ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ 21ನೇ ವರ್ಷದ ನವದಂಪತಿ ಸಮಾವೇಶ

0

ಬಂಟ್ವಾಳ: ನೂತನವಾಗಿ ಗೃಹಸ್ಥಾಶ್ರಮವನ್ನು ಪ್ರವೇಶಿಸಿದ ದಂಪತಿಗಳಿಗೆ ಆಯೋಜಿಸಿದ ಕಾರ್ಯಕ್ರಮ ನವದಂಪತಿ ಸಮಾವೇಶವು ತಳಿರು ತೋರಣಗಳಿಂದ ಅಲಂಕೃತಗೊಂಡ ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕದ ವೇದವ್ಯಾಸಧ್ಯಾನ ಮಂದಿರದಲ್ಲಿ ನಡೆಯಿತು.
ಹಿರಿಯ ದಂಪತಿ ಕೆ ವಿಠಲ ಶೆಟ್ಟಿ ಹಾಗೂ ಪ್ರೇಮ ಅವರು ನವದಂಪತಿ ಸಮಾವೇಶವನ್ನು ದೀಪಬೆಳಗಿಸಿ ಉದ್ಘಾಟಿಸಿದರು. ತಾವು ವೈವಾಹಿಕ ಜೀವನದಲ್ಲಿ ನಡೆದು ಬಂದ ಜೀವನದ ಅನುಭವವನ್ನು ಹಂಚಿಕೊಳ್ಳುತ್ತಾ ರಾಷ್ಟ್ರದ ಬಗ್ಗೆ ಜಾಗೃತೆಯನ್ನು ಮೂಡಿಸಬೇಕು. ಧರ್ಮವನ್ನು ಬಿಡಬಾರದು. ಮುಂದಿನ ಪೀಳಿಗೆಯನ್ನು ಚೆನ್ನಾಗಿ ಬೆಳೆಸುವಂತಾಗಲಿ ಎಂದು ಶುಭ ಹಾರೈಸಿದರು.

ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್‌ಕಲ್ಲಡ್ಕ ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ 16 ಸಂಸ್ಕಾರದಲ್ಲಿ ಮದುವೆ ಒಂದು ಉತ್ತಮವಾದ ಸಂಸ್ಕಾರ. ಪರಸ್ಪರ ನಂಬಿಕೆ ಮತ್ತುಜೀವನ ನಮ್ಮನ್ನು ಒಂದಾಗಿಸುತ್ತದೆ. ಒಟ್ಟಾಗಿ ಬದುಕುವಂತಹ ಸಾಮರಸ್ಯದ ಜೀವನವೇ ಮದುವೆ ಎಂದು ನುಡಿದರು.

ಕುಟುಂಬ ಪ್ರಭೋದನ್ ಪ್ರಮುಖರಾದ ಗಜಾನನ ಪೈ ಯವರು ಮಾತನಾಡುತ್ತಾ ಎರಡು ಕುಟುಂಬಗಳು ಬೇರೆ ಬೇರೆಯಾಗಿದ್ದರೂ ಅದನ್ನು ಒಟ್ಟಾಗಿ ನಡೆಸಿಕೊಂಡು ಹೋಗುವುದು ಹಾಗೂ ಸಂತತಿಯನ್ನು ಪಡೆದು ಸಂಸ್ಕಾರಯುತವನ್ನಾಗಿ ಬೆಳೆಸುವ ಜವಾಬ್ಧಾರಿ ನಮ್ಮ ಮೇಲಿದೆ ಎಂದು ಮಾರ್ಗದರ್ಶನ ಮಾಡಿದರು.

ತಮ್ಮಕುಟುಂಬವನ್ನು ಚೈತನ್ಯ ಶೀಲವನ್ನಾಗಿ ಮಾಡಲು ಮಾನಸಿಕವಾಗಿ ನಾವು ಸಿದ್ದರಾಗಾಬೇಕು. ಮತ್ತು ಅದನ್ನು ಕಾರ್ಯರೂಪಕ್ಕೆ ತರಬೇಕು. ಆಗ ಮಾತ್ರ ರಾಷ್ಟ್ರವು ಸಮರ್ಥ ಹಾಗೂ ಸದೃಢವಾಗುತ್ತದೆ. ಎಂದು ಸು.ರಾಮಣ್ಣ ನವದಂಪತಿ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಆಗಮಿಸಿದ ಎಲ್ಲಾ ನವದಂಪತಿಗಳಿಗೆ ಮಾತೆಯರು ಕಾಲಿಗೆ ನೀರು ಹಾಕಿ ತೊಳೆದು, ಆರತಿ ಬೆಳಗಿ, ಅರಶಿನ, ಕುಂಕುಮ ಹಚ್ಚಿ ಸ್ವಾಗತಿಸಿದರು. ಎಲ್ಲಾ ನವದಂಪತಿಗಳು ಘೃತಾಹುತಿ ಅರ್ಪಿಸಿ ಶಿಶುಮಂದಿರದ ಗುಹೆಯ ಮೂಲಕ ವೇದಘೋಷದೊಂದಿಗೆ ಸಭಾಂಗಣ ಪ್ರವೇಶಿಸಿದರು.

ಕಾರ್‍ಯಕ್ರಮದಲ್ಲಿ ವಿದ್ಯಾಕೇಂದ್ರದ ಅಧ್ಯಕ್ಷರಾದ ಬಿ. ನಾರಾಯಣ ಸೋಮಯಾಜಿ, ಸಂಚಾಲಕರಾದ ವಸಂತ ಮಾಧವ, ಸಹಸಂಚಾಲಕರಾದ ರಮೇಶ್‌ ಎನ್, ಡಾ.ಕಮಲಾ ಪ್ರಭಾಕರ ಭಟ್,ಎಲ್ಲಾ ವಿಭಾಗದ ಪ್ರಮುಖರು ಹಾಗೂ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.

ಶಿಶುಮಂದಿರದ ಮಾತೆಯರು ಸಮವಸ್ತ್ರ ಧರಿಸಿ ಕಾರ್ಯಕ್ರಮದಲ್ಲಿ ಸ್ವಯಂ ಸೇವಕರಾಗಿ ಕಾರ್‍ಯ ನಿರ್ವಹಿಸಿದರು, ಒಟ್ಟು 104 ಜೋಡಿ ದಂಪತಿಗಳು ಉಪಸ್ಥಿತರಿದ್ದು, ಕಾರ್ಯಕ್ರಮ ಪೂರ್ತಿಭಾಗವಹಿಸಿದ್ದರು. ಪ್ರಮೀಳಾ ಪ್ರಾರ್ಥಿಸಿದರು.  ದಿವ್ಯಾ ಸ್ವಾಗತಿಸಿ, ಸೌಮ್ಯ ವಂದಿಸಿದರು, ಮಂಜುಳಾ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here