ಸುರತ್ಕಲ್‌ನ ರಾಷ್ಟ್ರಭಕ್ತ ನಾಗರಿಕ ವೇದಿಕೆಯಿಂದ ನಿವೃತ್ತ ಯೋಧರಿಗೆ ಆರ್ಥಿಕ ನೆರವು

0

ಪುತ್ತೂರು: ಸಂಕಷ್ಟದಲ್ಲಿರುವ ನಿವೃತ್ತ ಯೋಧರಿಗೆ ನೆರವಾಗುವುದು ಹಾಗೂ ವಿದ್ಯಾರ್ಥಿಗಳಲ್ಲಿ ಸೈನ್ಯ ಸೇವೆಯ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಳೆದ 7 ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬಂದಿರುವ ಮಂಗಳೂರು ಸುರತ್ಕಲ್‌ನ ರಾಷ್ಟ್ರಭಕ್ತ ನಾಗರಿಕ ವೇದಿಕೆಯ ವತಿಯಿಂದ ಮಾಜಿ ಸೈನಿಕರ ಸಂಘದ ಆಶ್ರಯದಲ್ಲಿ ಆ.23ರಂದು ಮಾಜಿ ಸೈನಿಕರ ಸಂಘದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎರಡು ಮಂದಿ ನಿವೃತ್ತ ಯೋಧರ ಕುಟುಂಬಗಳಿಗೆ ಆರ್ಥಿಕ ನೆರವು ನೀಡಿದರು.

ಎರಡನೇ ಮಹಾಯುದ್ಧದಲ್ಲಿ ಹೋರಾಡಿದ್ದ ಯೋಧ ವಿಟ್ಲ ಚಂದಳಿಕೆ ದಿ. ಮುತ್ತಪ್ಪ ಮೂಲ್ಯ ಪತ್ನಿ ಸ್ವರ್ಣಲತಾ ಹಾಗೂ ನಿವೃತ್ತ ಹವಾಲ್ದಾರ್ ಕಡಬ ನೂಜಿಬಾಳ್ತಿಲ ಯಹನನ್‌ ಪತ್ನಿ ಅಣ್ಣಮ್ಮರವರಿಗೆ ತಲಾ ರೂ.25,000ಗಳ ಆರ್ಥಿಕ ನೆರವಿನ ಚೆಕ್‌ನ್ನು ವಿತರಿಸಿಲಾಯಿತು.

ಚೆಕ್ ವಿತರಿಸಿದ ಸುರತ್ಕಲ್ ರಾಷ್ಟ್ರಭಕ್ತ ವೇದಿಕೆಯ ಅಧ್ಯಕ್ಷ ಸತ್ಯಜಿತ್ ಸುರತ್ಕಲ್ ಮಾತನಾಡಿ, ಸೈನಿಕರು ಜೀವನದ ಅಮೂಲ್ಯ ಸಮಯಗಳನ್ನು ನಮಗಾಗಿ ತ್ಯಾಗ ಮಾಡುತ್ತಾರೆ. ಅಂತಹ ಸೈನಿಕರ ಜೀವನದ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮುಡಿಸುವುದು. ಸೈನಿಕ ಹೋರಾಟದ ಪುಸ್ತಕಗಳನ್ನು ಹೊರತರುವುದು ಅದರ ಆಧಾರದಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸುವುದು ಹಾಗೂ ಆರ್ಥಿಕ ಸಂಕಷ್ಟದಲ್ಲಿರುವ ಸೈನಿಕ ಕುಟುಂಬಗಳನ್ನು ಗುರುತಿಸಿ ನೆರವಾಗುವುದುದೇ ನಮ್ಮ ಧ್ಯೇಯವಾಗಿದೆ ಎಂದರು. ಪ್ರತಿ ಮನೆಗಳಲ್ಲಿ ಸೈನಿಕರ ಕ್ಷೇಮಕ್ಕಾಗಿ ಪ್ರಾರ್ಥಿಸುವುದು ಹಾಗೂ ಸೈನಿಕರ ಕುಟುಂಬಗಳ ಕಲ್ಯಾಣಕ್ಕಾಗಿ ದೇಣಿಗೆ ನೀಡಲು ಹುಂಡಿಯನ್ನು ಪ್ರಾರಂಭಿಸಬೇಕಾಗಿದೆ ಎಂದರು.

ರಾಷ್ಟ್ರಭಕ್ತ ನಾಗರಿಕ ವೇದಿಕೆಯ ಗೌರವ ಸಲಹೆಗಾರ, ನಿವೃತ್ತ ಯೋಧ ಶ್ರೀಕಾಂತ್ ಶೆಟ್ಟಿ ಬಾಳ ಮಾತನಾಡಿ, ನಮ್ಮ ವೇದಿಕೆಯ ವತಿಯಿಂದ ಕಳೆದ ಏಳು ವರ್ಷಗಳಿಂದ ರೂ.19.50ಲಕ್ಷ ಮೊತ್ತದ ಆರ್ಥಿಕ ನೆರವುಗಳನ್ನು ಸಂಕಷ್ಟದಲ್ಲಿರುವ ಸೈನಿಕ ಕುಟುಂಬಗಳಿಗೆ ನೀಡಲಾಗಿದೆ ಎಂದರು.

ಟ್ರಸ್ಟ್‌ನ ಅಧ್ಯಕ್ಷ ಜೋ.ಡಿ’ಸೋಜ ಸಂದರ್ಭೋಚಿತವಾಗಿ ಮಾತನಾಡಿದರು. ಮಾಜಿ ಸೈನಿಕರ ಸಂಘದ ಅಧ್ಯಕ್ಷ ರಾಮಚಂದ್ರ ಪುಚ್ಚೇರಿ ಸ್ವಾಗತಿಸಿ,ರಾಷ್ಟ್ರಭಕ್ತ ನಾಗರಿಕ ವೇದಿಕೆಯ ಮಂಗಳೂರು ವಲಯಾಧ್ಯಕ್ಷ ಗುರುಚಂದ್ರ ಹೆಗ್ಡೆ ವಂದಿಸಿದರು. ರಾಷ್ಟ್ರಭಕ್ತ ನಾಗರಿಕ ವೇದಿಕೆಯ ಸದಸ್ಯರಾದ ಹರೀಶ್, ಅಣ್ಣಪ್ಪ, ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳು, ಸದಸ್ಯರು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here