ಬಂಟ್ವಾಳ: ಇಲ್ಲಿನ ಕುಲಾಲ ಸುಧಾರಕ ಸಂಘದ ವತಿಯಿಂದ ಬಿ.ಸಿ.ರೋಡು ಸಮೀಪದ ಪೊಸಳ್ಳಿ ಎಂಬಲ್ಲಿ ಕುಲಾಲ ಸಮುದಾಯ ಭವನದ ಮೇಲಂತಸ್ತಿನ ಕಟ್ಟಡ ಕಾಮಗಾರಿಗೆ ಸೆ. 4ರಂದು ಬೆಳಿಗ್ಗೆ ಗಂಟೆ 10.30ಕ್ಕೆ ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಸಮಾಜ ಕಲ್ಯಾಣ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಚಾಲನೆ ನೀಡಲಿದ್ದಾರೆ ಎಂದು ಸಂಘದ ಅಧ್ಯಕ್ಷ ನಾರಾಯಣ್ ಸಿ. ಪೆರ್ನೆ ಬಿ.ಸಿ.ರೋಡಿನಲ್ಲಿ ಆ.30ರಂದು ಸಂಜೆ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮಾಣಿಲ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಶಾಸಕ ರಾಜೇಶ್ ನಾಯಕ್ ಉಳಿಪಾಡಿಗುತ್ತು, ವಿಧಾನ ಪರಿಷತ್ ಸದಸ್ಯ ಬಿ.ಮಂಜುನಾಥ ಭಂಡಾರಿ, ಮಾಜಿ ಸಚಿವ ಬಿ. ರಮಾನಾಥ ರೈ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ.
ಕಟ್ಟಡ ಸಮಿತಿ ಅಧ್ಯಕ್ಷ ಸುರೇಶ್ ಕುಮಾರ್ ನಾವೂರು ಮಾತನಾಡಿ, ಕಳೆದ 1978ರಲ್ಲಿ ಆರಂಭಗೊಂಡ ಕುಲಾಲ ಸಂಘವು ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುತ್ತಿದೆ. ಇದೀಗ ರೂ 2.5 ಕೋಟಿ ವೆಚ್ಚದಲ್ಲಿ ಮೇಲಂತಸ್ತಿನ ಕಟ್ಟಡ ನಿರ್ಮಿಸಲು ಸಂಘ ಯೋಜನೆ ರೂಪಿಸಿದೆ ಎಂದರು.
ಸುದ್ದಿಗೋಷ್ಟಿಯಲ್ಲಿ ಸಂಘದ ಉಪಾಧ್ಯಕ್ಷ ಸುಂದರ ಬಿ., ಪ್ರಮುಖರಾದ ಲಕ್ಷ್ಮಣ ಕುಲಾಲ್ ಅಗ್ರಬೈಲು, ಸತೀಶ್ ಬಿ. ಕುಲಾಲ್, ಸುಕುಮಾರ್ ಬಂಟ್ವಾಳ, ಮಹಿಳಾ ಘಟಕ ಅಧ್ಯಕ್ಷೆ ಸುಶೀಲಾ ಲಿಂಗಪ್ಪ, ಮಚ್ಚೇಂದ್ರ ಸಾಲ್ಯಾನ್, ಮನೋಹರ ನೇರಂಬೋಳ್, ದಯಾನಂದ ನೇರಂಬೋಳ್ ಇದ್ದರು.