ಬಂಟ್ವಾಳ: ಸರ್ಕಾರಿ ಪಾಲಿಟೆಕ್ನಿಕ್ ಬಂಟ್ವಾಳದ ರಾಷ್ಟ್ರೀಯ ಸೇವಾ ಯೋಜನೆ (ಎನ್ನೆಸ್ಸೆಸ್ ) ಹಾಗೂ ಯೂತ್ ರೆಡ್ಕ್ರಾಸ್ ಘಟಕದ ವತಿಯಿಂದ, ಕೆ.ಎಂ.ಸಿ ಆಸ್ಪತ್ರೆ, ಅತ್ತಾವರ, ಮಂಗಳೂರು ಹಾಗೂ ಲಯನ್ಸ್ ಕ್ಲಬ್ ಬಂಟ್ವಾಳ ಇವರ ಸಹಯೋಗದಲ್ಲಿ ಸಂಸ್ಥೆಯ ಆವರಣದಲ್ಲಿ ರಕ್ತದಾನ ಮತ್ತು ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಯಿತು.
ಲಯನ್ಸ್ ಕ್ಲಬ್ ಬಂಟ್ವಾಳ ಇದರ ಅಧ್ಯಕ್ಷರಾದ ಚಿತ್ರಾ ಜೆ ಯಡಪಡಿತ್ತಾಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ರಕ್ತದಾನವು ಅಮೂಲ್ಯವಾದ ಮಾನವೀಯ ಸೇವೆಯಾಗಿದ್ದು, ಒಬ್ಬ ವ್ಯಕ್ತಿ ನೀಡುವ ರಕ್ತವು ಅಗತ್ಯವಿರುವ ಹಲವಾರು ಜೀವಗಳನ್ನು ಉಳಿಸಲು ಸಹಕಾರಿಯಾಗುತ್ತದೆ. ಯುವಜನರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡುವ ಮೂಲಕ ಸಮಾಜಕ್ಕೆ ಅಮೂಲ್ಯ ಕೊಡುಗೆ ನೀಡಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ನರಸಿಂಹ ಭಟ್ ಹೆಚ್, ರಕ್ತದಾನವು ಅತ್ಯಂತ ಮಹತ್ವದ ಸೇವೆಯಾಗಿದ್ದು, ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಚಟುವಟಿಕೆಗಳ ಜೊತೆಗೆ ಸಾಮಾಜಿಕ ಜವಾಬ್ದಾರಿಯನ್ನೂ ಬೆಳೆಸಿಕೊಳ್ಳಬೇಕು ಹಾಗೂ ಇಂತಹ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಹೇಳಿದರು. ಅಲ್ಲದೆ, ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಅಗತ್ಯವೆಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಬಂಟ್ವಾಳ ಇದರ ಸೇವಾ ಸಂಯೋಜಕರಾದ ಉಮೇಶ್ ಆಚಾರ್ಯ , ಖಜಾಂಚಿ ಸುಮಾ ಸುನಿಲ್ , ಕೆಎಂಸಿ ಆಸ್ಪತ್ರೆಯ ರಕ್ತನಿಧಿ ವೈದ್ಯಾಧಿಕಾರಿಗಳಾದ ಡಾ. ವಿಧುಶ್ರೀ , ಡಾ . ತರುಣ್ , ಸಂಸ್ಥೆಯ ವಿದಾರ್ಥಿ ಕ್ಷೇಮಾಧಿಕಾರಿಗಳಾದ ಭಗವಾನ್ ಪ್ರಸಾದ್ , ಕಚೇರಿ ಅಧೀಕ್ಷಕರಾದ ಸುಧಾಕರ್ ಸಿ.ಎಸ್, ಸಿವಿಲ್ ವಿಭಾಗ ಮುಖ್ಯಸ್ಥರಾದ ಮೋಹನ್ ರಾಜ್ ಜಿ.ಎಸ್, ಎನ್ನೆಸ್ಸೆಸ್ ಮತ್ತು ರೆಡ್ ಕ್ರಾಸ್ ಘಟಕದ ಕಾರ್ಯಕ್ರಮಾಧಿಕಾರಿಯಾದ ಭಾಸ್ಕರ್ ಎಲ್ ಮುಂತಾದವರು ಉಪಸ್ಥಿತರಿದ್ದರು.
ಶಿಬಿರದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಯವರು ಉತ್ಸಾಹದಿಂದ ಭಾಗವಹಿಸಿ ರಕ್ತದಾನ ಮಾಡಿದರು. ಇದೇ ಸಂದರ್ಭದಲ್ಲಿ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿಯವರಿಂದ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯವರಿಗೆ ವಿವಿಧ ಆರೋಗ್ಯ ತಪಾಸಣೆ ಮತ್ತು ವೈದ್ಯಕೀಯ ಸಲಹೆಗಳನ್ನು ನೀಡಲಾಯಿತು. ಶಿಬಿರದ ಯಶಸ್ವಿ ಆಯೋಜನೆಗೆ ಕೆಎಂಸಿ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ, ಲಯನ್ಸ್ ಕ್ಲಬ್ ಬಂಟ್ವಾಳ, ಸಂಸ್ಥೆಯ ಎನ್ನೆಸ್ಸೆಸ್ ಸ್ವಯಂಸೇವಕರು, ಭಾರತೀಯ ಯುವ ರೆಡ್ಕ್ರಾಸ್ ಘಟಕ, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಯವರು ಸಹಕರಿಸಿದರು. ಕಾರ್ಯಕ್ರಮವನ್ನು ಉಪನ್ಯಾಸಕ ರಿತೇಶ್ ವಿ.ಎ ನಿರೂಪಿಸಿದರು. ಭಾಸ್ಕರ ಎಲ್ ಸ್ವಾಗತಿಸಿ, ಅಶ್ವಿನಿ ರೈ ವಂದಿಸಿದರು.








