ಸೆ.14ರಂದು ಪೆರ್ನೆಯಲ್ಲಿ ಮಾಜಿ ಸಚಿವ ರಮಾನಾಥ ರೈ 71ನೇ ಹುಟ್ಟು ಹಬ್ಬ-ವಿಶಿಷ್ಠ ರೀತಿಯಲ್ಲಿ ಆಚರಣೆ

0

71 ಅಭಿಮಾನಿಗಳಿಂದ ರಕ್ತದಾನ ಸಂಕಲ್ಪ, ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ

ಬಂಟ್ವಾಳ: ಬೆಳ್ಳಿಪ್ಪಾಡಿ ರಮಾನಾಥ ರೈ ಹುಟ್ಟು ಹಬ್ಬ ಅಭಿನಂದನಾ ಸಮಿತಿ, ಯುವ ಕಾಂಗ್ರೆಸ್ ವಿಟ್ಲ-ಉಪ್ಪಿನಂಗಡಿ ಮತ್ತು ಪೆರ್ನೆ-ಬಿಳಿಯೂರು ವಲಯ ಕಾಂಗ್ರೆಸ್ ಜಂಟಿ ಆಶ್ರಯದಲ್ಲಿ ಮಾಜಿ ಸಚಿವ ರಮಾನಾಥ ರೈಯವರ 71ನೇ ಹುಟ್ಟು ಹಬ್ಬವನ್ನು ವಿಶಿಷ್ಠ ರೀತಿಯಲ್ಲಿ ಆಚರಿಸಲು ಮುಂದಾಗಿದೆ. 71ನೇ ಹುಟ್ಟು ಹಬ್ಬದ ಅಂಗವಾಗಿ 71 ಅಭಿಮಾನಿಗಳಿಂದ ರಕ್ತದಾನ ಸಂಕಲ್ಪ ಹಾಗೂ ಸಮಾಜದ ವಿವಿಧ ಕ್ಷೇತ್ರಗಳ 25 ಸಾಧಕರಿಗೆ ಸನ್ಮಾನ ಕಾರ್ಯಕ್ರಮಗಳು ಸೆ.14ರಂದು ಪೆರ್ನೆ ಎ.ಎಂ ಅಡಿಟೋರಿಯಂನಲ್ಲಿ ನಡೆಯಲಿದೆ ಎಂದು ಅಭಿನಂದನಾ ಸಮಿತಿ ಅಧ್ಯಕ್ಷ ಮುರಳೀಧರ ರೈ ಮಠಂತಬೆಟ್ಟು ಹೇಳಿದರು.

ಸೆ.12ರಂದು ಸುದ್ದಿ ಸ್ಟುಡಿಯೋದಲ್ಲಿ ನಡೆಸಿದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಮಾಜಿ ಸಚಿವರು, ದ.ಕ ಜಿಲ್ಲೆಯ ಧೀಮಂತ ನಾಯಕರಾಗಿರುವ ರಮಾನಾಥ ರೈಯವರು ಬೆಳ್ಳಿಪ್ಪಾಡಿಯವರಾಗಿದ್ದರೂ ಅವರು ಹುಟ್ಟಿದ್ದು ಪೆರ್ನೆಯಲ್ಲಿ. ಅವರ ಪ್ರಾಥಮಿಕ ವಿದ್ಯಾಭ್ಯಾಸಗಳು ನಡೆದಿರುವುದು ಪೆರ್ನೆಯಲ್ಲಿ ಹೀಗಾಗಿ ಅವರ 71ನೇ ಹುಟ್ಟು ಹಬ್ಬವನ್ನು ಪೆರ್ನೆಯಲ್ಲಿಯೇ ಆಯೋಜಿಸಿಕೊಳ್ಳಲಾಗಿದೆ. ರಕ್ತದಾನ ಶಿಬಿರವನ್ನು ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿಯವರು ಉದ್ಘಾಟಿಸಲಿದ್ದಾರೆ ಎಂದರು.

ನಂತರ ನಡೆಯುವ ಕಾರ್ಯಕ್ರಮದಲ್ಲಿ ರಮಾನಾಥ ರೈಯವರನ್ನು ಪೆರ್ನೆ ಜಂಕ್ಷನ್‌ನಿಂದ ಮೆರವಣಿಗೆ ಮೂಲಕ ಸಭಾಂಗಣಕ್ಕೆ ಕರೆತರಲಾಗುವುದು. ಸಭಾ ಕಾರ್ಯಕ್ರಮವನ್ನು ಮಾಜಿ ಸಚಿವರು, ಕೆಪಿಸಿಸಿ ಉಪಾಧ್ಯಕ್ಷರಾಗಿರುವ ಮಧು ಬಂಗಾರಪ್ಪರವರು ಉದ್ಘಾಟಿಸಲಿದ್ದಾರೆ. ವಿಧಾನ ಪರಿಷತ್ ಸದಸ್ಯರು, ದ.ಕ ಜಿಲ್ಲಾ ಕಾಂಗ್ರೆಸ್‌ನ ಅಧ್ಯಕ್ಷ ಹರೀಶ್ ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ವೇ.ಮೂ. ಪರ್ನೆ-ಕಳೆಂಜ ಶಂಕರಾಯರಪಾಲು ಕೆ.ಕೃಷ್ಣಮೂರ್ತಿ ಕಾರಂತ, ಕೆಮ್ಮಾರ ಸಂಶುಲ್ ಉಲೇಮ ಮೆಮೋರಿಯಲ್ ಕಾಲೇಜಿನ ಪ್ರಾಂಶುಪಾಲ ಎಸ್.ಬಿ ಮಹಮ್ಮದ್ ದಾರಿಮಿ, ಪುತ್ತೂರು ಮಾಯಿದೆ ದೇವುಸ್ ಚರ್ಚ್‌ನ ಧರ್ಮಗುರು ಲಾರೆನ್ಸ್ ಮಸ್ಕರೇಂಞಸ್ ಶುಭಾಶೀರ್ವಾದ ನೀಡಲಿದ್ದಾರೆ. ವಿವಿಧ ಗಣ್ಯರು ಉಪಸ್ಥಿತಿಯಿರುವರು ಎಂದರು.

ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಅಭಿನಂದನಾ ಸಮಿತಿ ಗೌರವಾಧ್ಯಕ್ಷರಾಗಿರುವ ಡಾ.ರಾಜಾರಾಂ ಕೆ.ಬಿ ಮಾತನಾಡಿ, ರಮಾನಾಥ ರೈಯವರದ್ದು ವಿಶಿಷ್ಠ ವ್ಯಕ್ತಿತ್ವ. ಬಡವರ ಪಾಲಿನ ಆಶಾಕಿರಣ. ಜಾತ್ಯಾತೀತ, ಪಕ್ಷಾತೀತವಾಗಿ ಹಾಗೂ ಬ್ರಹ್ಮಶ್ರೀ ನಾರಾಯಣ ಗುರುಗಳ ಆದರ್ಶವನ್ನು ಮೈಗೂಡಿಸಿಗೊಂಡು ಅವರು ದುರ್ಬಲ ವರ್ಗದವರ ಸೇವೆ ಸಲ್ಲಿಸಿದ್ದಾರೆ. ನಮ್ಮದು ವ್ಯಕ್ತಿಯ ಆರಾಧನೆಯಲ್ಲ. ವ್ಯಕ್ತಿತ್ವದ ಆರಾಧನೆ. ಅವರ ವ್ಯಕ್ತಿತ್ವ, ನಾಯಕತ್ವಗುಣ, ಶ್ರೇಷ್ಠತೆಗಳು, ಸಮಾಜ ಸೇವೆಗಳು ಯುವ ಸಮುದಾಯಕ್ಕೆ ಮಾದರಿಯಾಗಿದ್ದು ಅದನ್ನು ಸಾರುವ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಿಕೊಳ್ಳಲಾಗಿದೆ ಎಂದರು.

ಅಭಿನಂದನಾ ಸಮಿತಿ ಪ್ರಧಾನ ಕಾರ್ಯದರ್ಶಿ ಉಮಾನಾಥ ಶೆಟ್ಟಿ ಮಾತನಾಡಿ, ಜಿಲ್ಲೆ ಕಂಡ ಧೀಮಂತ ನಾಯಕರಾಗಿರುವ ರಮಾನಾಥ ರೈಯವರ 71ನೇ ಹುಟ್ಟು ಹಬ್ಬವನ್ನು ವೈಶಿಷ್ಠ್ಯಪೂರ್ಣವಾಗಿ ಆಚರಿಸಲಾಗುತ್ತಿದೆ. ಅವರು ಪ್ರಾಥಮಿಕ ವಿದ್ಯಾಭ್ಯಾಸ ಪಡೆದಿದ್ದ ಪೆರ್ನೆ ಮಜೀದಿಯ ದೋರ್ಮೆ ಶಾಲೆಯ ಅಂದಿನ ಸಹಪಾಠಿಗಳು ಹಾಗೂ ಈಗಿನ ಒಂದನೇ ತರಗತಿಯ ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ಹುಟ್ಟು ಹಬ್ಬದ ಕೇಕ್ ಕತ್ತರಿಸಲಾಗುವುದು. ಅಂದಿನ ಸಹಪಾಠಿಗಳನ್ನು ಈ ಸಂದರ್ಭದಲ್ಲಿ ಗೌರವಿಸಲಾಗುವುದು. ಬಂಟ್ವಾಳದ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ.ತುಕರಾಮ ಪೂಜಾರಿ ಸಹಿತ ಸಮಾಜ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.
ಯುವ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಫಾರೂಕ್ ಪೆರ್ನೆ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here