ಬಂಟ್ವಾಳ: ಸಮಾಜದಲ್ಲಿ ದೇವರ ಮೇಲಿನ ಭಕ್ತಿ ಮತ್ತು ದೇಶಭಕ್ತಿಯೂ ಇದ್ದಾಗ ಸುಸಂಸ್ಕೃತ ಸಮಾಜ ಮತ್ತು ಸುಭಿಕ್ಷ ರಾಷ್ಟ್ರವೂ ನಿರ್ಮಾಣವಾಗುತ್ತದೆ ಎಂದು ಕಟೀಲು ಕ್ಷೇತ್ರದ ಅನುವಂಶಿಕ ಅರ್ಚಕ ಕಮಲಾದೇವಿ ಪ್ರಸಾದ ಅಸ್ರಣ್ಣ ಹೇಳಿದ್ದಾರೆ.
ಇಲ್ಲಿನ ಅಜ್ಜಿಬೆಟ್ಟು ಗ್ರಾಮದ ಕಾಪು ಶ್ರೀ ಉಮಾಮಹೇಶ್ವರ ದೇವಸ್ಥಾನ ಪುನರ್ ನಿರ್ಮಾಣದ ವಿಜ್ಞಾಪನಾಪತ್ರ ಭಾನುವಾರ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ಕ್ಷೇತ್ರದ ತಂತ್ರಿ ಶ್ರೀಪಾದ ಪಾಂಗಣ್ಣಾಯ ಮಾತನಾಡಿ, ದೇವಾಲಯ ಪುನರ್ ನಿರ್ಮಾಣಗೊಂಡಾಗ ಗ್ರಾಮದ ಸಕಲ ದೋಷ ನಿವಾರಣೆಯಾಗುತ್ತದೆ ಎಂದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸುಕೃತೀಂದ್ರ ವಿಷ್ಣು ತೀರ್ಥ ಪ್ರಭು ಮಾವಿನಕಟ್ಟೆ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಂ.ತುಂಗಪ್ಪ ಬಂಗೇರ, ಚೆನ್ನೈತ್ತೋಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾರತಿ ರಾಜೇಂದ್ರ, ಅಜ್ಜಿಬೆಟ್ಟು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪ್ರಕಾಶ್ ಬಂಗೇರ ಕಲ್ಲು ಕೊಡಂಗೆ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಅಮ್ಮು ರೈ ಹರ್ಕಾಡಿ, ಆಡಳಿತ ಸಮಿತಿ ಅಧ್ಯಕ್ಷ ಪ್ರಕಾಶ್ ಆಳ್ವ ವಾಂಬೆಟ್ಟು, ಅರ್ಚಕ ಪ್ರಸನ್ನ ಕಕೃಣ್ಣಾಯ ಮತ್ತಿತರರು ಇದ್ದರು. ಸಮಿತಿ ಪ್ರಧಾನ ಕಾರ್ಯದರ್ಶಿ ಯೋಗೀಶ್ ಕಲಸಡ್ಕ ಸ್ವಾಗತಿಸಿ, ಶಿಕ್ಷಕ ಚಂದಪ್ಪ ಪೂಜಾರಿ ವಂದಿಸಿದರು. ಜತೆ ಕಾರ್ಯದರ್ಶಿ ಉದಯ ಕುಮಾರ್ ಶೆಟ್ಟಿ ಮೇಲ್ಮನೆ ಕಾರ್ಯಕ್ರಮ ನಿರೂಪಿಸಿದರು.