ. ಸುದೀಪ್ ಕುಮಾರ್ ಶೆಟ್ಟಿ, ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೇಬಿ ಕುಂದರ್, ಪಕ್ಷ ಪದಾಧಿಕಾರಿಗಳಾದ ಪಿಯೂಸ್ ಎಲ್. ರೊಡ್ರಿಗಸ್, ನ್ಯಾಯವಾದಿ ಚಂದ್ರಶೇಖರ ಪೂಜಾರಿ, ಚಿತ್ತರಂಜನ್ ಶೆಟ್ಟಿ, ಜಯಂತಿ ವಿ. ಪೂಜಾರಿ, ಅಬ್ಬಾಸ್ ಅಲಿ, ಸಿದ್ದಿಕ್ ಮಂಜೇಶ್ವರ, ಅಲ್ಬರ್ಟ್ ಮಿನೇಜಸ್, ಸುಭಾಶ್ಚಂದ್ರ ಶೆಟ್ಟಿ ಕುಲಾಲು, ಮಧುಸೂದನ್ ಶೆಣೈ ಹನೀಪ್, ಕುಸುಮಾಧರ್, ಜನಾರ್ದನ ಚಂಡ್ತಿಮಾರ್, ಜೆಸಿಂತಾ ಡಿಸೋಜ, ಮಲ್ಲಿಕಾ ವಿ. ಶೆಟ್ಟಿ , ಮತ್ತು ಇತರ ಪ್ರಮುಖರು ಉಪಸ್ಥಿತರಿದ್ದರು.
ಪಾಣೆಮಂಗಳೂರು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹಿಂ ನವಾಜ್ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಗಣೇಶ ಪೂಜಾರಿ ಪೂಂಜರಕೋಡಿ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.